ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾರಿ ಅಕ್ರಮ ಆರೋಪ: ಚುನಾವಣಾ ಆಯೋಗಕ್ಕೆ ಬಿಜೆಪಿ-ಜೆಡಿಎಸ್ ಜಂಟಿ ದೂರು! SIR

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾರಿ ಅಕ್ರಮ ಆರೋಪ: ಚುನಾವಣಾ ಆಯೋಗಕ್ಕೆ ಬಿಜೆಪಿ-ಜೆಡಿಎಸ್ ಜಂಟಿ ದೂರು! SIR
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾರಿ ಅಕ್ರಮ ಆರೋಪ: ಚುನಾವಣಾ ಆಯೋಗಕ್ಕೆ ಬಿಜೆಪಿ-ಜೆಡಿಎಸ್ ಜಂಟಿ ದೂರು! SIR
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸುತ್ತ ಹೆಣೆದುಕೊಂಡ ಹೈಡ್ರಾಮಾ
  • ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ-ಜೆಡಿಎಸ್ ನಿಯೋಗ
  • ಹಾಲಿ 'SIR' ಪ್ರಕ್ರಿಯೆ ರದ್ದುಗೊಳಿಸಿ ಹೊರರಾಜ್ಯದ ಅಧಿಕಾರಿಗಳ ನೇಮಕಕ್ಕೆ ವಿಪಕ್ಷಗಳ ಆಗ್ರಹ
  • ಬಹುಮತ ಪಡೆಯಲು ಸಂವಿಧಾನ ಬುಡಮೇಲು ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ವಾಗ್ದಾಳಿ
ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿವೆ ಎಂದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಸೋಮವಾರ ಮುಖ್ಯ ಚುನಾವಣಾ ಅಧಿಕಾರಿಗೆ ಜಂಟಿಯಾಗಿ ದೂರು ಸಲ್ಲಿಸಿರುವ ವಿಪಕ್ಷಗಳ ನಾಯಕರು, ಪ್ರಸ್ತುತ ನಡೆಯುತ್ತಿರುವ ಇಡೀ ಪರಿಷ್ಕರಣೆ ಪ್ರಕ್ರಿಯೆಯು ಚುನಾವಣಾ ಆಯೋಗದ ಅಧಿಕೃತ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಯಮಗಳ ಪ್ರಕಾರ ಬೂತ್ ಮಟ್ಟದ ಅಧಿಕಾರಿಗಳು (BLO) ಪ್ರತಿಯೊಬ್ಬರ ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಬೇಕು. ಆದರೆ, ರಾಜ್ಯದ ಹಲವೆಡೆ ನಿಯಮಗಳನ್ನು ಉಲ್ಲಂಘಿಸಿ ಮಸೀದಿಗಳು ಹಾಗೂ ಚೌಲ್ಟ್ರಿಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕವಾಗಿ ಜನರನ್ನು ಸೇರಿಸಿ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ ಎಂದು ಮೈತ್ರಿ ನಾಯಕರು ದೂರಿದ್ದಾರೆ.
ಮತದಾರರ ಪಟ್ಟಿಗೆ ಅನರ್ಹರನ್ನು ಅಡ್ಡದಾರಿಯಲ್ಲಿ ಸೇರಿಸುವ ಸಲುವಾಗಿಯೇ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗುತ್ತಿದ್ದು, ಇದಕ್ಕಾಗಿ ಬಿಎಲ್‌ಒ ಅಧಿಕಾರಿಗಳ ಮೇಲೆ ತೀವ್ರ ರಾಜಕೀಯ ಒತ್ತಡ ಹೇರಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿರುವ ದೂರಿನಲ್ಲಿ ರಾಜ್ಯದ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿರುವ ಲೋಪದೋಷಗಳನ್ನು ಪಟ್ಟಿ ಮಾಡಲಾಗಿದೆ. ಪ್ರಮುಖವಾಗಿ ರಾಮನಗರ, ಯಶವಂತಪುರ, ಜಯನಗರ, ಇಂಡಿ, ಕುಣಿಗಲ್ ಹಾಗೂ ಪಾವಗಡ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಇಂತಹ ಅಕ್ರಮಗಳು ಮುನ್ನೆಲೆಗೆ ಬಂದಿವೆ ಎಂದು ನಿಯೋಗ ತಿಳಿಸಿದೆ. ಈ ಕ್ಷೇತ್ರಗಳಲ್ಲಿ ನಿಯಮಬಾಹಿರವಾಗಿ ಮತದಾರರ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗಳನ್ನು ಮಾಡುತ್ತಿರುವುದಕ್ಕೆ ಸೂಕ್ತ ಸಾಕ್ಷ್ಯಗಳು ಲಭ್ಯವಿವೆ ಎಂದು ನಾಯಕರು ಆಯೋಗದ ಗಮನಕ್ಕೆ ತಂದಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕವಾಗಿ ನಡೆಸಿರುವ ಎಲ್ಲಾ ಎಸ್ಐಆರ್ (SIR) ಪ್ರಕ್ರಿಯೆಗಳನ್ನು ತಕ್ಷಣವೇ ರದ್ದುಗೊಳಿಸಬೇಕು ಹಾಗೂ ಸಂಪೂರ್ಣ ಪಾರದರ್ಶಕತೆಯೊಂದಿಗೆ ಹೊಸದಾಗಿ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ವಿಪಕ್ಷಗಳು ಕಟ್ಟುನಿಟ್ಟಿನ ಮನವಿ ಮಾಡಿವೆ. ಅಲ್ಲದೆ, ಸ್ಥಳೀಯ ಅಧಿಕಾರಿಗಳ ಮೇಲೆ ರಾಜಕೀಯ ಪ್ರಭಾವ ಇರುವುದರಿಂದ ಮುಕ್ತ ಚುನಾವಣಾ ಪ್ರಕ್ರಿಯೆಗಾಗಿ ಅಗತ್ಯವಿದ್ದರೆ ಹೊರರಾಜ್ಯಗಳ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಒತ್ತಾಯಿಸಲಾಗಿದೆ.
ಆಯೋಗಕ್ಕೆ ದೂರು ನೀಡಿದ ಈ ಮೈತ್ರಿಕೂಟದ ಪ್ರಮುಖ ನಿಯೋಗದಲ್ಲಿ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಎಂಎಲ್‌ಸಿ ಸಿ.ಟಿ. ರವಿ ಸೇರಿದಂತೆ ಹಲವು ಹಿರಿಯ ನಾಯಕರು ಉಪಸ್ಥಿತರಿದ್ದರು.

ಸಂವಿಧಾನ ಬುಡಮೇಲು ಮಾಡಲು ಬಿಜೆಪಿ ಹುನ್ನಾರ

ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳಿದ್ದರೆ ಅದನ್ನು ಚುನಾವಣಾ ಆಯೋಗವೇ ನೋಡಿಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿರುವ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್, ಈ ಹಿಂದೆ ಸತ್ತವರ ಹೆಸರಿನಲ್ಲೂ ಬಿಜೆಪಿ ಮತದಾನ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ಒಂದು ಲಕ್ಷ ಮತಗಳ ಲೀಡ್‌ನಲ್ಲಿ ಗೆದ್ದಾಗ ಬಾಂಗ್ಲಾದೇಶದವರು ಇರಲಿಲ್ಲವೇ? ಇವರು ಸಿಎಎ, ಎನ್‌ಆರ್‌ಸಿ ಜಾರಿಗೆ ತಂದರೂ ಒಬ್ಬನೇ ಒಬ್ಬ ಬಾಂಗ್ಲಾದೇಶದವನು ಸಿಕ್ಕಿಲ್ಲ, ಆದರೆ ಪಶ್ಚಿಮ ಬಂಗಾಳದಲ್ಲಿ ಬರೋಬ್ಬರಿ 27 ಲಕ್ಷ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ದೇಶದಲ್ಲಿ 2/3 ಬಹುಮತ ಪಡೆಯಲು ಬಿಜೆಪಿ ಈ 'ಎಸ್ಐಆರ್' ಮೂಲಕ ಸಂವಿಧಾನವನ್ನೇ ಬುಡಮೇಲು ಮಾಡುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದ ಹರಿಪ್ರಸಾದ್, ಸಮುದಾಯ ಭವನ, ಚರ್ಚ್, ಮಸೀದಿ ಹಾಗೂ ದೇವಸ್ಥಾನ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡಲು ಅವಕಾಶವಿದ್ದು, ಇದು ಯಾವುದೇ ಕಾರಣಕ್ಕೂ ಚುನಾವಣಾ ಆಯೋಗದ ಮಾರ್ಗಸೂಚಿಗಳ ಉಲ್ಲಂಘನೆಯಲ್ಲ ಎಂದು ಮೈತ್ರಿ ನಾಯಕರ ದೂರಿಗೆ ಕಡಕ್ ತಿರುಗೇಟು ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net