ಜೈವಿಕ ಉದ್ಯಾನ ಜೀವಿಗಳು ಕೂಲ್​ ಕೂಲ್​! / ANEKAL

ಪಾಲಕ ನೀಡುತ್ತಿರುವ ಕಲ್ಲಂಗಡಿ ಹಣ್ಣು ತಿನ್ನುತ್ತಿರುವ ಜಿರಾಫೆ.
ಪಾಲಕ ನೀಡುತ್ತಿರುವ ಕಲ್ಲಂಗಡಿ ಹಣ್ಣು ತಿನ್ನುತ್ತಿರುವ ಜಿರಾಫೆ.
Published on
ನವೀನ್​ ಶೆಟ್ಟಿ ಕೆರಾಡಿ ಆನೇಕಲ್​
ಬಿಸಿಲ ತಾಪ ಹೆಚ್ಚುತ್ತಿರುವ ಕಾರಣ ಪ್ರತಿವರ್ಷದಂತೆ ಈ ಬಾರಿಯೂ ಬನ್ನೇರುಟ್ಟ ಜೈವಿಕ ಉದ್ಯಾನವನದ ಪ್ರಾಣಿಗಳಿಗೆ ಅಧಿಕಾರಿಗಳು ಐಸ್​ ಕ್ರೀಮ್​ ಹಾಗೂ ಹಣ್ಣುಗಳನ್ನು ನೀಡಿ ಕೂಲ್​ ಕೂಲ್​ ಮಾಡುತ್ತಿದ್ದಾರೆ. ಉದ್ಯಾನವನದ ಆವರಣದಆನೆ, ಜಿರಾಫೆ, ಜೀಬ್ರಾ, ಹಕ್ಕಿಗಳು, ಕೋತಿಗಳು ಹಾಗೂ ಇತರ ಪ್ರಾಣಿಗಳಿಗೆ ಬಿಸಿಲ ತಾಪ ತಣಿಸುವಸಲುವಾಗಿ ಹಣ್ಣುಗಳು, ಐಸ್​ ಕ್ರೀಮ್​ ಮೊರೆ ಹೋಗಲಾಗಿದೆ.
ತೆರೆದ ಪ್ರದೇಶದಲ್ಲಿರುವ ಪ್ರಾಣಿಗಳಿಗೆ ಬಿಸಿಲಿನ ತಾಪದಿಂದ ರಕ್ಷಣೆ ಮಾಡಿಕೊಳ್ಳಲು ಬನ್ನೇರುಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ಲಾಲಿಪಪ್​, ಐಸ್​ ಕ್ಯಾಂಡಿ, ಎಳನೀರು, ಹಣ್ಣು ಹಾಗೂ ತರಕಾರಿಗಳನ್ನು ನೀಡುತ್ತಿದ್ದಾರೆ. ಪ್ರತಿ ಪ್ರಾಣಿಗಳನ್ನು ಉದ್ಯಾನವನದಲ್ಲಿ ಪ್ರತ್ಯೇಕವಾಗಿ ಬಿಡಲಾಗಿದೆ. ಅವುಗಳು ಇರುವಲ್ಲಿಯೇ ಇಷ್ಟವಾಗುವ ಪದಾರ್ಥಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದ್ದು, ಆನೆಗಳಿಗೆ ಇಷ್ಟವಾಗಿರುವ ಕಲ್ಲಂಗಡಿ ಹಣ್ಣನ್ನು ನೀಡಲಾಗುತ್ತಿದೆ. ಜಿರಾಫೆಗೂ ಕಲ್ಲಂಗಡಿ ನೀಡಲಾಗುತ್ತಿದೆ. ನೀರು ಕುದುರೆಗಳಿಗೆ ತಂಪಾದ ಕಲ್ಲಂಗಡಿ ಮತ್ತು ಹಣ್ಣು ನೀಡಲಾಗುತ್ತಿದೆ. ಕರಡಿಗಳಿಗೆ ಮಿಶ್ರ ಹಣ್ಣು ಮತ್ತು ತರಕಾರಿಗಳ ಐಸ್​ ಬ್ಲಾಕ್​ ಮತ್ತು ಎಳನೀರು ನೀಡಲಾಗುತ್ತಿದೆ. ಕೋತಿಗಳಿಗೆ ಹಣ್ಣು ಮತ್ತು ತರಕಾರಿಗಳನ್ನು ಐಸ್​ ಕ್ಯಾಂಡಿಯಂತೆ ಸಿದ್ಧಗೊಳಿಸಿ ನೀಡಲಾಗುತ್ತಿದೆ.
ಜಿರಾಫೆ, ಜೀಬ್ರಾ, ಆನೆಗಳು ತೆರೆದ ಜಾಗದಲ್ಲಿ ಇರುತ್ತವೆ. ಈ ಪ್ರಾಣಿಗಳು ತಂಪು ವಾತಾವರಣ ಬಯಸುವ ಕಾರಣ ಸ್ಪಿಂಕ್ಲರ್​ ಮೂಲಕ ನೀರು ಸಿಂಪಡಿಸಿ ತಣ್ಣಗಿಡಲಾಗುತ್ತಿದೆ. ಜತೆಗೆ ನೆರಳಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬನ್ನೇರುಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ತಿಳಿಸಿದ್ದಾರೆ.
ಇಷ್ಟಪಡುವ ವಾತಾವರಣ ಸೃಷ್ಟಿ : ಬಿಸಿಲಿನಿಂದ ಪ್ರಾಣಿಗಳನ್ನು ರಸಿ ಖುಷಿಯಾಗಿಡಬೇಕೆಂಬ ಉದ್ದೇಶದಿಂದ ನೀರು ಇಷ್ಟ ಆಗುವ ಪ್ರಾಣಿಗಳಿಗೆ ಸಿಂಕ್ಲರ್​ ಮೂಲಕ ಸಿಂಪಡಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಕೆಲ ಪ್ರಾಣಿಗಳು ಕೆಸರಿನಲ್ಲಿ ಆಟ ಆಡಲು ಇಷ್ಟಪಡುವುದರಿಂದ ಅವುಗಳಿಗೆ ಅಂತಹ ಜಾಗದಲ್ಲೇ ಬೇಕಾದ ವ್ಯವಸ್ಥೆ ಮಾಡಲಾಗಿದೆ ಎಂದು ಉದ್ಯಾನವನದ ಅಧಿಕಾರಿ ಐಶ್ವರ್ಯ ತಿಳಿಸಿದ್ದಾರೆ.
ತುಂಟಾಟದ ಜೀವಿಗೆ ಮರದಲ್ಲೇ ವ್ಯವಸ್ಥೆ : ಹೆಚ್ಚು ಓಡಾಟ ಹಾಗೂ ತುಂಟಾಟ ಮಾಡುವ ಪ್ರಾಣಿಗಳಿದ್ದು, ಅವುಗಳಿಗೆ ಮರದಲ್ಲಿ ಐಸ್​ ಕ್ರೀಮ್​ ಹಾಗೂ ಹಣ್ಣು ಮಿಶ್ರಿತ ಆಹಾರಗಳನ್ನು ನೇತು ಹಾಕಲಾಗುತ್ತಿದೆ. ಐಸ್​ ಕ್ರೀಮ್​ ತಿಂದು ತಣ್ಣಗಾದಾಗ ಖುಷಿಪಡುತ್ತಾ ಪ್ರವಾಸಿಗರಿಗೆ ಮತ್ತಷ್ಟು ಮುದನೀಡುತ್ತವೆ.
ಜಿರಾಫೆಗಳ ರಕ್ಷಣೆಗೆ ಒತ್ತು : ಬನ್ನೆರುಟ್ಟ ಜೈವಿಕ ಉದ್ಯಾನವನದಲ್ಲಿ ಆನೆಗಳು ಮರದ ನೆರಳಿನ ಆಶ್ರಯ ಪಡೆಯುತ್ತವೆ. ಹೆಚ್ಚು ಬಿಸಿಲು ಬಂದಾಗ ಸೀಗೆಕಟ್ಟೆ ಬಳಿ ಇರುವ ಕೆರೆಯಲ್ಲಿ ಹೋಗಿ ಈಜಾಡುತ್ತವೆ. ಆದರೆ, ಜಿರಾಫೆ ಮತ್ತು ಪಾರ್ಕ್​ನಲ್ಲಿ ಇರುವ ಕೆಲಪ್ರಾಣಿಗಳಿಗೆ ಬಿಸಿಲಿನ ತಾಪದಿಂದ ರಕ್ಷಣೆ ಮಾಡಿಕೊಳ್ಳುವುದು ತುಂಬಾ ಕಷ್ಟ. ಜಿರಾಫೆ ಸಂಪೂರ್ಣವಾಗಿ ತೆರೆದ ಪ್ರದೇಶದಲ್ಲಿ ಇದ್ದು ಎರಡು ಜಿರಾಫೆಗಳಿಗೂ ಕೂಡ ಹೆಚ್ಚಿನ ರಕ್ಷಣೆಗೆ ಒತ್ತು ನೀಡಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net