ಬ್ಲೇಝ್-ಮಗನೊಬ್ಬನ ಅಗ್ನಿದಿವ್ಯ ಕನ್ನಡಕ್ಕೊಂದು ಅಪೂರ್ವ ಕಥನ

ಪುಸ್ತಕದ ಮುಖಪುಟ
ಪುಸ್ತಕದ ಮುಖಪುಟ
Published on

ದಿವ್ಯಾಂಶ ಆತ್ಮನ್, ಬಲು ಚಿಕ್ಕವಯಸ್ಸಿನಲ್ಲೇ ಪತ್ರ ಬರೆಯುತ್ತ, ತನ್ನ ಭಾವನೆಗಳನ್ನು ಕವನಗಳಲ್ಲಿ ಅಭಿವ್ಯಕ್ತಿಗೊಳಿಸುತ್ತಿರುತ್ತಾನೆ. ಇವನಿಗೆ ಲುಕೇಮಿಯಾ ರೋಗ ತಗುಲಿದ್ದು ಆತನ ಹನ್ನೆರಡನೆಯ ವಯಸ್ಸಿನಲ್ಲಿ. ರೋಗ ಪತ್ತೆಯಾದಾಗ ಮುಂಬಯಿಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ದಂಪತಿಗಳು ಕೊಡಿಸುತ್ತಾರೆ. ಮುಂದೆ ವೈದ್ಯರ ಸಲಹೆಯಂತೆ ಜೇರುಸಲೇಮ್ಲ್ಲಿ ಹಲವು ತಿಂಗಳುಗಳ ಕಾಲ ಚಿಕಿತ್ಸೆ ನಡೆಯುತ್ತದೆ. ಅಲ್ಲಿಯ ವೈದ್ಯರ ಸಲಹೆಯಂತೆ ಮರಳಿ ಮುಂಬಯಿಗೆ ಬರುತ್ತಾರೆ. ದಿವ್ಯಾಂಶ್ ಆತ್ಮನ್ ತನ್ನ ವಿದ್ಯಾಭ್ಯಾಸವನ್ನು ಬಿಡುವುದಿಲ್ಲ. ರೋಗ ಅವನನ್ನು ಹಿಂಸಿಸುತ್ತಿದ್ದರೂ ಅದರ ವಿರುದ್ಧ ಸಾತ್ವಿಕವಾಗಿಯೇ ಹೋರಾಡುತ್ತಾನೆ. ಮುಂದೆ ಅಮೆರಿಕೆಯಲ್ಲೂ ಚಿಕಿತ್ಸೆ ಮುಂದುವರಿಯುತ್ತದೆ. ಹಲವು ತಿಂಗಳುಗಳ ಕಾಲ ದಂಪತಿಗಳು ಸಂಕಷ್ಟಗಳ ಸುರಿಮಳೆಯಲ್ಲಿ ಬೇಯುತ್ತಾರೆ. ಈ ನಡುವೆ ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರ್ ವಿದ್ಯಾಭ್ಯಾಸಕ್ಕೆ ಸ್ವಸಾಮರ್ಥ್ಯದಿಂದ ಪ್ರವೇಶ ಪಡೆಯುತ್ತಾನೆ. ಅಲ್ಲಿ ದಿವ್ಯಾಂಶ್ ತನ್ನ ಪ್ರತಿಭೆಯನ್ನು ಪ್ರಕಟಪಡಿಸುತ್ತಾನೆ. ಆದರೆ, ಕ್ಯಾನ್ಸರ್ ಅವನನ್ನು ನಿಷ್ಕಿ›ಯಗೊಳಿಸುತ್ತ ಹೋಗುತ್ತದೆ. ಅನಿವಾರ್ಯವಾಗಿ ಮರಳಿ ಮುಂಬಯಿಗೆ ಹಿಂತಿರುಗುತ್ತಾರೆ. ನಿಧಿ ಪೋದ್ದಾರ್, ಸುಶೀಲ್ ಪೋದ್ದಾರ್ ತಮ್ಮ ಮನೆಯ ಅತಿಥಿ ಕೊಠಡಿಯನ್ನು ದಿವ್ಯಾಂಶ್ ಆತ್ಮನ್ ಉಳಿಯಲು ವ್ಯವಸ್ಥೆಗೊಳಿಸುತ್ತಾರೆ. ಅವನ ಶುಶ್ರೂಷೆಗೆ ಐವರು ಸಹಾಯಕರನ್ನು ನೇಮಿಸಿಕೊಳ್ಳುತ್ತಾರೆ. ಆದರೆ, ದಿವ್ಯಾಂಶ್ 2019ರ ಮೇ 2ರಂದು ತನ್ನ ದೇಹವನ್ನು ವಿಸರ್ಜಿಸುತ್ತಾನೆ. ಅವನು ಹತ್ತು ವರ್ಷಗಳ ಕಾಲ ಕ್ಯಾನ್ಸರ್ ರೋಗವನ್ನು ಎದುರಿಸುತ್ತ, ಕವನ ಮತ್ತು ಪತ್ರಗಳನ್ನು ಬರೆಯುತ್ತ ದಿವ್ಯಾನುಭೂತಿಯಲ್ಲಿ ತನ್ನ ಸಾರ್ಥಕ ಬದುಕನ್ನು ಜಗತ್ತಿಗೆ ತೋರಿಸುತ್ತಾನೆ.

ಈ ಕೃತಿಯಲ್ಲಿ ದಿವ್ಯಾಂಶನ ವಿಶಿಷ್ಟ ವ್ಯಕ್ತಿತ್ವ, ತಾಯಿಯ ಅಖಂಡ ಮಾತೃಪ್ರೇಮ, ತಂದೆಯ ಮೌನಕ್ರಿಯೆ, ತಂಗಿ ಅನನ್ಯಾಳ ಭ್ರಾತೃಪ್ರೇಮ-ಹೆಪ್ಪುಗಟ್ಟಿ ಕೂತಿರುವುದನ್ನು ಓದುಗರು ಪುಟಪುಟದಲ್ಲೂ ಕಾಣಬಹುದು. ಇದು ದಿವ್ಯಾಂಶನ ಕಥನವೇನೋ ಸರಿ; ನಿಧಿ ಪೋದ್ದಾರ್ ಕುಟುಂಬದ ಕಥನವೂ ಹೌದು! ಇಲ್ಲಿ ನಿಧಿ ಪೋದ್ದಾರ್ ಕುಟುಂಬಕ್ಕೆ ಸೇರಿದವರು ಕಥನದಲ್ಲಿ ಬಂದು ಹೋಗುತ್ತಾರೆ. ಮನಸ್ಸನ್ನು ತಟ್ಟುವ ಹತ್ತಾರು ಪ್ರಸಂಗಗಳು ಬರುತ್ತವೆ. ಬೆಚ್ಚಿಬೀಳಿಸುವ ಘಟನೆಗಳಿಗಂತೂ ಕೊನೆಯಿಲ್ಲ! ಇಡೀ ಕೃತಿಯು ಮೌನದ ಅನುಭೂತಿಯನ್ನು ಸೂಕ್ಷ್ಮವಾಗಿ ಓದುಗರ ಮನಸ್ಸಿನಲ್ಲಿ ಮೂಡಿ ನಿಲ್ಲುತ್ತದೆ! ಇದು ದಿವ್ಯಾಂಶನ ಜೀವನ ಕಥನವಾಗಿಯೂ ಸೂಕ್ಷ್ಮವಾಗಿ ನೋಡಿದರೆ ಕಾದಂಬರಿಯಂತೆಯೂ ನಮಗೆ ಕಾಣಿಸುತ್ತದೆ. ಇದು ಇಂಗ್ಲಿಷ್​ನಿಂದ ಕನ್ನಡಕ್ಕೆ ಅವತರಿಸಿದೆ. ಎಂ.ಸಿ. ಪ್ರಕಾಶ್ ಅವರು ಕನ್ನಡದ ಕೃತಿಯೆಂಬಂತೆ ಅನುವಾದಿಸಿ

ಕೊಟ್ಟಿದ್ದಾರೆ. ಅವರ ಅನುವಾದದ ಚೆಲುವು, ಪುಟಪುಟಗಳಲ್ಲಿಯೂ ಓದುಗರ ಮನಸ್ಸನ್ನು, ಅವರ ಭಾವನೆಗಳನ್ನು ಹಿಡಿದಿಟ್ಟು ಓದಿಸುತ್ತದೆ. ನಿಧಿ ಪೋದ್ದಾರ್ ಅವರು ಒಂದು ಸುಂದರ ಕಲಾಕೃತಿಯನ್ನು ತಮ್ಮ ಒಡಲಾಳದ ನೂಲಿನಿಂದ ನೇಯ್ದಿದ್ದಾರೆ. ತಾಯಿ-ಮಗನ ಅನುಭೂತಿಯು ಕೃತಿಯ ಗರಿಮೆಯನ್ನು ಹೆಚ್ಚಿಸಿದೆ. ಇದೊಂದು ಕನ್ನಡಕ್ಕೆ ಅನನ್ಯ ಕೃತಿ. ಇಂಥದೊಂದು ಕೃತಿಯನ್ನು ಪ್ರಕಟಿಸಿದ ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಹ್ಮಣ್ಯ ಅವರಿಗೆ ಕನ್ನಡಿಗರು ಹ್ಯಾಟ್ಸಪ್ ಹೇಳಬೇಕು!

-ಪೊ›. ಮಲ್ಲೇಪುರಂ ಜಿ. ವೆಂಕಟೇಶ (ಲೇಖಕರು ವಿಶ್ರಾಂತ ಕುಲಪತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net