ಧರ್ಮಸ್ಥಳ ಸೌಜನ್ಯಾ ಪ್ರಕರಣದಲ್ಲಿ ಬಿಗ್​ ಟ್ವಿಸ್ಟ್​: ಕುಸುಮಾವತಿ ಅರ್ಜಿಗೆ ಸುಪ್ರೀಂ ಅಸ್ತು; ಪ್ರಕರಣದ ಮರು ತನಿಖೆಗೆ ಸರ್ವೋಚ್ಚ ನ್ಯಾಯಾಲಯ ಆದೇಶ! Supreme Court on Sowjanya Case

ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
Published on

ಪ್ರಮುಖ ಮುಖ್ಯಾಂಶಗಳು

  • ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
  • ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ
  • ಸೌಜನ್ಯಾ ತಾಯಿ ಕುಸುಮಾವತಿ ಸಲ್ಲಿಸಿದ್ದ ಅರ್ಜಿ
  • ಸಿಬಿಐ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್
ನವದೆಹಲಿ: ದಶಕಗಳಿಂದ ರಾಜ್ಯದಲ್ಲಿ ಸುದ್ದಿಯಲ್ಲಿರುವ ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್​​ ದೊರೆತಿದ್ದು, ಪ್ರಕರಣದ ಮರು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ (Supreme Court on Sowjanya Case)​ ಬುಧವಾರ (ಜು.22) ಆದೇಶಿಸಿದೆ.
ಈ ಪ್ರಕರಣದ ಮರು ತನಿಖೆ ಆರಂಭಿಸಬೇಕು ಹಾಗೆಯೇ ಆರೋಪಿ ಸಂತೋಷ್​ ರಾವ್​ ನನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದು ಪಡಿಸಬೇಕೆಂದು ಕೋರಿ ಸೌಜನ್ಯಾ ತಾಯಿ ಕುಸುಮಾವತಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ ನ್ಯಾಯಪೀಠ, ಸಿಬಿಐ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬೇಟಿ ನೀಡದೆ ವರದಿ ಸಲ್ಲಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಸಿಬಿಐ ಅಧಿಕಾರಿಗಳನ್ನು ಸುಪ್ರೀಂ ಕೋರ್ಟ್​ ತರಾಟೆಗೆ ತೆಗೆದುಕೊಂಡಿದೆ.

ಪ್ರಕರಣದ ಹಿನ್ನಲೆ!

ಧರ್ಮಸ್ಥಳದ ಎಸ್‌ಡಿಎಂ (SDM) ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಸೌಜನ್ಯಾ, ಅಕ್ಟೋಬರ್ 9, 2012 ರಂದು ಕಾಲೇಜಿನಿಂದ ಮನೆಗೆ ಹಿಂತಿರುಗುವಾಗ ನಾಪತ್ತೆಯಾಗಿದ್ದಳು. ಮರುದಿನ ಅಂದರೆ ಅಕ್ಟೋಬರ್ 10 ರಂದು ಧರ್ಮಸ್ಥಳದ ನೇತ್ರಾವತಿ ನದಿಯ ಸಮೀಪದ ಅರಣ್ಯ ಪ್ರದೇಶದಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು.
ವೈದ್ಯಕೀಯ ತಪಾಸಣೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿ, ಕ್ರೂರವಾಗಿ ಕೊಲೆ ಮಾಡಲಾಗಿರುವುದು ದೃಢಪಟ್ಟಿತ್ತು. ಈ ಘಟನೆಯು ಇಡೀ ಕರ್ನಾಟಕ ರಾಜ್ಯಾದ್ಯಂತ ಭಾರಿ ಜನಕ್ರೋಶ ಮತ್ತು ಪ್ರತಿಭಟನೆಗಳಿಗೆ ಕಾರಣವಾಯಿತು.
ಪ್ರಕರಣದ ಆರಂಭಿಕ ತನಿಖೆಯನ್ನು ಸ್ಥಳೀಯ ಪೊಲೀಸರು ನಡೆಸಿ, ಸಂತೋಷ್ ರಾವ್ ಎಂಬ ವ್ಯಕ್ತಿಯನ್ನು ಪ್ರಮುಖ ಆರೋಪಿಯನ್ನಾಗಿ ಬಂಧಿಸಿದರು. ಆದರೆ, ಸೌಜನ್ಯಾ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಸ್ಥಳೀಯ ಪೊಲೀಸರ ತನಿಖೆಯ ಮೇಲೆ ಅಪನಂಬಿಕೆ ವ್ಯಕ್ತಪಡಿಸಿ, ನೈಜ ಅಪರಾಧಿಗಳನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿದರು. ಸಾರ್ವಜನಿಕ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಮೊದಲು ಸಿಐಡಿ (CID) ತನಿಖೆಗೆ ಮತ್ತು ನಂತರ ಸಿಬಿಐ (CBI) ತನಿಖೆಗೆ ವಹಿಸಲಾಯಿತು.
ದೀರ್ಘಾವಧಿಯ ವಿಚಾರಣೆಯ ನಂತರ, ಜೂನ್ 2023 ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಏಕೈಕ ಆರೋಪಿ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿತು. ತನಿಖಾ ಸಂಸ್ಥೆಗಳು ನೈಜ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸೌಜನ್ಯಾ ಕುಟುಂಬ ಹಾಗೂ ಸಾಮಾಜಿಕ ಹೋರಾಟಗಾರರು, ನೈಜ ಆರೋಪಿಗಳಿಗೆ ಶಿಕ್ಷೆಯಾಗಬೇಕು ಮತ್ತು ಪ್ರಕರಣದ ಮರು ತನಿಖೆಯಾಗಬೇಕೆಂದು ಇಂದಿಗೂ ಹೋರಾಟ ಮುಂದುವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net