ಕಾಳ್ಗಿಚ್ಚು ತಡೆಗೆ ಸೈನಿಕರಂತೆ ಸನ್ನದ್ಧರಾಗಿರಿ

ಮೇಲುಕೋಟೆ ಅರಣ್ಯ ಇಲಾಖೆ ಕಚೇರಿಯಲ್ಲಿ ಬೇಸಿಗೆಯಲ್ಲಿ ಅರಣ್ಯದಲ್ಲುಂಟಾಗುವ ಕಾಡ್ಗಿಚ್ಚಿನ್ನು ನಿಯಂತ್ರಿಸುವ ಕ್ರಮ ಮತ್ತು ಮುನ್ನಚ್ಚರಿಕೆ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ವನ್ಯಜೀವಿ ವಿಭಾಗದ ಮೈಸೂರು ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಭುಗೌಡ ಉದ್ಘಾಟಿಸಿದರು.
ಮೇಲುಕೋಟೆ ಅರಣ್ಯ ಇಲಾಖೆ ಕಚೇರಿಯಲ್ಲಿ ಬೇಸಿಗೆಯಲ್ಲಿ ಅರಣ್ಯದಲ್ಲುಂಟಾಗುವ ಕಾಡ್ಗಿಚ್ಚಿನ್ನು ನಿಯಂತ್ರಿಸುವ ಕ್ರಮ ಮತ್ತು ಮುನ್ನಚ್ಚರಿಕೆ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ವನ್ಯಜೀವಿ ವಿಭಾಗದ ಮೈಸೂರು ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಭುಗೌಡ ಉದ್ಘಾಟಿಸಿದರು.
Published on
ಮೇಲುಕೋಟೆ: ಬೇಸಿಗೆ ಅವಧಿಯಲ್ಲಿ ಅರಣ್ಯದೊಳಗೆ ಕಾಣಿಸಿಕೊಳ್ಳುವ ಕಾಳ್ಗಿಚ್ಚನ್ನು ತಕ್ಷಣ ನಿಯಂತ್ರಣಕ್ಕೆ ತರಲು ಅರಣ್ಯ ಇಲಾಖೆ ಸಿಬ್ಬಂದಿ ಸೈನಿಕರಂತೆ ಸನ್ನದ್ಧರಾಗಿರಬೇಕು ಎಂದು ವನ್ಯಜೀವಿ ವಲಯದ ಮೈಸೂರು ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಭುಗೌಡ ಹೇಳಿದರು.

ಮೇಲುಕೋಟೆಯ ಅರಣ್ಯ ಇಲಾಖೆ ಕಚೇರಿಯಲ್ಲಿ ಕಾಳ್ಗಿಚ್ಚು ನಿಯಂತ್ರಿಸುವ ಬಗ್ಗೆ ಸಿಬ್ಬಂದಿಗೆ ಅರಿವು ಮೂಡಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಾಮಾನ್ಯವಾಗಿ ಕಾಡಿನೊಳಗೆ ಬೇಸಿಗೆ ವೇಳೆಯಲ್ಲಿ ಅಗ್ನಿ ಅವಘಡಗಳು ಸಂಭವಿಸಿದಾಗ ತುರ್ತು ಹಾಗೂ ಪರಿಣಾಮಕಾರಿಯಾಗಿ ಸ್ಪಂದಿಸಲು ಸಿಬ್ಬಂದಿ ವಾಹನ ಹಾಗೂ ನೀರಿನ ಕ್ಯಾನ್ ಬಳಸಿಕೊಳ್ಳಬೇಕು. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಬೇಕು. ಈ ಮೂಲಕ ಅರಣ್ಯ ಹಾಗೂ ವನ್ಯಜೀವಿ ಸಂಪತ್ತಿಗೆ ಹೆಚ್ಚು ಹಾನಿಯಾಗದಂತೆ ತಡೆಯಬಹುದು ಎಂದರು.

ಬೆಂಕಿಯಿಂದಾಗುವ ಹಾನಿಯನ್ನು ತಡೆಗಟ್ಟಲು ಮುಂಜಾಗ್ರತೆ ವಹಿಸುವುದು ಮುಖ್ಯ. ಅರಣ್ಯದೊಳಗೆ ಬೆಂಕಿ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸುವ ಕುರಿತು ಕಾಡಂಚಿನ ಗ್ರಾಮಗಳಲ್ಲಿ ಅರಿವು ಮೂಡಿಸಲಾಗಿದೆ. ಗ್ರಾಮಗಳ ಮುಖಂಡರು ಹಾಗೂ ಆದಿವಾಸಿ ನಾಯಕರ ನೇತೃತ್ವದಲ್ಲಿ ಸಮನ್ವಯ ಸಭೆಗಳನ್ನು ನಡೆಸಿ ಅರಣ್ಯ ಹಾಗೂ ವನ್ಯಜೀವಿ ಸಂಪತ್ತಿನ ಮಹತ್ವ ಹಾಗೂ ಕಾಳ್ಗಿಚ್ಚಿನ ದುಷ್ಪರಿಣಾಮಗಳನ್ನು ಮನವರಿಕೆ ಮಾಡಲಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಬೆಂಕಿ ಹಾಕುವುದು, ಬೀಡಿ, ಸಿಗರೇಟು ಸೇದಿ ಎಸೆಯಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಬೇಕು ಎಂದರು.

ಮಂಡ್ಯ ವಿಭಾಗದ ವನ್ಯಜೀವಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಘು ಮಾತನಾಡಿ, ಅಮೂಲ್ಯ ಔಷಧೀಯ ಸಸ್ಯಗಳು ಮತ್ತು ಜೀವಸಂಕುಲಗಳು ಪ್ರಾಣಿಗಳಗೆ ಕಾಳ್ಗಿಚ್ಚು ಮಾರಕವಾಗಲಿದೆ. ಸಣ್ಣ ಅವಘಡಕ್ಕೂ ಆಸ್ಪದವಾಗದಂತೆ ತಡೆಯಲು ತಿಂಗಳ ಮುನ್ನವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಹದ್ದಿನ ಕಣ್ಣಿಟ್ಟು ಸಿಬ್ಬಂದಿ ಕಾವಲು ಕಾಯಬೇಕು. ಒಂದು ವೇಳೆ ಬೆಂಕಿ ಅವಘಡ ಸಂಭವಿಸಿದರೆ ನಿಯಂತ್ರಿಸಲು ಅನುಕೂಲವಾಗುವಂತೆ ಬೆಂಕಿ ನಂದಿಸುವ ಬೋಯರ್ಸ್, ಸ್ಪ್ರೇಯರ್ಸ್, ಫೈರ್ ಬೇಯರ್ಸ್‌ಗಳನ್ನು ಸಿದ್ಧಗೊಳಿಸಲಾಗಿದೆ. ಅರಣ್ಯ ಸಿಬ್ಬಂದಿ, ಫೈರ್ ವಾಚರ್ ಅಗ್ನಿಶಾಮಕ ದಳ ನಮಗೆ ನೆರವಾಗಲಿದೆ ಎಂದರು.

ವನ್ಯಜೀವಿ ವಲಯದ ಪಾಂಡವಪುರ ವಲಯ ಅರಣ್ಯಾಧಿಕಾರಿ ಎಂ.ಸಿ.ಯೋಗೇಶ್ ನಾಗಮಂಗಲ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮು, ಸಂಪನ್ಮೂಲ ವ್ಯಕ್ತಿ ಕಾಂತರಾಜು, ಕೆ.ಆರ್.ಪೇಟೆ ವಲಯ ಅರಣ್ಯಾಧಿಕಾರಿ ಅನಿತಾ, ಮೇಲುಕೋಟೆ ಅರಣ್ಯವಲಯದ ವಲಯ ಸಂರಕ್ಷಣಾಧಿಕಾರಿ ಪ್ರಶಾಂತ್, ಅರಣ್ಯಾಧಿಕಾರಿ ಕೋಟ್ರೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net