ರೈತರ ರಸಗೊಬ್ಬರಕ್ಕೂ ಲಗ್ಗೆ ಇಟ್ಟ ಕಾಳಸಂತೆಕೋರರು!

ಎನ್.ಚಲುವರಾಯಸ್ವಾಮಿ,
ಎನ್.ಚಲುವರಾಯಸ್ವಾಮಿ,
Published on

ಪ್ರಮುಖ ಮುಖ್ಯಾಂಶಗಳು

  • *12.57 ಕೋಟಿ ಬೆಲೆಯ 3014 ಮೆಟ್ರಿಕ್ ಟನ್ ರಸಗೊಬ್ಬರ ಜಪ್ತಿ
  • *ಅಗ್ಗದ ದರದಲ್ಲಿ ಪಡೆದು, ಲಾಭಕ್ಕೆ ಕಾಳ ಸಂತೆಯಲ್ಲಿ ಮಾರಾಟ
  • *ಪೇಯಿಂಟ್, ವಾರ್‌ನಿಷ್, ಗಮ್, ್ಲೇವುಡ್, ೆವಿಕೋಲ್‌ಗೆ ಬಳಕೆ
ಶಿವಾನಂದ ತಗಡೂರು, ಬೆಂಗಳೂರು:
ಸಬ್ಸಿಡಿ ದರದಲ್ಲಿ ಲಭ್ಯವಿರುವ ರಸಗೊಬ್ಬರದ ಮೇಲೆ ಕಣ್ಣಿಟ್ಟಿರುವ ಕಾಳಸಂತೆಕೋರರು, ವಾಮ ಮಾರ್ಗಗಳಿಂದ ಯೂರಿಯಾ ಪಡೆದು ಭಾರಿ ಲಾಭಕ್ಕೆ ಮಾರಾಟ ಮಾಡುತ್ತಿರುವ ಹಗರಣ ರೈತ ಸಮುದಾಯವನ್ನು ಬೆಚ್ಚಿ ಬೀಳಿಸಿದೆ.
ದೇಶದ ಬೆನ್ನೆಲುಬಾಗಿರುವ ರೈತರಿಗೋಸ್ಕರ ಕೇಂದ್ರ ಸರ್ಕಾರ ಭಾರಿ ಸಬ್ಸಿಡಿ ನೀಡಿ ರಾಜ್ಯಗಳಿಗೆ ಸರಬರಾಜು ಮಾಡುತ್ತಿದೆ. ಅಗ್ಗದ ದರದಲ್ಲಿ ಲಭ್ಯವಿರುವ ರಸಗೊಬ್ಬರವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಕಾಳಸಂತೆಕೋರರು, ವರ್ಷದಿಂದ ವರ್ಷಕ್ಕೆ ತಮ್ಮ ನೆಲೆಯನ್ನು ವಿಸ್ತಾರ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಅದಕ್ಕೆ ಪ್ರತಿ ವರ್ಷವೂ ಸಿಕ್ಕಿ ಬೀಳುತ್ತಿರುವ ಪ್ರಕರಣಗಳೇ ಕನ್ನಡಿ ಹಿಡಿದಿವೆ.
ರಸಗೊಬ್ಬರ ಕಳ್ಳ ಮಾಲು ಸರಬರಾಜು ಮಾಡಲು ವಿಶೇಷವಾಗಿ ರಾಜ್ಯವನ್ನೆ ಕೇಂದ್ರವನ್ನಾಗಿ ಮಾಡಿಕೊಂಡು ನೆರೆ ರಾಜ್ಯಗಳಿಗೆ ಕಳುಹಿಸುತ್ತಿರುವುದು ಅಚ್ಚರಿ ತಂದಿದೆ. ಬೆಂಗಳೂರಿನಲ್ಲಿ ಸಿಕ್ಕಿ ಬಿದ್ದ ಅಕ್ರಮ ವಹಿವಾಟು ದಂಧೆಯ ಬೆನ್ನು ಹತ್ತಿ ಹೊರಟ ಸಂದರ್ಭದಲ್ಲಿ ಕಾಳಸಂತೆಕೋರರ ಕರಾಳ ಮುಖವೂ ಆ ಮೂಲಕ ಅನಾವರಣಗೊಂಡಿದೆ.
ಸಣ್ಣ ಪ್ರಮಾಣದಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿದ್ದ ಯೂರಿಯಾ ಹಗರಣ, ರಾಜಧಾನಿ ಹಂತಕ್ಕೂ ದೊಡ್ಡ ಪ್ರಮಾಣದಲ್ಲಿ ಲಗ್ಗೆ ಇಟ್ಟಿರುವ ಬಗ್ಗೆ ತಡವಾಗಿ ಕೃಷಿ ಇಲಾಖೆ ಎಚ್ಚೆತ್ತಿದೆ.
ರಸಗೊಬ್ಬರದಲ್ಲಿ ವಿಶೇಷವಾಗಿ ಯೂರಿಯಾ ಗೊಬ್ಬರಕ್ಕೆ ಭಾರಿ ಡಿಮ್ಯಾಂಡ್. ಪೊಟಾಷಿಯಂ, ಡಿಎಪಿ ಸೇರಿದಂತೆ ಇನ್ನುಳಿದ ಗೊಬ್ಬರಗಳಿಗೆ ಅಷ್ಟೇನು ಬೇಡಿಕೆ ಇಲ್ಲ. ಯೂರಿಯಾಗೆ ಮಾತ್ರವೇ ಡಿಮ್ಯಾಂಡ್.
ಯೂರಿಯಾ ಗೊಬ್ಬರ ಎಲ್ಲಿ ಸಿಗುತ್ತದೆ ಎಂದರೂ ಅರ್ಧ ಹೊತ್ತಿನಲ್ಲಿಯೂ ಅಲ್ಲಿ ಕಾಳಸಂತೆಕೋರರು ಹಾಜರಿದ್ದು ವಾಮ ಮಾರ್ಗದಲ್ಲಿ ಖರೀದಿಸಿ ತಂದು ಸ್ಟಾಕ್ ಮಾಡಿಕೊಳ್ಳುತ್ತಾರೆ. ಬಳಿಕ ಅದನ್ನು ಮೂರ‌್ನಾಲ್ಕು ಪಟ್ಟು ದುಬಾರಿ ದರಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ದಂಧೆ ಎಗ್ಗಿಲ್ಲದೆ ನಿತ್ಯವೂ ನಡೆಯುತ್ತಿದೆ.
ಕಾಳಸಂತೆ ಮೇಲೆ ಕೃಷಿ ಇಲಾಖೆ ಜಾಗೃತ ದಳದ ದಾಳಿ ನಡೆದ ಸಂದರ್ಭದಲ್ಲಿಯೇ ಹಗರಣ ಬೆಳಕಿಗೆ ಬಂದಿದ್ದು, ಕಳೆದ 3 ವರ್ಷದಲ್ಲಿ 12.57 ಕೋಟಿ ರೂ ಮೌಲ್ಯದ 3014 ಮೆಟ್ರಿಕ್ ಟನ್ ರಸಗೊಬ್ಬರ ಜಪ್ತಿ ಮಾಡಲಾಗಿದೆ.
ಯಾಕಿಷ್ಟು ಡಿಮ್ಯಾಂಡ್?
ಯೂರಿಯಾ ರಸಗೊಬ್ಬರಲ್ಲಿ ನೈಟ್ರೋಜನ್ ಅಂಶ ಇದೆ. ಆ ಕಾರಣಕ್ಕಾಗಿಯೇ ಯೂರಿಯಾವನ್ನು ಬಹಳ ಮುಖ್ಯವಾಗಿ ್ಲೇವುಡ್ ಇಂಡಸ್ಟ್ರೀಗೆ ಬಳಕೆ ಮಾಡಲಾಗುತ್ತಿದೆ. ಪೇಯಿಂಟ್, ವಾರ್‌ನಿಷ್, ಗಮ್, ೆವಿಕೋಲ್ ಸೇರಿದಂತೆ ಹಲವು ಉತ್ಪನ್ನಗಳಿಗೆ ಬಳಕೆಯಾಗುತ್ತದೆ. ಹಾಗಾಗಿ ರೈತರಿಗೆ ಸಬ್ಸಡಿ ದರದಲ್ಲಿ ಲಭ್ಯವಿರುವ ರಸಗೊಬ್ಬರವನ್ನು ಪಡೆದು ಕಳ್ಳ ಮಾರ್ಗದಲ್ಲಿ ಈ ದಂಧೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆ ಮೂಲಕ ಕಾಳಸಂತೆಕೋರರು ಭಾರಿ ಲಾಭವನ್ನು ಮಾಡಿಕೊಳ್ಳುತ್ತಿದ್ದಾರೆ.

*ರೈತರಿಗೆ ಸಬ್ಸಿಡಿ ದರದಲ್ಲಿ ನೀಡುವ ಯೂರಿಯಾ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆಗೆ ನೀಡಲಾಗಿದೆ.

-ಎನ್.ಚಲುವರಾಯಸ್ವಾಮಿ, ಕೃಷಿ ಸಚಿವರು.

ಪಶು ಆಹಾರಕ್ಕೂ ಯೂರಿಯಾ:
್ಲೇವುಡ್ ಇಂಡಸ್ಟ್ರೀ ಅಷ್ಟೇ ಅಲ್ಲ, ಪಶು ಆಹಾರ ಉತ್ಪಾದನೆಗೂ ಯೂರಿಯಾ ಬಳಕೆ ಮಾಡಲಾಗುತ್ತಿದೆ. ವೈಜ್ಞಾನಿಕವಾಗಿ ಶೇ.2 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಬಳಕೆ ಮಾಡಬಾರದು ಎನ್ನುವ ನಿಯಮವಿದೆ. ಆದರೆ ಪಶು ಆಹಾರಕ್ಕೆ ಹೆಚ್ಚಿನ ಯೂರಿಯಾ ಬಳಕೆ ಮಾಡುವುದರಿಂದ ಹಸುಗಳಲ್ಲಿ ಹಾಲಿನ ಇಳುವರಿ ಹೆಚ್ಚಾಗಲಿದೆ ಎನ್ನುವ ಕಾರಣಕ್ಕಾಗಿ ಶೇ.5ರಷ್ಟು ತನಕ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಬಳಕೆ ಮಾಡಲಾಗುತ್ತಿದೆ. ಸರ್ಕಾರ ಈ ದಂಧೆ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯವಿದೆ.
ದಂಧೆ ನಡೆಯುವುದು ಹೇಗೆ?
ಸಬ್ಸಡಿ ದರದಲ್ಲಿ ಲಭ್ಯವಿರುವ ರಸಗೊಬ್ಬರ ಕಂಪನಿಯಿಂದೆ ನೇರವಾಗಿ ಸಗಟುದಾರರ ಗೋದಾಮುಗಳಿಗೆ ಸರಬರಾಜಾಗುತ್ತದೆ. ಅಲ್ಲಿಂದ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿರುವ ಚಿಲ್ಲರೆ ಮಾರಾಟದಾರರಿಗೆ ಸರಬರಾಜಾಗುತ್ತದೆ. ಈ ಹಂತದಲ್ಲಿಯೇ ದಂಧೆ ನಡೆಯುವುದು ಹಲವಾರು ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. ಲಾರಿಯಲ್ಲಿ ಬಂದ ಗೊಬ್ಬರ ನಿಜವಾಗಿ ಅನ್‌ಲೋಡ್ ಆಗುವದೇ ಇಲ್ಲ. ಬೇರೆ ಕಡೆಗೆ ಸರಬರಾಗುತ್ತದೆ. ಸರಬರಾಜುದಾರರ ಹಂತದಲ್ಲಿ ವೆಂಕ, ನಾಣಿ, ಸೀನ ಎಂದು ರೈತರ ಹೆಸರು ನಮೂದು ಮಾಡಿ ಗೊಬ್ಬರವನ್ನು ಮಂಗಮಾಯ ಮಾಡಲಾಗುತ್ತದೆ. ಇನ್ನೊಂದೆಡೆ ರೈತರ ಮೂಲಕವೇ ಸ್ವಲ್ಪ ಲಾಭದ ಮೊತ್ತಕ್ಕೆ ಖರೀದಿ ಮಾಡಿಕೊಂಡು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣಗಳು ಇವೆ.
ದುರ್ಬಳಕೆ ತಡೆಯಲು ನೀಮ್:
ಯೂರಿಯಾ ಕಾಳ ಸಂತೆಕೋರರು ರಾಜ್ಯದಲ್ಲಿ ಅಷ್ಟೇ ಅಲ್ಲ, ಇಡೀ ದೇಶದಲ್ಲಿಯೇ ದಂಧೆ ನಡೆಸುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಅನಂತಕುಮಾರ್ ಕೇಂದ್ರದ ರಸಗೊಬ್ಬರ ಸಚಿವರಾಗಿದ್ದ ಸಂದರ್ಭದಲ್ಲಿ ಯೂರಿಯಾಗೆ ಬೇವಿನ ಎಣ್ಣೆ (ನೀಮ್) ಮಿಕ್ಸ್ ಮಾಡುವ ಹೊಸ ಪ್ರಯೋಗ ಮಾಡಿದರು. ಹೀಗಾದರೆ ಕಳ್ಳರು ಸಿಕ್ಕಿಬೀಳುತ್ತಾರೆ ಎನ್ನುವುದು ಲೆಕ್ಕಾಚಾರ. ಆದರೂ ಕಾಳಸಂತೆಕೋರರ ಆರ್ಭಟ ಕಡಿಮೆಯಾಗಿಲ್ಲ.
ತಡವಾಗಿ ಎಚ್ಚೆತ್ತ ಜಾಗೃತ ದಳ:
ರೈತರಿಗೆ ತಲುಪಬೇಕಾದ ಯೂರಿಯಾ ದುರ್ಬಳಕೆ ಆಗುತ್ತಿರುವುದನ್ನು ತಡೆಯಲು ಮತ್ತು ಅಕ್ರಮ ದಾಸ್ತಾನು ಪತ್ತೆ ಹಚ್ಚಲು ತಡವಾಗಿ ಎಚ್ಚೆತ್ತ ಕೃಷಿ ಇಲಾಖೆ ಜಾಗೃತ ದಳ ಹಲವೆಡೆ ದಾಳಿ ನಡೆಸಿದೆ. ಕೆಲವು ಕಡೆಯಲ್ಲಿ ಲಾರಿ ಸಹಿತ ಗೊಬ್ಬರವನ್ನು ಪತ್ತೆ ಮಾಡಿ ವಶಪಡಿಸಿಕೊಂಡಿದೆ. ಕೃಷಿ ಸಚಿವ ಚಲುವರಾಯಸ್ವಾಮಿ ಅವರ ಕಟ್ಟು ನಿಟ್ಟಿನ ಸೂಚನೆ ಬಳಿಕ ರಾಜ್ಯಮಟ್ಟದಲ್ಲಿ ಜಾಗೃತ ದಳ ಇರುವಂತೆಯೇ ಪ್ರತಿ ವಿಭಾಗ ಮಟ್ಟದಲ್ಲಿಯೂ ಜಾಗೃತದಳ ಈಗ ಕ್ರೀಯಾಶೀಲವಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಲಾಗಿದೆ.
ಮುಖ್ಯಾಂಶಗಳು:
*ಕಳೆದ 3 ವರ್ಷದಲ್ಲಿ 12.57 ಕೋಟಿ ರೂ ಮೌಲ್ಯದ 3014 ಮೆಟ್ರಿಕ್ ಟನ್ ಜಪ್ತಿ
* 400 ಪ್ರಕರಣಗಳಲ್ಲಿ ನ್ಯಾಯಾಯದಲ್ಲಿ ಪ್ರಕರಣ ದಾಖಲು
*ಈ ತನಕ ರಸಗೊಬ್ಬರ ಸರಬರಾಜುದಾರರ 87 ಪರವಾನಗಿಗಳ ರದ್ದು
*ರಸಗೊಬ್ಬರ ಸರಬರಾಜುದಾರರ 95 ಪರವಾನಗಿಗಳ ಅಮಾನತ್ತು
*ವರ್ಷಕ್ಕೆ ರಾಜ್ಯಕ್ಕೆ ಸರಬರಾಜಾಗುವ ಗೊಬ್ಬರ 45ಲಕ್ಷ ಮೆಟ್ರಿಕ್ ಟನ್
(50 ಕೆಜಿ ಬ್ಯಾಗ್‌ಗೆ)
*ರೈತರು ಖರೀದಿ ಮಾಡುವ ದರ: ರೂ 265 ರಿಂದ 300 ರೂ
*ಹೊರಗಿನ ಮಾರುಕಟ್ಟೆಯಲ್ಲಿ ಯೂರಿಯಾ ಬೆಲೆ ರೂ 2650
*ಕೇಂದ್ರ ಸರ್ಕಾರ ನೀಡುತ್ತಿರುವ ಸಬ್ಸಿಡಿ : ರೂ 2100

*ಕಾಳಸಂತೆಕೋರರನ್ನ ಮಟ್ಟ ಹಾಕಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜಾಗೃತ ದಳದ ಮೂಲಕ ದಾಳಿ ನಡೆಸಿ ಅಕ್ರಮ ಮಾಲು ವಶಪಡಿಸಿಕೊಳ್ಳಲಾಗುತ್ತಿದೆ. ಪ್ರಕರಣ ದಾಖಲಾದ ಕೂಡಲೇ ಅವರ ಲೈಸೆನ್ಸ್ ಅಮಾನತ್ತು ಮಾಡುವ ಮತ್ತು ರದ್ದು ಮಾಡುವ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದೆ.

-ವೈ.ಎಸ್.ಪಾಟೀಲ್, ಆಯುಕ್ತರು, ಕೃಷಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net