ಹನೂರು: ಏತ ನೀರಾವರಿ ಯೋಜನೆಯನ್ನು ರೂಪಿಸುವಂತೆ ಆಗ್ರಹಿಸಿ ತಾಲೂಕಿನ ವಡಕೆಹಳ್ಳದಲ್ಲಿ ಆಹೋ ರಾತ್ರಿ ಧರಣಿ ಕೈಗೊಂಡಿರುವ ರೈತರು ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮಂಗಳವಾರ ಬೈಕ್ ರ‌್ಯಾಲಿ ನಡೆಸಿದರು.
ರೈತ ಸಂಘ ಹಾಗೂ ದಂಟಳ್ಳಿ ಏತ ನೀರಾವರಿ ಹೋರಾಟ ಸಮಿತಿ ವತಿಯಿಂದ ವಡಕೆಹಳ್ಳದಲ್ಲಿ ರೈತರು ಕಳೆದ 58 ದಿನಗಳಿಂದಲೂ ಆಹೋ ರಾತ್ರಿಧರಣಿ ನಡೆಸುತ್ತಿದ್ದಾರೆ. ಆದರೆ ಬೇಡಿಕೆ ಈವರೆಗೂ ಈಡೇರಿಲ್ಲ. ಇದರಿಂದ ಬೇಸತ್ತ ಮಹಿಳೆಯರು ಸೇರಿದಂತೆ ನೂರಾರು ರೈತರು ತಾಲೂಕಿನ ಮಾರ್ಟಳ್ಳಿ ಸಮೀಪದ ನಾಲ್‌ರೋಡ್‌ನಿಂದ ಧರಣಿ ಸ್ಥಳಕ್ಕೆ ಬೈಕ್ ರ‌್ಯಾಲಿ ಮೂಲಕ ಆಗಮಿಸಿದರು. ಈ ವೇಳೆ ರೈತನೊಬ್ಬ ಅರೆಬೆತ್ತಲೆ ಮೆರವಣಿಗೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಕಿಡಿ ಕಾರಿದರು. ರೈತರು ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
22 ರೈತರಿಂದ ರಕ್ತದಾನ: ಇದೇ ಸಂದರ್ಭದಲ್ಲಿ ವಿಶ್ವ ರೈತ ದಿನಾಚರಣೆ ಅಂಗವಾಗಿ ವಡಕೆಹಳ್ಳದಲ್ಲಿ ಧರಣಿ ನಿರತರಿಂದ ಆಯೋಜಿಸಿದ್ಧ ರಕ್ತದಾನ ಶಿಬಿರದಲ್ಲಿ 22 ರೈತರು ರಕ್ತದಾನ ಮಾಡಿದರು. ಚಾ.ನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರು ಹಾಗೂ ಸಿಬ್ಬಂದಿ ಆಗಮಿಸಿದ್ದರು. ಡಿಎಚ್‌ಒ ಡಾ. ಚಿದಂಬರಂ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ, ಗ್ರಾಮ ಘಟಕದ ಅಧ್ಯಕ್ಷ ಅರ್ಪುದರಾಜ್, ಕೆಆರ್‌ಎಸ್ ಪಕ್ಷದ ಗಿರೀಶ್, ಬಸವರಾಜು, ರೈತ ಮುಖಂಡರಾದ ಮೋಳೆ ರಾಜು, ಮಾರಿಯಾ ಜೇಸೆಫ್, ಸಗಾಯರಾಜ್, ಧರ್ಮರಾಜ್, ಆರೋಗ್ಯಸ್ವಾಮಿ, ಸಗಾಯಮೇರಿ, ಪ್ರೇಮಾ, ಪುಷ್ಪಮೇರಿ ಇತರರು ಇದ್ದರು.