ಮಕ್ಕಳ ಪಾಲಿನ ಭಗೀರಥ ಶಿಕ್ಷಕ

ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಿಕ್ಷಕ ವೆಂಕಟಗಿರಿ ಕುಲಕರ್ಣಿ ಅವರು ತಮ್ಮ ಸ್ವಂತ ಹಣದಲ್ಲಿ ಕೊರೆಯಿಸಿದ ಬೋರ್‌ವೆಲ್‌ಗೆ 2 ಇಂಚು ನೀರು ಸಿಕ್ಕಿರುವುದು.
ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಿಕ್ಷಕ ವೆಂಕಟಗಿರಿ ಕುಲಕರ್ಣಿ ಅವರು ತಮ್ಮ ಸ್ವಂತ ಹಣದಲ್ಲಿ ಕೊರೆಯಿಸಿದ ಬೋರ್‌ವೆಲ್‌ಗೆ 2 ಇಂಚು ನೀರು ಸಿಕ್ಕಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಹಂದಿಗನೂರಿನ ಸರ್ಕಾರಿ ಶಾಲೆ ಆವರಣದಲ್ಲಿ ಬೋರ್‌ವೆಲ್ ಕೊರೆಸಿದ ಗುರು
ಸಿಂದಗಿ: ತರಗತಿಗೆ ತಡ ಮಾಡಿ ಬಂದ ವಿದ್ಯಾರ್ಥಿಯನ್ನು ಗದರಿದ್ದ ಶಿಕ್ಷಕನಿಗೆ ವಾಸ್ತವದ ಅರಿವಾದಾಗ ನೊಂದು, ಸ್ವಂತ ಹಣದಲ್ಲಿ ಕೊಳವೆ ಬಾವಿ ಕೊರೆಯಿಸಿ, ಬಾಯಾರಿದ ಮಕ್ಕಳ ಪಾಲಿಗೆ ಭಗೀರಥರಾಗಿದ್ದಾರೆ.
ಹೌದು...! ತಾಲೂಕಿನ ಹಂದಿಗನೂರ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೆಂಕಟಗಿರಿ ಕುಲಕರ್ಣಿ ಅವರು ತಮ್ಮ 66 ಸಾವಿರ ರೂ. ವೆಚ್ಚದಲ್ಲಿ ಮಕ್ಕಳ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ ಮಾದರಿಯಾಗಿದ್ದಾರೆ.
7ನೇ ತರಗತಿಯ ವಿದ್ಯಾರ್ಥಿಯೊಬ್ಬಳು ತಮ್ಮ ಕ್ಲಾಸಿಗೆ ತಡವಾಗಿ ಬಂದಿರುವುದನ್ನು ಪ್ರಶ್ನಿಸಿದ್ದ ಕುಲಕರ್ಣಿ ಶಿಕ್ಷಕರು, ಆ ವಿದ್ಯಾರ್ಥಿನಿಯನ್ನು ಇತರ ವಿದ್ಯಾರ್ಥಿಗಳ ಮುಂದೆ ಗದರಿಸಿದ್ದಾರೆ.
ಪಾಠ ಮುಗಿದ ನಂತರದಲ್ಲಿ ಅವಳ ಸಹಪಾಠಿಯೊಬ್ಬಳು, ಸರ್ ಅವಳ ಗಂಟಲು ಒಣಗಿತ್ತಂತೆ. ಶಾಲೆಯಲ್ಲಿ ನೀರಿಲ್ಲ, ಅದಕ್ಕೆ ಮನೆಗೆ ಹೋಗಿ ನೀರು ಕುಡಿದು ಬಂದಿದ್ದಾಳೆ ಎಂದು ಹೇಳಿದಾಗ, ಶಿಕ್ಷಕ ವೆಂಕಟಗಿರಿ ಅವರು ತುಂಬಾನೇ ನೋವು ಅನುಭವಿಸಿ, ಸಂಬಂಧಿಸಿದ ತಾಲೂಕು, ಜಿಲ್ಲಾ ಸೇರಿ ತಮ್ಮ ಮೇಲಾಧಿಕಾರಿಗಳೆಲ್ಲರಿಗೂ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸುವಂತೆ ಮಾಡಿದ ಪ್ರಯತ್ನಗಳೂ ಕೈಗೂಡಿರಲಿಲ್ಲ.
ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ಇಲಾಖೆ ಮತ್ತು ಸರ್ಕಾರ ಕರ್ತವ್ಯವಾದರೂ, ತಮ್ಮ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಹಲವಾರು ಬಾರಿ ಪ್ರಗತಿಪರ ಹೋರಾಟಗಾರರು, ಸಂಘಟನೆಗಳು, ಶಾಲಾ ಅಭಿವದ್ಧಿ ಸಮಿತಿ ಮನವಿ, ಹೋರಾಟಗಳಿಗೂ ಮರುಗದ ಇಲಾಖೆಯ ನಡೆಯಿಂದ ಬೇಸತ್ತು ಹೊಸ ಬೋರ್‌ವೆಲ್ ಕೊರೆಸಲು ತಮ್ಮ ಸಂಬಳವನ್ನು ನೀಡುವುದಾಗಿ ಘೋಷಿಸಿದ್ದರು.
ಅದರಂತೆ ಅವರು ತಾಂಡವವಾಡುತ್ತಿದ್ದ ನೀರಿನ ಸಮಸ್ಯೆಗೆ, ಮಕ್ಕಳ ಬಾಯಾರಿಕೆ ತಣಿಸಲು ಮುಂದಾಗಿ ಮಾ.24ರಂದು ಶಾಲಾ ಅವರಣದಲ್ಲಿ 66ಸಾವಿರ ವೆಚ್ಚದಲ್ಲಿ 410 ೂಟ್ ಬೋರ್ ಕೊರೆಯಿಸಿದ ಪರಿಣಾಮ 2 ಇಂಚು ನೀರು ಚಿಮ್ಮಿರುವುದು ಶಾಲಾ ಮಕ್ಕಳ ದಾಹ ತೀರಿದಂತಾಗಿದೆ.
ಶಾಲೆಯಲ್ಲಿ 176 ವಿದ್ಯಾರ್ಥಿಗಳಿದ್ದಾರೆ. ಶಾಲಾ ಅವರಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಇಲಾಖೆ 2 ಬೋರ್ ಹಾಕಿಸಿದರೂ ನೀರು ಬಿದ್ದಿರಲಿಲ್ಲ. ಮಕ್ಕಳು ಪಾಠ ಬಿಟ್ಟು ಮನೆಗೆ ತೆರಳಿ ಬಾಯಾರಿಕೆ ತಣಿಸಿಕೊಳ್ಳುತ್ತಿರುವುದನ್ನು ತಪ್ಪಿಸಲು ಮನಸ್ಫೂರ್ತಿಯಾಗಿ ಕೈಗೊಂಡ ಶಿಕ್ಷಕನ ಸಂಕಲ್ಪಕ್ಕೆ ಗಂಗಾಮಾತೆ ಅವತರಿಸಿ ಅಪ್ಪಿದ್ದು, ಗ್ರಾಮ, ವಿದ್ಯಾರ್ಥಿಗಳು, ಎಸ್ಡಿಎಂಸಿ ಸದಸ್ಯರಲ್ಲಿ ಸಂತಸ ಮೂಡಿಸಿದೆ.
ಗ್ರಾಮದ ದಿವಂಗತ ಶಾಂತಪ್ಪ ನರಗುಂದ ಅವರ ಸ್ಮರಣಾರ್ಥ, ಅವರ ಪುತ್ರ ನಿಂಗಣ್ಣ ನರಗುಂದ ಅವರು ಮಕ್ಕಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ವಾಟರ್ ಫಿಲ್ಟರ್ ಕೊಡುಗೆ ನೀಡಿದ್ದಾರೆ.

ಕುಡಿಯಲು ನೀರು ನೀಡುವುದು ಪುಣ್ಯದ ಕಾರ್ಯ. ಅದರಲ್ಲೂ ಶಾಲಾ ಮಕ್ಕಳಿಗೆ ಕುಡಿಯುವ ನೀರು ಪೂರೈಸಲು ಆಲೋಚಿಸಿ, ಸ್ವಂತ ಖರ್ಚಿನಲ್ಲಿ ಬೋರ್ ಕೊರೆಸಲು ಮುಂದಾದೆ. ನಮ್ಮ ಭಕ್ತಿಯ ಶ್ರೀ ಕೋರವಾರೇಶ್ವರನ ಕಪೆಯಿಂದ ಮಕ್ಕಳಿಗೆ ಕುಡಿಯುವ ನೀರು ಲಭಿಸಿದ್ದು ಸಂತಸ ತಂದಿದೆ.

| ವೆಂಕಟಗಿರಿ ಕುಲಕರ್ಣಿ,ಹಂದಿಗನೂರ ಶಾಲೆಯ ಶಿಕ್ಷಕ.

"

ತಾಲೂಕಿನ ಸರ್ಕಾರಿ ಶಾಲೆಗಳ ಮೂಲ ಸೌಕರ್ಯಕ್ಕೆ ಶ್ರಮಿಸಬೇಕಿರುವ ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆ ಖಂಡಿಸಿ, ಶಾಲೆಗೆ ಬೀಗ ಹಾಕಿ ಹೋರಾಟ ಮಾಡಿ, ಪ್ರತಿಭಟಿಸಿ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಾಕಾಗಿತ್ತು. ಆದರೆ ಕುಲಕರ್ಣಿ ಗುರುಗಳು ಮಕ್ಕಳ ನೀರಿನ ದಾಹ ತೀರಿಸಲು ಇಟ್ಟ ಮುಂದೆಜ್ಜೆ ಇಲಾಖೆಗೆ ಮಾದರಿಯಾಗಿದ್ದು, ಗ್ರಾಮದ ವಿದ್ಯಾರ್ಥಿ ಪಾಲಕರು, ವಿದ್ಯಾರ್ಥಿಗಳು ಅವರ ಕಾರ್ಯಕ್ಕೆ ಸದಾ ಋಣಿಯಾಗಿದ್ದಾರೆ.

|ಚನ್ನಪ್ಪಗೌಡ ಬಿರಾದಾರ,ಎಸ್‌ಡಿಎಂಸಿ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net