ಹನೂರು: ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಹಾಗೂ ವಾಹನ ಸೌಕರ್ಯ ಒದಗಿಸುವಂತೆ ವಿದ್ಯಾರ್ಥಿಗಳು ವಿಡಿಯೋ ಹಾಗೂ ಪತ್ರದ ಮೂಲಕ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಸೋಮವಾರ ತಾಲೂಕಿನ ಪಚ್ಚೆದೊಡ್ಡಿ ಗ್ರಾಮಕ್ಕೆ ಬಿಇಒ ಮಹೇಶ್ ಅವರು ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಕಾಡಂಚಿನ ಗ್ರಾಮ ಪಚ್ಚೆದೊಡ್ಡಿಯಿಂದ ನಿತ್ಯ ಹಲವು ವಿದ್ಯಾರ್ಥಿಗಳು ಸಮೀಪದ ಕಾಂಚಳ್ಳಿ, ಅಜ್ಜೀಪುರ ಹಾಗೂ ರಾಮಾಪುರದ ಶಾಲಾ, ಕಾಲೇಜಿಗೆ ತೆರಳುತ್ತಾರೆ. ಆದರೆ ಕಾಂಚಳ್ಳಿಯಿಂದ ಪಚ್ಚೆದೊಡ್ಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಅರಣ್ಯ ಪ್ರದೇಶದೊಳಗೆ ಹಾದು ಹೋಗಿರುವ ಮಣ್ಣಿನಿಂದ ಕೂಡಿದ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಜತೆಗೆ ವಾಹನ ಸೌಕರ್ಯ ಇಲ್ಲದ ಪರಿಣಾಮ ಇಲ್ಲಿನ ವಿದ್ಯಾರ್ಥಿಗಳು ಕಾಡು ಪ್ರಾಣಗಳ ಭಯದ ನಡುವೆಯೂ ನಿತ್ಯ ನಡೆದೇ ಶಾಲಾ, ಕಾಲೇಜಿಗೆ ತೆರಳುತ್ತಿದ್ದಾರೆ. ರಸ್ತೆ ಅಭಿವೃದ್ಧಿ ಪಡಿಸುವಂತೆ ಹಾಗೂ ಶಾಲಾ ಮಕ್ಕಳಿಗೆ ಸ್ಥಗಿತಗೊಂಡಿದ್ದ ಜನವನ ವಾಹನ ಸೌಕರ್ಯವನ್ನು ಒದಗಿಸುವಂತೆ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಡಿ.6 ರಂದು ರಸ್ತೆ ಅಬಿವೃದ್ಧಿ ಹಾಗೂ ವಾಹನ ಸೌಕರ್ಯ ಒದಗಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ವಿಡಿಯೋ ಹಾಗೂ ಪತ್ರ ಬರೆದು ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಸೋಮವಾರ ಬಿಇಒ ಮಹೇಶ್ ಅವರು ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗ್ರಾಮಸ್ಥರಿಂದ ಸಮಸ್ಯೆ ಆಲಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸದ್ಯದಲ್ಲಿಯೇ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.