ಕೇರಳ, ಆಂಧ್ರ, ಬಿಹಾರ... ಸಾಲದ ಸುಳಿಯಲ್ಲಿವೆ ಭಾರತದ ಈ 10 ರಾಜ್ಯಗಳು...​ | Debt Burden

ಸಾಲದ ಹೊರೆ ಹೊತ್ತಿವೆ ದೇಶದ 10 ರಾಜ್ಯಗಳು
ಸಾಲದ ಹೊರೆ ಹೊತ್ತಿವೆ ದೇಶದ 10 ರಾಜ್ಯಗಳು
Published on

ಪ್ರಮುಖ ಮುಖ್ಯಾಂಶಗಳು

  • ದೇಶದ 10 ರಾಜ್ಯಗಳು ಭಾರೀ ಸಾಲದ ಹೊರೆಯಿಂದ ಬಳಲುತ್ತಿವೆ
  • ಆರ್​ಬಿಐ ಬಿಡುಗಡೆಗೊಳಿಸಿದ 2025ರ ಹಣಕಾಸು ವರ್ಷದ ಅಂಕಿಅಂಶಗಳ ಪ್ರಕಾರ...
  • ಮೊದಲ ಸ್ಥಾನದಲ್ಲಿ ಪಶ್ಚಿಮ ಬಂಗಾಳ ರಾಜ್ಯವಿದೆ
ನವದೆಹಲಿ: ವಿಶ್ವ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ನಂತಹ ಇಂಟರ್​ನ್ಯಾಷನಲ್​ ಸಂಸ್ಥೆಗಳು ಭಾರತದ ಆರ್ಥಿಕತೆಯ ತ್ವರಿತ ಬೆಳವಣಿಗೆಯನ್ನು ಶ್ಲಾಘಿಸಿವೆ. ಈ ಬೆಳವಣಿಗೆ ಒಂದು ಕಡೆ ಖುಷಿ ನೀಡಿದ್ದೇ ಆದರೂ ದೇಶದ ಹಲವು ರಾಜ್ಯಗಳು ಭಾರೀ ಸಾಲದ ಹೊರೆಯಿಂದ ಬಳಲುತ್ತಿವೆ ಎಂಬ ವಿಷಯ ಸದ್ಯ ಆತಂಕಕ್ಕೆ ದೂಡಿದೆ (Debt Burden).
'ಬಿಜಿನೆಸ್​ ಟುಡೇ' ವರದಿ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆಗೊಳಿಸಿದ 2025ರ ಹಣಕಾಸು ವರ್ಷದ ಅಂಕಿಅಂಶಗಳು, ದೇಶದ ಯಾವೆಲ್ಲ ರಾಜ್ಯಗಳು ಈ ಪಟ್ಟಿಗೆ ಸೇರಿವೆ ಎಂಬುದನ್ನು ಬಹಿರಂಗಪಡಿಸಿದೆ. ಆರ್​ಬಿಐ ದತ್ತಾಂಶದ ಪ್ರಕಾರ, ರಾಷ್ಟ್ರದ ಕೆಲವು ದೊಡ್ಡ ರಾಜ್ಯಗಳು ತಮ್ಮ ತೆರಿಗೆ ಮತ್ತು ತೆರಿಗೆಯೇತರ ಆದಾಯದ ಶೇ.40ರಷ್ಟು ಸಾಲಗಳ ಮೇಲಿನ ಬಡ್ಡಿ ಪಾವತಿಗಳಿಗೆ ಮಾತ್ರ ಖರ್ಚು ಮಾಡುತ್ತಿವೆ ಎನ್ನಲಾಗಿದೆ. ಇದು ಅಭಿವೃದ್ಧಿ ಕಾರ್ಯಗಳು, ಮೂಲಸೌಕರ್ಯ, ಆರೋಗ್ಯ ಮತ್ತು ಶಿಕ್ಷಣದಂತಹ ಪ್ರಮುಖ ಕ್ಷೇತ್ರಗಳಿಗೆ ಸಾಕಷ್ಟು ಹಣವನ್ನು ಹಂಚಿಕೆ ಮಾಡಲು ಸಾಧ್ಯವಾಗದ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ ಎಂಬುದು ವರದಿಯಿಂದ ತಿಳಿದುಬಂದಿದೆ.
ಸಾಲದ ಹೊರೆಯಿಂದಾಗಿ ಹೆಚ್ಚಿನ ಒತ್ತಡವನ್ನು ಎದುರಿಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಪಶ್ಚಿಮ ಬಂಗಾಳ ಅಗ್ರಸ್ಥಾನದಲ್ಲಿದೆ. 2025ರ ಹಣಕಾಸು ವರ್ಷದಲ್ಲಿ, ರಾಜ್ಯವು ಸುಮಾರು 1.09 ಲಕ್ಷ ಕೋಟಿ ರೂ.ಗಳ ಆದಾಯವನ್ನು ಗಳಿಸಿತು. ಅದರಲ್ಲಿ 45,000 ಕೋಟಿ ರೂ.ಗಳಿಗಿಂತ ಹೆಚ್ಚು ಬಡ್ಡಿ ಪಾವತಿಗಳಿಗೆ ಖರ್ಚು ಮಾಡಬೇಕಾಗಿತ್ತು. ಇದರರ್ಥ, ಒಟ್ಟು ಆದಾಯದ ಸುಮಾರು ಶೇ.42ರಷ್ಟು ಬಡ್ಡಿಗೆ ಹೋಗಿದೆ. ಇನ್ನು ಎರಡನೇ ಸ್ಥಾನದಲ್ಲಿ ಪಂಜಾಬ್ ಇದೆ.
ಈ ರಾಜ್ಯವು ತನ್ನ ಆದಾಯದ ಶೇ.34ರಷ್ಟು ಬಡ್ಡಿ ಪಾವತಿಗೆ ಖರ್ಚು ಮಾಡಿದೆ. 70,000 ಕೋಟಿ ರೂ. ಆದಾಯದಲ್ಲಿ ಸುಮಾರು 24,000 ಕೋಟಿ ರೂ.ಗಳನ್ನು ಬಡ್ಡಿ ರೂಪದಲ್ಲಿ ಕಟ್ಟಿದೆ. ಇವರ ನಂತರದ ಸ್ಥಾನದಲ್ಲಿರುವ ಬಿಹಾರ, ಗಳಿಸಿದ 62,000 ಕೋಟಿ ರೂ. ಆದಾಯದಲ್ಲಿ ಸುಮಾರು 21,000 ಕೋಟಿ ರೂ. ಹಣವನ್ನು ಬಡ್ಡಿಗೆ ಬಳಸಿಕೊಂಡಿದೆ. ಇದು ಒಟ್ಟು ಆದಾಯದ ಶೇ.33ರಷ್ಟು ಎಂದು ಹೇಳಲಾಗಿದೆ.
ಇನ್ನು ನಾಲ್ಕನೇ ಸ್ಥಾನದಲ್ಲಿರುವ ಕೇರಳ, 2025ರ ಆರ್ಥಿಕ ವರ್ಷದಲ್ಲಿ 1.03 ಲಕ್ಷ ಕೋಟಿ ರೂ.ಗಳ ಆದಾಯವನ್ನು ಗಳಿಸಿದೆ. ಆದರೆ, ಶೇ.28ರಷ್ಟು ಅಥವಾ ಸುಮಾರು 29,000 ಕೋಟಿ ರೂ. ಅನ್ನು ಬಡ್ಡಿಗಾಗಿ ವ್ಯಯಿಸಿದೆ. ಐದನೇ ಸ್ಥಾನದಲ್ಲಿ ತಮಿಳುನಾಡು ಇದ್ದರೆ, ಹರಿಯಾಣ, ರಾಜಸ್ಥಾನ ಮತ್ತು ಆಂಧ್ರಪ್ರದೇಶ ರಾಜ್ಯಗಳು ನಂತರದ ಸ್ಥಾನಗಳಲ್ಲಿವೆ.
ಆದಾಗ್ಯೂ, ರಾಜ್ಯಗಳ ಆದಾಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ಬಡ್ಡಿ ಪಾವತಿಗಳು ನೂತನ ರಸ್ತೆಗಳು, ಶಾಲೆಗಳು, ಆಸ್ಪತ್ರೆ ಮತ್ತು ಕಲ್ಯಾಣ ಯೋಜನೆಗಳಂತಹ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣದ ಕೊರತೆಗೆ ಕಾರಣವಾಗುತ್ತಿವೆ ಎಂದು ತಿಳಿಸಲಾಗಿದೆ. ಹಣಕಾಸಿನ ಶಿಸ್ತು, ಆದಾಯ ಮೂಲಗಳ ವಿಸ್ತರಣೆ ಮತ್ತು ವೆಚ್ಚದ ನಿಯಂತ್ರಣ ಇಲ್ಲದಿದ್ದರೆ ಭವಿಷ್ಯದಲ್ಲಿ ಈ ಸಾಲದ ಹೊರೆ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net