ಬಿಲ್ಲಿ ಜೀನ್ ಕಿಂಗ್ ಕಪ್: ನಾಳೆಯಿಂದ ಬೆಂಗಳೂರಿನಲ್ಲಿ ಪ್ಲೇಆಫ್ ಪಂದ್ಯಗಳು

ಬಿಲ್ಲಿ ಜೀನ್ ಕಿಂಗ್ ಕಪ್: ನಾಳೆಯಿಂದ ಬೆಂಗಳೂರಿನಲ್ಲಿ ಪ್ಲೇಆಫ್ ಪಂದ್ಯಗಳು
ಬಿಲ್ಲಿ ಜೀನ್ ಕಿಂಗ್ ಕಪ್: ನಾಳೆಯಿಂದ ಬೆಂಗಳೂರಿನಲ್ಲಿ ಪ್ಲೇಆಫ್ ಪಂದ್ಯಗಳು
Published on
ಬೆಂಗಳೂರು: ಪ್ರತಿಷ್ಠಿತ ಬಿಲ್ಲಿ ಜೀನ್ ಕಿಂಗ್ ಕಪ್ (ಬಿಜೆಕೆ) ಮಹಿಳಾ ಟೆನಿಸ್ ಟೂರ್ನಿಯ ಪ್ಲೇಆಫ್​ ಪಂದ್ಯಗಳು ಶುಕ್ರವಾರ ಆರಂಭವಾಗಲಿವೆ. ಮೊದಲ ಬಾರಿಗೆ ಕ್ವಾಲಿಫೈಯರ್ ಸುತ್ತಿಗೇರುವ ನಿರೀಕ್ಷೆಯಲ್ಲಿರುವ ಆತಿಥೇಯ ಭಾರತ ತಂಡ ಉದ್ಯಾನನಗರಿಯ ಎಸ್.ಎಂ. ಕೃಷ್ಣ ಟೆನಿಸ್ ಕ್ರೀಡಾಂಗಣದ ಹಾರ್ಡ್‌ಕೋರ್ಟ್‌ನಲ್ಲಿ ಭಾನುವಾರದವರೆಗೆ ನಡೆಯಲಿರುವ ಜಿ ಗುಂಪಿನ ಪಂದ್ಯದಲ್ಲಿ ನೆದರ್ಲೆಂಡ್ ಹಾಗೂ ಸ್ಲೊವೇನಿಯಾ ಸವಾಲು ಎದುರಿಸಲಿದೆ.
ಕರ್ನಾಟಕ ಲಾನ್ ಟೆನಿಸ್ ಅಸೋಸಿಯೇಷನ್ (ಕೆಎಸ್‌ಎಲ್‌ಟಿಎ) ಆತಿಥ್ಯದಲ್ಲಿ ಇದೇ ಮೊದಲ ಬಾರಿಗೆ ಬಿಜೆಕೆ ಟೂರ್ನಿಯ ಪ್ಲೇಆಫ್​ ಪಂದ್ಯಗಳು ಭಾರತದಲ್ಲಿ ನಡೆಯಲಿವೆ. ಐದು ವರ್ಷಗಳ ಅಂತರದಲ್ಲಿ ಭಾರತ ತಂಡ ಎರಡನೇ ಬಾರಿಗೆ ಪ್ಲೇಆಫ್​ಗೆ ಅರ್ಹತೆ ಪಡೆದಿದ್ದು, ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಕ್ವಾಲಿಫೈಯರ್ಸ್‌ಗೇರಿ ಇತಿಹಾಸ ನಿರ್ಮಿಸುವ ಗುರಿ ಹೊಂದಿದೆ.
ವಿಶ್ವ ರ‌್ಯಾಂಕಿಂಗ್‌ನಲ್ಲಿ ನೆದರ್ಲೆಂಡ್ ತಂಡ 14ನೇ ಸ್ಥಾನದಲ್ಲಿದ್ದು, ಗುಂಪಿನ ಅತ್ಯುನ್ನತ ಶ್ರೇಯಾಂಕ ಹೊಂದಿರುವ ತಂಡ ಎನಿಸಿದೆ.1968 ಮತ್ತು 1997ರಲ್ಲಿ ರನ್ನರ್ ಅಪ್ ಆಗಿದೆ. 2003ರಲ್ಲಿ ವಿಶ್ವ ಗುಂಪಿನ ಕ್ವಾರ್ಟರ್‌ಫೈನಲ್‌ಗೇರಿದ್ದು ಸ್ಲೊವೇನಿಯಾದ ಅತ್ಯುತ್ತಮ ಸಾಧನೆ. ಭಾರತ ತಂಡ 2021ರಲ್ಲಿ ಫ್ಲೇಆಫ್​ನಲ್ಲಿ ಲಾತ್ವಿಯಾನ ಎದುರು 3-1 ರಿಂದ ಸೋಲು ಅನುಭವಿಸಿತ್ತು.
ಭಾರತ ತಂಡದ ಯಾವುದೇ ಆಟಗಾರ್ತಿ ಸಿಂಗಲ್ಸ್ ವಿಶ್ವ ರ‌್ಯಾಂಕಿಂಗ್‌ನ ಅಗ್ರ 300ರಲ್ಲಿ ಸ್ಥಾನ ಪಡೆದಿಲ್ಲ. ವಿಶ್ವ ನಂ. 309 ಸಹಜ ಯಮಲಪಲ್ಲಿ ಭಾರತದ ನಂ.1 ಎನಿಸಿದ್ದು, ಶ್ರೀವಲ್ಲಿ ಭಮಿಡಿಪತಿ ಟೂರ್ನಿಯಲ್ಲಿ 5-0 ಗೆಲುವಿನ ದಾಖಲೆಯನ್ನು ಹೊಂದಿದ್ದಾರೆ. ಅಂಕಿತಾ ರೈನಾ, ಪ್ರಾರ್ಥನಾ ಥಾಂಬೋರೆ, ರಿಯಾ ಭಾಟಿಯಾ ತಂಡದ ಇತರ ಆಟಗಾರ್ತಿಯರಾಗಿದ್ದು, ವಿಶಾಲ್ ಉಪ್ಪಲ್ ತಂಡದ ಆಡದ ನಾಯಕರಾಗಿದ್ದಾರೆ. ವಿಶ್ವ ನಂ. 87ನೇ ಸ್ಥಾನದಲ್ಲಿರುವ ನೆದರ್ಲೆಂಡ್‌ನ ಸುಜಾನ್ ಲ್ಯಾಮೆನ್ಸ್ ಗುಂಪಿನ ಅಗ್ರ ಶ್ರೇಯಾಂಕಿತೆ ಆಗಿದ್ದಾರೆ.
ಆಟದ ಸ್ವರೂಪ
ಮೂರು ತಂಡಗಳು ರೌಂಡ್-ರಾಬಿನ್ ಮಾದರಿಯಲ್ಲಿ ಪರಸ್ಪರ ಆಡಲಿದ್ದು, ಪ್ರತಿ ಟೈ ಎರಡು ಸಿಂಗಲ್ಸ್ ಮತ್ತು ಡಬಲ್ಸ್ ಪಂದ್ಯವನ್ನು ಒಳಗೊಂಡಿರುತ್ತದೆ. ಗುಂಪಿನ ಅಗ್ರ ತಂಡ 2026ರ ಕ್ವಾಲಿೈಯರ್ಸ್‌ಗೆ ಅರ್ಹತೆ ಪಡೆಯಲಿದೆ. ನಂತರ ಫೈನಲ್‌ಗೇರಲು ಸೆಣಸಲಿದೆ. ಎರಡು, ಮೂರನೇ ಸ್ಥಾನ ಪಡೆಯುವ ತಂಡಗಳು ಮುಂದಿನ ಸೀಸನ್‌ಗೆ ಪ್ರಾದೇಶಿಕ ಗ್ರೂಪ್-1ಗೆ ಹಿಂಬಡ್ತಿ ಪಡೆಯಲಿವೆ.
ವೇಳಾಪಟ್ಟಿ
ನ.14 ಸ್ಲೊವೇನಿಯಾ-ನೆದರ್ಲೆಂಡ್
ನ.15 ಭಾರತ-ಸ್ಲೊವೇನಿಯಾ
ನ.16 ಭಾರತ-ನೆದರ್ಲೆಂಡ್
ಆರಂಭ: ಮಧ್ಯಾಹ್ನ 3
ನೇರಪ್ರಸಾರ: ಡಿಡಿ ಸ್ಪೋರ್ಟ್ಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net