ಕಳೆದ 6 ತಿಂಗಳಿಂದ ಐಟಿ ಅಧಿಕಾರಿಗಳ 3 ತಂಡ... ಜೆ.ಸಿ. ರಾಯ್​ ಆತ್ಮಹತ್ಯೆ ಕೇಸ್​ಗೆ ಬಿಗ್​ ಟ್ವಿಸ್ಟ್​ | CJ Roy!

ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್​
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್​
Published on

ಪ್ರಮುಖ ಮುಖ್ಯಾಂಶಗಳು

  • ಕಾನ್ಫಿಡೆಂಟ್​ ಗ್ರೂಪ್ ಚೇರ್ಮನ್​ ಸಿ.ಜೆ. ರಾಯ್​ ಆತ್ಮಹತ್ಯೆಗೆ ಶರಣು
  • ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಹೆದರಿ ಆತ್ಮಹತ್ಯೆ
  • ನಗರದ ಲ್ಯಾಂಗ್​ಫೋರ್ಡ್​ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಘಟನೆ
  • ಕೇರಳ ಚುನಾವಣೆಗೆ ಫಂಡಿಂಗ್ ಮಾಡಿದ್ದ ಆರೋಪ ಕೇಳಿಬಂದಿದೆ
ಬೆಂಗಳೂರು: ಶುಕ್ರವಾರ (ಜ.30) ಪಿಸ್ತೂಲ್​ನಿಂದ ತಲೆಗೆ ಗುಂಡು ಹಾರಿಸಿಕೊಂಡು ಕಾನ್ಫಿಡೆಂಟ್​ ಗ್ರೂಪ್ ಚೇರ್ಮನ್ (Confident Group Chairman)​ ಸಿ.ಜೆ. ರಾಯ್​ ಆತ್ಮಹತ್ಯೆಗೆ ಶರಣಾದ ಘಟನೆ ಹಲವರನ್ನು ಅಚ್ಚರಿಗೆ ದೂಡಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ಸೂಚಿಸಿವೆ. ಈ ಮಧ್ಯೆ, ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್​ ಒಂದು ಎದುರಾಗಿದ್ದು, ಅವರ ವಿರುದ್ಧ ಕೇರಳ ಚುನಾವಣೆಗೆ ಫಂಡಿಂಗ್ ಮಾಡಿದ್ದ ಆರೋಪ ಕೇಳಿಬಂದಿದೆ. 

150 ಲೇಔಟ್, 12 ಐಷಾರಾಮಿ ಕಾರುಗಳು

ಆನೇಪಾಳ್ಯ ಬಳಿಯ ತಮ್ಮ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾದ ರಾಯ್ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಅಶೋಕನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಪದೇ ಪದೆ ಐಟಿ ದಾಳಿಗೆ ಹೆದರಿ ಇಂಥದ್ದೊಂದು ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. 150ಕ್ಕೂ ಅಧಿಕ ಲೇಔಟ್, 12 ಐಷಾರಾಮಿ ಕಾರುಗಳು ಸೇರಿ ಹಲವು ಆಸ್ತಿಗಳ ಒಡೆಯನಾಗಿದ್ದ ರಾಯ್​ ಅವರ ಸಾವಿನ ಪ್ರಕರಣದ ಬೆನ್ನಲ್ಲೇ ಮತ್ತೊಂದು ವಿಚಾರ ಬಯಲಿಗೆ ಬಂದಿದೆ.  

ಕೇರಳ ಚುನಾವಣೆಗೆ ರಾಯ್​ ಫಂಡಿಂಗ್?

ಕಾನ್ಪಿಡೆಂಟ್ ಗ್ರೂಪ್ ಸಂಸ್ಥಾಪಕ ಸಿಜೆ ರಾಯ್ ಬಗ್ಗೆ ಕಳೆದ ಆರು ತಿಂಗಳಿಂದ ಐಟಿ ಅಧಿಕಾರಿಗಳ ಮೂರು ತಂಡಗಳು ತನಿಖೆ ಆರಂಭಿಸಿತ್ತು. ಕೇರಳ ಚುನಾವಣೆಗೆ ರಾಯ್​ ಫಂಡಿಂಗ್ ಮಾಡಿದ್ದರು ಎಂಬ ಆರೋಪ ಕೂಡ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾತ್ರಿಯಿಡೀ ತನಿಖೆ ನಡೆಸಿರುವ ಅಶೋಕ ನಗರ ಪೊಲೀಸರು, ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ. 
ಕೇರಳ ರಾಜಕಾರಣಿಗಳಿಗೆ ಚುನಾವಣೆಗೆ ಹಣ ನೀಡಿರುವ ಸುಳಿವು ಆಧರಿಸಿ ಐಟಿ ಅಧಿಕಾರಿಗಳು ತಮ್ಮ ತಂಡಗಳೊಂದಿಗೆ ತನಿಖೆ ಆರಂಭಿಸಿತ್ತು ಎನ್ನಲಾಗಿದೆ. ಕಳೆದ ಆರು ತಿಂಗಳಿಂದ ಇಡಿ, ಐಟಿ ಅಧಿಕಾರಿಗಳು ಉದ್ಯಮಿ ರಾಯ್​ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಅವರ ಎಲ್ಲ ವ್ಯವಹಾರದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದ ಐಟಿ, ಕಳೆದ ಮೂರು ದಿನಗಳಿಂದ ಬೆಂಗಳೂರಿನ ಅವರ ಕಚೇರಿಗಳಲ್ಲಿ ಶೋಧ ಕಾರ್ಯಕ್ಕೆ ಇಳಿದಿತ್ತು. ಇದರಿಂದ ತನಗೆ ತೊಂದರೆ ಉಂಟಾಗಬಹುದು, ತಾನು ಜೈಲುವಾಸ ಅನುಭವಿಸಬಹುದು ಎಂಬ ಭಯಭೀತಿಗೆ ಒಳಗಾದ ರಾಯ್​, ಇದೇ ಕಾರಣಕ್ಕೆ ಸಾವಿಗೆ ಶರಣಾಗಿರಬಹುದು ಎಂಬ ಶಂಕೆಗಳು ವ್ಯಕ್ತವಾಗಿವೆ. ಪ್ರಸ್ತುತ, ಪೊಲೀಸ್​ ಠಾಣೆಗೆ ಆಗಮಿಸಿದ ರಾಯ್ ಅವರ ಪುತ್ರ, ತಂದೆಯ ಸಾವಿನ ಬಗ್ಗೆ ವಿವರಣೆ ನೀಡಿದ್ದಾರೆ.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net