ಬಸವಣ್ಣನ ತತ್ವ ಅನುಕರಣೀಯ

ವಿಜಯಪುರ ನಗರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವಗುರು ಬಸವೇಶ್ವರರ 893ನೇ ಜಯಂತ್ಯುತ್ಸವ ಉದ್ಘಾಟಿಸಿ ಶಂಕರ ಬಿದರಿ ಮಾತನಾಡಿದರು. ವಿಜಯಾ ಕೋರಿಶೆಟ್ಟಿ, ಶಂಕರಗೌಡ ಸೋಮನಾಳ ಮತ್ತಿತರರಿದ್ದಾರೆ.
ವಿಜಯಪುರ ನಗರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವಗುರು ಬಸವೇಶ್ವರರ 893ನೇ ಜಯಂತ್ಯುತ್ಸವ ಉದ್ಘಾಟಿಸಿ ಶಂಕರ ಬಿದರಿ ಮಾತನಾಡಿದರು. ವಿಜಯಾ ಕೋರಿಶೆಟ್ಟಿ, ಶಂಕರಗೌಡ ಸೋಮನಾಳ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ವೀರಶೈವ ಲಿಂಗಾಯತ ಅಧ್ಯಕ್ಷ ಶಂಕರ ಬಿದರಿ ಅಭಿಮತ
  • ಜಯಂತ್ಯುತ್ಸವ ಉದ್ಘಾಟನೆ
ವಿಜಯಪುರ: ಬಸವಣ್ಣ 12ನೇ ಶತಮಾನದಲ್ಲಿಯೇ ಸಮಾನತೆ, ಭ್ರಾತೃತ್ವ, ಸಾಮಾಜಿಕ ನ್ಯಾಯ ಮತ್ತು ಮಾನವೀಯತೆ ಎಂಬ ಮೂಲಭೂತ ತತ್ವಗಳನ್ನು ಪ್ರತಿಪಾದಿಸಿದ್ದು, ಅವು ಇಂದಿನ ಪ್ರಜಾಪ್ರಭುತ್ವದ ಮೂಲಾಧಾರಗಳಾಗಿವೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷ ಶಂಕರ ಬಿದರಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ಭವನದಲ್ಲಿ ಬಸವೇಶ್ವರ ಅಧ್ಯಯನ ಪೀಠದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವಗುರು ಬಸವೇಶ್ವರರ
893ನೇ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ವಚನಗಳು ಕೇವಲ ಧಾರ್ಮಿಕ ಉಪದೇಶಗಳಲ್ಲ; ಅವು ಜೀವನಪಾಠಗಳಾಗಿವೆ. ಕಾಯಕವೇ ಕೈಲಾಸ ಎಂಬ ಅವರ ಸಂದೇಶವು ಕೆಲಸದ ಗೌರವವನ್ನು ಎತ್ತಿ ಹಿಡಿಯುತ್ತದೆ. ಪ್ರತಿಯೊಬ್ಬರೂ ತಮ್ಮ ಪರಿಶ್ರಮದಿಂದ ಜೀವನ ನಡೆಸಬೇಕು. ಅಲ್ಲದೇ, ಯಾವುದೇ ಕೆಲಸವನ್ನು ಹೀನ-ಶ್ರೇಷ್ಠತೆಗಳ ಅಳತೆಯಲ್ಲಿ ನೋಡುವುದನ್ನು ತೊರೆದು ಗೌರವದಿಂದ ಕಾಣಬೇಕು ಎಂದು ಅವರು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ವಿದ್ಯಾರ್ಥಿನಿಯರು ಬಸವಣ್ಣರ ಆಚಾರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಸೇವೆ ಮಾಡುವ ಜತೆಗೆ ಅಕ್ಕಮಹಾದೇವಿಯ ವಿಚಾರಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಬೋಧಿಸಿದ ತತ್ವಗಳು ಕಾಲಾತೀತವಾಗಿದ್ದು, ಇಂದಿನ ಸಮಾಜಕ್ಕೂ ದಿಕ್ಕು ತೋರಿಸುತ್ತಿವೆ ಎಂದರು.
ಜಿಲ್ಲಾ ವೀರಶೈವ ಮಹಾಸಭಾದ ಗೌರವ ಅಧ್ಯಕ್ಷೆ ಭಾನುದೇವಿ ಸಂಕಣ್ಣವರ ಮತ್ತು ತರಬೇತಿನಿರತ ಐಪಿಎಸ್ ಅಧಿಕಾರಿ ಈಶಿತಾ ಗುಪ್ತಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕುಲಸಚಿವ ಶಂಕರಗೌಡ ಸೋಮನಾಳ ಬಸವಣ್ಣನವರ ಕುರಿತು ರಸಪ್ರಶ್ನೆ, ಚರ್ಚಾ ಸ್ಪರ್ಧೆ ಹಾಗೂ ವಚನ ವಾಚನ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಿದರು.
ಮೌಲ್ಯಮಾಪನ ಕುಲಸಚಿವ ಬಿ.ಎಲ್. ಲಕ್ಕಣ್ಣವರ, ಸಾಹಿತಿಗಳಾದ ಎಂ.ಜಿ. ಯಾದವಾಡ, ಕಾಶೀನಾಥ ಅಣ್ಣೇಪನ್ನವರ ಮತ್ತಿತರರಿದ್ದರು.
ತೇಜಸ್ವಿನಿ ನಾಯಕ ಪ್ರಾರ್ಥಿಸಿದರು. ರಾಜಕುಮಾರ ಮಾಲಿಪಾಟೀಲ ಸ್ವಾಗತಿಸಿದರು. ಗವಿಸಿದ್ಧಪ್ಪ ಆನಂದಳ್ಳಿ ಪರಿಚಯಿಸಿದರು. ನಂದಿನಿ ಪಾಟೀಲ ನಿರೂಪಿಸಿದರು. ಸೀಭಾ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net