CM ಬದಲಾವಣೆಗೆ ಬಿಗ್ ಟ್ವಿಸ್ಟ್: ಇಂದು ಸಿದ್ದರಾಮಯ್ಯ ರಾಜೀನಾಮೆ ಅನುಮಾನ!

CM
CM
Published on
ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ(CM) ಬದಲಾವಣೆಯ ಹೈಡ್ರಾಮಾ ಅಂತಿಮ ಘಟ್ಟ ತಲುಪಿರುವ ಬೆನ್ನಲ್ಲೇ ಮತ್ತೊಂದು ದೊಡ್ಡ ರಾಜಕೀಯ ಟ್ವಿಸ್ಟ್ ಎದುರಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಇಂದು (ಗುರುವಾರ) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ವರದಿಯಾಗಿತ್ತು. ಇದರ ನಡುವೆಯೇ, ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ತಡರಾತ್ರಿ ದಿಢೀರ್ ಬೆಂಗಳೂರು ತೊರೆದಿದ್ದಾರೆ. ಪತ್ನಿಯ ಅನಾರೋಗ್ಯದ ಕಾರಣದಿಂದಾಗಿ ಮೊದಲು ತಮ್ಮ ತವರು ರಾಜ್ಯ ಮಧ್ಯಪ್ರದೇಶದ ಇಂದೋರ್‌ಗೆ ತೆರಳಿದ್ದ ಅವರು, ಅಲ್ಲಿಂದ ತುರ್ತು ಕಾರ್ಯದ ನಿಮಿತ್ತ ಈಗ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿಯಾಗಿದೆ.

ಇಂದು ರಾಜೀನಾಮೆ ಅನುಮಾನ!

ರಾಜ್ಯಪಾಲರ ಈ ದಿಢೀರ್ ಪ್ರವಾಸದಿಂದಾಗಿ ಸಿಎಂ ರಾಜೀನಾಮೆ ಸಲ್ಲಿಕೆ ಪ್ರಕ್ರಿಯೆ ತಡವಾಗುವ ಸಾಧ್ಯತೆ ದಟ್ಟವಾಗಿದೆ. ಸದ್ಯದ ಮಾಹಿತಿ ಪ್ರಕಾರ, ರಾಜ್ಯಪಾಲರು ಬೆಂಗಳೂರಿಗೆ ವಾಪಸ್ ಬರುವ ಅಧಿಕೃತ ವೇಳಾಪಟ್ಟಿ ಇನ್ನೂ ಖಚಿತವಾಗಿಲ್ಲ. ಅವರು ಇಂದು ಸಂಜೆಯ ವೇಳೆಗೆ ರಾಜಧಾನಿಗೆ ಮರಳುವ ನಿರೀಕ್ಷೆಯಿದೆಯಾದರೂ, ನಿಖರ ಸಮಯ ನಿಗದಿಯಾಗಿಲ್ಲ. ನಿಯಮಗಳ ಪ್ರಕಾರ ಮುಖ್ಯಮಂತ್ರಿಗಳು ರಾಜ್ಯಪಾಲರನ್ನು ಖುದ್ದಾಗಿ ಭೇಟಿಯಾಗಿಯೇ ರಾಜೀನಾಮೆ ಪತ್ರ ಸಲ್ಲಿಸಬೇಕಾಗುತ್ತದೆ. ಹೀಗಾಗಿ ರಾಜ್ಯಪಾಲರು ಬೆಂಗಳೂರಿಗೆ ಬಂದರಷ್ಟೇ ಇಂದು ರಾಜೀನಾಮೆ ಪ್ರಕ್ರಿಯೆ ನಡೆಯಲಿದೆ, ಇಲ್ಲದಿದ್ದರೆ ಈ ಸಮಯ ಮತ್ತಷ್ಟು ಮುಂದಕ್ಕೆ ಹೋಗುವ ಲಕ್ಷಣಗಳು ಕಾಣಿಸುತ್ತಿವೆ.

ರಾಜ್‌ಭವನಕ್ಕೆ ಸದ್ಯಕ್ಕಿಲ್ಲ ಸಿದ್ದು ಸವಾರಿ?

ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಕೇವಲ ಪತ್ರದ ಮೂಲಕ ಲೋಕಭವನಕ್ಕೆ (ರಾಜ್‌ಭವನ) ರಾಜೀನಾಮೆ ರವಾನಿಸುವುದು ಅನುಮಾನ ಎನ್ನಲಾಗಿದೆ. ‘ಕಾವೇರಿ’ ನಿವಾಸದಲ್ಲಿ ಸಚಿವರೊಂದಿಗೆ ನಡೆಸುತ್ತಿರುವ ಉಪಾಹಾರ ಕೂಟದ ಬಳಿಕ ಸಿದ್ದರಾಮಯ್ಯ ಅವರು ಕೈಗೊಳ್ಳಬೇಕಾಗಿದ್ದ ಮುಂದಿನ ಹೆಜ್ಜೆಗೆ ಈಗ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ. ರಾಜ್ಯಪಾಲರ ಭೇಟಿಗೆ ಸಮಯ ಸಿಗದ ಹೊರತು ಅಧಿಕೃತವಾಗಿ ರಾಜೀನಾಮೆ ಸಲ್ಲಿಕೆ ಸಾಧ್ಯವಿಲ್ಲದ ಕಾರಣ, ಇಡೀ ರಾಜಕೀಯ ವಲಯ ಈಗ ರಾಜ್‌ಭವನದ ಮುಂದಿನ ನವೀಕರಣಗಳಿಗಾಗಿ ಕಾಯುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net