ಭೀಮನ ಅಮಾವಾಸ್ಯೆ "ಬಸ್​ನಲ್ಲಿ ಕಿಕ್ಕಿರಿದ ಭಕ್ತರು' Bus

Bus
Bus
Published on

ಪ್ರಮುಖ ಮುಖ್ಯಾಂಶಗಳು

  • ಕಾಲೇಜು ವಿದ್ಯಾರ್ಥಿಗಳ ಪರದಾಟ
  • ಬಸ್​ ನಿಲ್ದಾಣದಲ್ಲಿ ಸಾರಿಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪಾಲಕರು!

ಹುಲಿಯೂರುದುರ್ಗ:

ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕುಣಿಗಲ್​ ತಾಲೂಕಿನ ಹುಲಿಯೂರುದುರ್ಗ ಪಟ್ಟಣದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಸಾರಿಗೆ ಬಸ್ಸುಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ, ಕಾಲೇಜು ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಸಿಗದೆ ತೀವ್ರ ತೊಂದರೆ ಅನುಭವಿಸಿದರು.

ಮದ್ದೂರು ಹಾಗೂ ಮಂಡ್ಯ ಕಡೆಗೆ ಕಾಲೇಜಿಗೆ ತೆರಳಬೇಕಿದ್ದ ವಿದ್ಯಾರ್ಥಿಗಳು ಬೆಳಿಗ್ಗೆ 7 ರಿಂದ 10 ಗಂಟೆಯವರೆಗೆ Bus ಬಸ್​ ನಿಲ್ದಾಣದಲ್ಲಿ ಕಾದು ಕುಳಿತರೂ ಬಸ್ಸುಗಳಲ್ಲಿ ಜಾಗ ಸಿಗಲಿಲ್ಲ.
ತುಮಕೂರು ಹಾಗೂ ಕುಣಿಗಲ್​ ಕಡೆಯಿಂದ ಮೈಸೂರು ಮಾರ್ಗವಾಗಿ ಸಂಚರಿಸುವ ಬಸ್ಸುಗಳಲ್ಲಿ, ಪ್ರಸಿದ್ಧ ಗೌಡಗೆರೆ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳುವ ಭಕ್ತಾದಿಗಳು ಕಿಕ್ಕಿರಿದು ತುಂಬಿದ್ದರು. ಇದರಿಂದಾಗಿ ಸೂಕ್ತ ಸಮಯಕ್ಕೆ ಕಾಲೇಜಿಗೆ ತೆರಳಲಾಗದೆ ವಿದ್ಯಾರ್ಥಿಗಳು ಪರದಾಡಿದರು.
ವಿಷಯ ತಿಳಿದು ಬಸ್​ ನಿಲ್ದಾಣಕ್ಕೆ ಧಾವಿಸಿದ ಪಾಲಕರು, ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರತಿನಿತ್ಯ ಇದೇ ಪರಿಸ್ಥಿತಿ ಮುಂದುವರಿದರೆ ಮಕ್ಕಳ ಶಿಕ್ಷಣದ ಗತಿಯೇನು ಎಂದು ಪ್ರಶ್ನಿಸಿ, ಸ್ಥಳಿಯರು ಹಾಗೂ ವಿದ್ಯಾರ್ಥಿಗಳೊಂದಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಈ ವೇಳೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಘಟನಾ ಸ್ಥಳಕ್ಕೆ ಆಗಮಿಸಿದ ಹುಲಿಯೂರುದುರ್ಗ ಠಾಣೆಯ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ, ತಕ್ಷಣವೇ ಪರ್ಯಾಯ ಬಸ್​ ವ್ಯವಸ್ಥೆ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳನ್ನು ಕಾಲೇಜಿಗೆ ಕಳುಹಿಸಿಕೊಟ್ಟರು.
ನಿತ್ಯದ ಕಿರಿಕಿರಿ, ಹೆಚ್ಚಿದ ಗೊಂದಲ:
ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ರಜಾ ದಿನಗಳಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಇದರಿಂದ ನಿತ್ಯ ಪ್ರಯಾಣಿಸುವವರು, ಪುರುಷರು ಹಾಗೂ ಸಾರಿಗೆ ಸಿಬ್ಬಂದಿ (ಚಾಲಕ-ನಿರ್ವಾಹಕರು) ನಡುವೆ ವಾಗ್ವಾದಗಳು ನಡೆದು ಪೊಲೀಸ್​ ಠಾಣೆ ಮೆಟ್ಟಿಲೇರಿದ ನಿದರ್ಶನಗಳೂ ಇವೆ. ಆದ್ದರಿಂದ ಸಂಬಂಧಪಟ್ಟ ಕೆಎಸ್​ಆರ್​ಟಿಸಿ ಉನ್ನತಾಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ, ಗೌಡಗೆರೆ ದೇವಾಲಯಕ್ಕೆ ತೆರಳುವ ಭಕ್ತರಿಗೆ ಪ್ರತ್ಯೇಕ ಬಸ್​ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಟ್ರಿಪ್​ಗಳನ್ನು ಕಾರ್ಯಾಚರಣೆಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net