ಬೆಂಗಳೂರು ಉತ್ತರ ಎಸಿ ಕಚೇರಿ ನಿರ್ಲಕ್ಷ್ಯ: ಉಪ ವಿಭಾಗಾಧಿಕಾರಿ ಕಿರಣ್‌ಗೆ 75 ಸಾವಿರ ರೂ. ಭಾರಿ ದಂಡ ವಿಧಿಸಿದ ಮಾಹಿತಿ ಆಯೋಗ! RTI Act

ಬೆಂಗಳೂರು ಉತ್ತರ ಎಸಿ ಕಚೇರಿ ನಿರ್ಲಕ್ಷ್ಯ: ಉಪ ವಿಭಾಗಾಧಿಕಾರಿ ಕಿರಣ್‌ಗೆ 75 ಸಾವಿರ ರೂ. ಭಾರಿ ದಂಡ ವಿಧಿಸಿದ ಮಾಹಿತಿ ಆಯೋಗ!
ಬೆಂಗಳೂರು ಉತ್ತರ ಎಸಿ ಕಚೇರಿ ನಿರ್ಲಕ್ಷ್ಯ: ಉಪ ವಿಭಾಗಾಧಿಕಾರಿ ಕಿರಣ್‌ಗೆ 75 ಸಾವಿರ ರೂ. ಭಾರಿ ದಂಡ ವಿಧಿಸಿದ ಮಾಹಿತಿ ಆಯೋಗ!
Published on
ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯಡಿ (RTI Act) ಸಾರ್ವಜನಿಕರು ಕೋರಿದ ಮಹತ್ವದ ದಾಖಲೆಗಳನ್ನು ನೀಡದೆ ನಿರ್ಲಕ್ಷ್ಯ ವಹಿಸಿದ ಹಾಗೂ ಆಯೋಗದ ನೋಟಿಸ್‌ಗೂ ಕ್ಯಾರೆ ಎನ್ನದ ಬೆಂಗಳೂರು ಉತ್ತರ ಉಪ ವಿಭಾಗದ ಉಪ ವಿಭಾಗಾಧಿಕಾರಿ (AC) ಕಿರಣ್ ಅವರಿಗೆ ಕರ್ನಾಟಕ ಮಾಹಿತಿ ಆಯೋಗ ಬರೋಬ್ಬರಿ 75 ಸಾವಿರ ರೂಪಾಯಿ ದಂಡ ವಿಧಿಸಿದೆ. ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ತಲಾ 25 ಸಾವಿರ ರೂ. ದಂಡ ವಿಧಿಸಲಾಗಿದ್ದು, ಅಧಿಕಾರಿಯ ಬೇಜವಾಬ್ದಾರಿತನದ ವಿರುದ್ಧ ಇಲಾಖಾ ವಿಚಾರಣೆ ಹಾಗೂ ಕಠಿಣ ಶಿಸ್ತುಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆಗೆ ಮಹತ್ವದ ಶಿಫಾರಸು ಮಾಡಲಾಗಿದೆ.
ಮಾಹಿತಿ ಆಯೋಗದ 4ನೇ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಅವರು ಈ ಕಠಿಣ ಆದೇಶ ಹೊರಡಿಸಿದ್ದಾರೆ. ಎಸಿ ಕಿರಣ್ ಅವರು ತಮ್ಮ ಕಚೇರಿಗೆ ಬರುವ ಅರ್ಜಿಗಳನ್ನು ಕಸದ ಬುಟ್ಟಿಗೆ ಎಸೆಯುವುದು ಮಾತ್ರವಲ್ಲದೆ, ಆಯೋಗದಲ್ಲಿ ನಡೆಯುವ ಅರ್ಜಿಗಳ ವಿಚಾರಣೆಗೂ ಹಾಜರಾಗುತ್ತಿರಲಿಲ್ಲ. ತಮ್ಮ ಪರವಾಗಿ ಯಾವುದೇ ಪ್ರತಿನಿಧಿಯನ್ನೂ ಕಳುಹಿಸದೆ ಉದಾಸೀನ ಧೋರಣೆ ತಳೆದಿದ್ದಕ್ಕೆ ಆಯೋಗ ಈ ಬಿಸಿ ಮುಟ್ಟಿಸಿದೆ.

ದಂಡಕ್ಕೆ ಕಾರಣವಾದ ಆ ಮೂರು ಪ್ರತ್ಯೇಕ ಪ್ರಕರಣಗಳು ಯಾವುವು?

ಪ್ರಕರಣ 1 (ಗೊಲ್ಲಹಳ್ಳಿ ಗ್ರಾಮದ ವಿವಾದ): ದಾಸನಪುರ ಹೋಬಳಿಯ ಗೊಲ್ಲಹಳ್ಳಿಯ ಅಂಜನಮೂರ್ತಿ ಬಿ. ಅವರು 2024ರ ಮಾರ್ಚ್ 25 ರಂದು ಕಚೇರಿಯ ದಾಖಲೆಯೊಂದನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ನಿಯಮದ ಪ್ರಕಾರ 30 ದಿನಗಳಲ್ಲಿ ಮಾಹಿತಿ ನೀಡಬೇಕಿದ್ದರೂ ಎಸಿ ಕಚೇರಿ ಮೌನ ವಹಿಸಿತ್ತು. ಆಯೋಗದ ವಿಚಾರಣೆಗೂ ಅಧಿಕಾರಿ ಕಿರಣ್ ಗೈರಾದ ಹಿನ್ನೆಲೆಯಲ್ಲಿ 25 ಸಾವಿರ ರೂ. ದಂಡ ವಿಧಿಸಲಾಗಿದೆ.
ಪ್ರಕರಣ 2 (ಕಡತ ನಾಪತ್ತೆ ನಾಟಕ - 5 ಸಾವಿರ ರೂ. ಪರಿಹಾರ): ಕೆಂಗೇರಿಯ ಜೆ. ರಾಜೇಂದ್ರರಾಜು ಅವರು ಗವಿಪುರಂ ಗ್ರಾಮಕ್ಕೆ ಸಂಬಂಧಿಸಿದ ಮಾಹಿತಿ ಕೋರಿ 2024ರ ಡಿಸೆಂಬರ್ 26 ರಂದು ಅರ್ಜಿ ಸಲ್ಲಿಸಿದ್ದರು. ಕಡತ ಲಭ್ಯವಿಲ್ಲದಿದ್ದರೆ ಕರ್ನಾಟಕ ಪಬ್ಲಿಕ್ ರೆಕಾರ್ಡ್ ಆಕ್ಟ್-2012ರ ಅಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಿಸಲು ಆಯೋಗ ಸೂಚಿಸಿತ್ತು. ಆದರೆ ಅಧಿಕಾರಿ ಇದನ್ನು ಪಾಲಿಸದ ಕಾರಣ 25 ಸಾವಿರ ರೂ. ದಂಡ ವಿಧಿಸಲಾಗಿದ್ದು, ಅರ್ಜಿದಾರರಿಗೆ 5 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಲಾಗಿದೆ.
ಪ್ರಕರಣ 3 (ಸ್ಥಿರ ಆಸ್ತಿ ದಾಖಲೆ ಮುಚ್ಚಿಟ್ಟ ಆರೋಪ): ವೈಟ್‌ಫೀಲ್ಡ್‌ನ ಚಲಪತಿ ಜೆ. ಅವರು ಪಟ್ಟಂದೂರು ಅಗ್ರಹಾರ ಗ್ರಾಮದ ಜಮೀನಿಗೆ ಸಂಬಂಧಿಸಿದ ಕಡತಗಳನ್ನು ಕೋರಿ 2024ರ ನವೆಂಬರ್ 26 ರಂದು ಅರ್ಜಿ ಸಲ್ಲಿಸಿದ್ದರು. ಆಯೋಗದ ಕಟ್ಟುನಿಟ್ಟಿನ ನಿರ್ದೇಶನದ ಹೊರತಾಗಿಯೂ ಮಾಹಿತಿ ನೀಡದೆ, ವಿಚಾರಣೆಗೂ ಹಾಜರಾಗದ ಕಾರಣ ಈ ಪ್ರಕರಣದಲ್ಲೂ 25 ಸಾವಿರ ರೂ. ದಂಡ ಜಡಿಯಲಾಗಿದೆ.

ಉನ್ನತ ಅಧಿಕಾರಿಗಳಿಗೆ ಆಯೋಗದ ಖಡಕ್ ನಿರ್ದೇಶನ

ಮೂರು ಪ್ರಕರಣಗಳಲ್ಲಿ ಉದ್ದೇಶಪೂರ್ವಕ ನಿರ್ಲಕ್ಷ್ಯ ತೋರಿರುವ ಎಸಿ ಕಿರಣ್ ವಿರುದ್ಧ ತಕ್ಷಣವೇ ಇಲಾಖಾ ವಿಚಾರಣೆ ನಡೆಸಿ, ಕೆಸಿಎಸ್‌ಆರ್ (KCSR) ನಿಯಮಾವಳಿಗಳ ಅನ್ವಯ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಯೋಗ ಸೂಚಿಸಿದೆ. ಈ ಕುರಿತು ಕೈಗೊಂಡ ಕ್ರಮಗಳ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಾಂತರಾಜ್ ಅವರಿಗೆ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಕಡ್ಡಾಯ ನಿರ್ದೇಶನ ನೀಡಿದ್ದಾರೆ.

ಮುಖ್ಯ ಕಾರ್ಯದರ್ಶಿಗೆ ಪತ್ರ: ಬೆಂಗಳೂರು ಜಿಲ್ಲಾಡಳಿತದ ಹಳ್ಳ ಹಿಡಿದ ವ್ಯವಸ್ಥೆ!

ಬೆಂಗಳೂರು ನಗರ ಜಿಲ್ಲಾಡಳಿತದ ವ್ಯಾಪ್ತಿಯ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಾಲೂಕು ಕಚೇರಿಗಳಲ್ಲಿ ಆರ್‌ಟಿಐ ಕಾಯ್ದೆ ಸಂಪೂರ್ಣ ದುರ್ಬಲಗೊಂಡಿರುವುದರ ಬಗ್ಗೆ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ನೇರ ಪತ್ರ ಬರೆದಿದ್ದಾರೆ.
ನ್ಯಾಯದಾನ ವಿಳಂಬ ಸಹ ನ್ಯಾಯ ನಿರಾಕರಣೆ ಆಗುತ್ತದೆ ಎಂದು ಪತ್ರದಲ್ಲಿ ಮಾರ್ಮಿಕವಾಗಿ ಉಲ್ಲೇಖಿಸಿರುವ ಅವರು, ಬೆಂಗಳೂರು ಜಿಲ್ಲಾಡಳಿತದಲ್ಲಿ ಸಾರ್ವಜನಿಕರಿಗೆ ಸಕಾಲಕ್ಕೆ ಮಾಹಿತಿ ಸಿಗುತ್ತಿಲ್ಲ. ಅಧಿಕಾರಿಗಳು ಆಯೋಗದ ಆದೇಶಗಳನ್ನು ಉದಾಸೀನತೆಯಿಂದ ನೋಡುತ್ತಿದ್ದಾರೆ. ಹೀಗಾಗಿ ಇಡೀ ಜಿಲ್ಲಾಡಳಿತಕ್ಕೆ ಸರ್ಕಾರದಿಂದ ಸೂಕ್ತ ಮತ್ತು ಕಠಿಣ ನಿರ್ದೇಶನ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿಯವರನ್ನು ಕೋರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net