ಹೊಸಬರಿಗೆ ಮಂತ್ರಿಯಾಗುವ ಆಸೆ ಇದೆ! DK Shivakumar ಮಾತಿನ ಹಿಂದಿರುವ ಅಸಲಿ ಮರ್ಮವೇನು?

DK Shivakumar
DK Shivakumar
Published on
ಬೆಂಗಳೂರು: ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇಡ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್( DK Shivakumar) ಅವರು ತಿಳಿಸಿದರು.
ನಗರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು. ಗುರುವಾರದಂದು ಸಭೆ ಸೇರಿದ್ದ ಸಚಿವರು, ಶಾಸಕರು ದೆಹಲಿಗೆ ಹೋಗಿ ನಿಮ್ಮ ಪರವಾಗಿ ಮನವಿ ಮಾಡುತ್ತಾರಂತೆ ಎಂದು ಕೇಳಿದಾಗ, "ದಯವಿಟ್ಟು ಬೇಡ ಎಂದು ಮನವಿ ಮಾಡುತ್ತೇನೆ. ನಿಮ್ಮ ಸಮಸ್ಯೆಗಳು ಇದ್ದರೆ, ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರೆ, ಅಧಿಕಾರ, ಹುದ್ದೆ ಬೇಕು ಎಂದರೆ ಹೋಗಿ ಮನವಿ ಮಾಡಿಕೊಳ್ಳಿ. ನನ್ನ ವಿಚಾರಕ್ಕೆ ಹೋಗುವುದು ಬೇಡ" ಎಂದು ತಿಳಿಸಿದರು.

ಯಾವ ಶಕ್ತಿ ಪ್ರದರ್ಶನ ಇಲ್ಲ

ಬಾಲಕೃಷ್ಣ ಅವರ ಜನ್ಮದಿನದ ಹೆಸರಿನಲ್ಲಿ 40ಕ್ಕೂ ಹೆಚ್ಚು ಶಾಸಕರು ಸೇರಿದ್ದು, ಶಕ್ತಿ ಪ್ರದರ್ಶನ ಮಾಡಲಾಗುತ್ತಿದೆ ಎಂದು ಕೇಳಿದಾಗ, "ಯಾವ ಶಕ್ತಿ ಪ್ರದರ್ಶನವೂ ಇಲ್ಲ. ಕೆಲವರು ವಿಶ್ರಾಂತಿ, ಅಧ್ಯಯನಕ್ಕೆ ವಿದೇಶಕ್ಕೆ ಹೋಗುತ್ತಾರೆ. ಕೆಲವರು ದೆಹಲಿಗೆ ಹೋದರೆ, ಮತ್ತೆ ಕೆಲವರು ಭೋಜನ ಕೂಟ ಸೇರುತ್ತಾರೆ. ಅವರ ವೈಯಕ್ತಿಕ ವಿಚಾರಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ" ಎಂದು ತಿಳಿಸಿದರು.

ಹೊಸಬರಿಗೆ ಮಂತ್ರಿಯಾಗುವ ಆಸೆ

ನೀವು ಸಿಎಂ ಆಗಬೇಕು ಎಂದು ಕೆಲಸ ಶಾಸಕರು ಹೇಳಿಕೆ ನೀಡಿದ್ದಾರೆ ಎಂದು ಕೇಳಿದಾಗ, "ಈ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಜೊತೆ ಅವರು ಯಾರು ಮಾತನಾಡಿಲ್ಲ. ಕೆಲವರು ಆಸೆ ಇಟ್ಟುಕೊಂಡಿದ್ದಾರೆ. ಹೊಸಬರಿಗೆ ಮಂತ್ರಿ ಆಗುವ ಆಸೆ ಇರುತ್ತದೆ. ನಾನು, ಪರಮೇಶ್ವರ್, ಹೆಚ್ ಕೆ ಪಾಟೀಲ್, ಮಹದೇವಪ್ಪ, ಸಿದ್ದರಾಮಯ್ಯ ಸೇರಿದಂತೆ ನಾವು ಈಗ ಹಳಬರಾದೆವು. ಚಿಕ್ಕ ವಯಸ್ಸಿನಲ್ಲೇ ಮಂತ್ರಿಯಾದವರು. ಈಗ ಹೊಸಬರು ಮಂತ್ರಿ ಆಗಬೇಕು ಎಂಬ ಆಸೆ ವ್ಯಕ್ತಪಡಿಸುತ್ತಿದ್ದಾರೆ. ನೋಡೋಣ, ನಾನು ಈ ವಿಚಾರವನ್ನು ದೆಹಲಿ ಅವರ ಗಮನಕ್ಕೆ ತರುತ್ತೇನೆ" ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net