ವೇಮಗಲ್:ಗೃಹಜ್ಯೋತಿ ಯೋಜನೆಯಡಿ ಮೀಟರ್ ರೀಡರ್ಗಳು, ಲೈನ್ಮೆನ್ಗಳು ಪ್ರತಿ ಮನೆಗೆ ಭೇಟಿ ನೀಡಿ, ಕುಟುಂಬದ ವಿವರ ಸಂಗ್ರಹಿಸಿ ಅರ್ಜಿ ಭರ್ತಿ ಮಾಡಲಿದ್ದಾರೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ವಿ.ಎಂ.ಮುನಿಯಪ್ಪ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಫಲಾನುಭವಿಗಳಿಂದ ಮನೆ&ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಮಾತನಾಡಿದ ಅವರು, ಫಲಾನುಭವಿಗಳು ಸರಿಯಾದ ಮಾಹಿತಿ ನೀಡಿ ಪರಿಶೀಲನಾ ಕಾರ್ಯಕ್ಕೆ ಸಹಕರಿಸಬೇಕು ಎಂದರು.
ಆಟೋದಲ್ಲಿ ಧ್ವನಿವರ್ಧಕಗಳ ಮೂಲಕ, ವಿವಿಧ ಜಾಗೃತಿ ಕಾರ್ಯಕ್ರಮಗಳ ಮೂಲಕ ಜನರಿಗೆ ಮತ್ತಷ್ಟು ಮಾಹಿತಿ ನೀಡಬೇಕು. ಜನರಲ್ಲಿನ ಗೊಂದಲ, ತಪ್ಪು ಮಾಹಿತಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ನಿವಾರಣೆ ಮಾಡಿ ಸೌಲಭ್ಯ ದೊರಕುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್ ಮಾತನಾಡಿ, ಗೃಹಜ್ಯೋತಿ ಯೋಜನೆಯ ಸೌಲಭ್ಯ ಅರ್ಹರಿಗೆ ತಲುಪುವಂತೆ ಮಾಡುವುದು, ದಾಖಲೆ ನವೀಕರಿಸುವ ಉದ್ದೇಶ ಹೊಂದಲಾಗಿದ್ದು, ಸಾರ್ವಜನಿಕರು ಅಗತ್ಯ ದಾಖಲೆ ನೀಡಿ ಸಹಕರಿಸಬೇಕು ಎಂದರು.
ಸಹಾಯಕ ಇಂಜಿನಿಯರ್ ಗುರಪ್ಪ ಮಾತನಾಡಿ, ಯೋಜನೆಯ ಕುರಿತು ಈಗಾಗಲೇ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದ್ದು, ನಮ್ಮ ವ್ಯಾಪ್ತಿಯಲ್ಲಿ ಸುಮಾರು ಶೇ.75 ಪರಿಶೀಲನಾ ಕಾರ್ಯ ಪೂರ್ಣಗೊಂಡಿದೆ. ಸರ್ವರ್ ಸಮಸ್ಯೆಯಿಂದ ಸ್ವಲ್ಪ ವಿಳಂಬವಾಗುತ್ತಿದ್ದು, ಶೀಘ್ರದಲ್ಲೇ ಆಟೋಗಳಲ್ಲಿ ಪ್ರಚಾರ ಮಾಡಿಸುತ್ತೇವೆ. ಸಾರ್ವಜನಿಕರು ಅರ್ಜಿ ಪರಿಶೀಲನೆ ಜತೆಗೆ ದಾಖಲೆ ನವೀಕರಣಕ್ಕೆ ನೆರವು ನೀಡಲಾಗುವುದು ಎಂದರು.