ವಿಧಾನಸಭೆಯಲ್ಲಿ ಮಾತನಾಡುವಾಗಲೇ ಇರಲಿ, ಸಾರ್ವಜನಿಕ ಸಭೆ ಅಥವಾ ಪ್ರತಿಭಟನೆಗಳಲ್ಲಿ ಅನ್ಯಾಯದ ವಿರುದ್ಧ ಮಾತಿಗೆ ನಿಂತಾಗಲೇ ಇರಲಿ ಉರ್ದು ಮಿಶ್ರಿತ ಬೀದರ್ ಕನ್ನಡ ಬಳಸಿ ನಿರರ್ಗಳವಾಗಿ ವಾಗ್ಝರಿ ಹರಿಸುತ್ತಿದ್ದ ಅವರು, ದಂಡಿನಲ್ಲಿ ಸೋದರ ಮಾವನೆ ಎನ್ನುವಂತೆ ಸ್ವಪಕ್ಷೀಯರು, ಪ್ರತಿಪಕ್ಷದವರು, ನಮ್ಮವರು ತಮ್ಮವರು ಯಾರನ್ನೂ ಬಿಡುತ್ತಿರಿಲಿಲ್ಲ. ಅದು ಅಸ್ಪೃಶ್ಯತೆ ನಿವಾರಣೆ ವಿರುದ್ಧದ ಕ್ರಾಂತಿಯೇ ಇರಲಿ, ಮಹಾಜನ್ ವರದಿ ಜಾರಿಗಾಗಿ ನಡೆದ ಹೋರಾಟವೇ ಆಗಿರಲಿ, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕೊಡಬೇಕು ಎಂಬ ಕೂಗಿರಲಿ, ವೀರಶೈವ ಲಿಂಗಾಯತ ಸಮುದಾಯದ ಭಾವನೆಗಳಿಗೆ ನೋವುಂಟುಮಾಡಿದ ('ಆನುದೇವಾ ಹೊರಗಣವನು' , 'ಧರ್ಮಕಾರಣ' ಇತ್ಯಾದಿ) ಕೃತಿಗಳ ವಿರುದ್ಧದ ಪ್ರತಿಭಟನೆಯೇ ಇರಲಿ, ಹಾವನೂರು ಆಯೋಗದ ವರದಿ ತಿರಸ್ಕರಿಸುವಂತೆ ಬೀದಿಗಿಳಿದು ಹೋರಾಟಕ್ಕೆ ನಿಂತ ಪರಿಯೇ ಆಗಿರಲಿ ಭೀಮಣ್ಣ ಖಂಡ್ರೆ, ಆಕಾಶಭೂಮಿಗಳ ಒಂದು ಮಾಡಿ ನಿಂತ ತ್ರಿವಿಕ್ರಮನಂತೆ ಕಾಣುತ್ತಿದ್ದರು.