ರಾಜ್ಯದಲ್ಲಿ ಈಗ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದೆಯಷ್ಟೆ. ನಮ್ಮ ಸರಕಾರದಲ್ಲಿರುವ ಪ್ರತಿಯೊಬ್ಬರ ಆದರ್ಶವೆಂದರೆ, ಸಾಮಾಜಿಕ ಕ್ರಾಂತಿಕಾರಿಯಾಗಿದ್ದ ಬಸವಣ್ಣ. ಉಳಿದ ಎರಡು ಮಾದರಿಗಳೆಂದರೆ, ಸ್ವತಂತ್ರ ಭಾರತಕ್ಕೆ ಸಮಾನತೆಯ ಆಶಯವಿರುವ ಸಂವಿಧಾನವನ್ನು ಕೊಟ್ಟ ಅಂಬೇಡ್ಕರ್ ಮತ್ತು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಕಂಡ ವಿಶ್ವಮಾನವ ಪ್ರಜ್ಞೆಯ ರಸಋಷಿ ಕುವೆಂಪು. ಹೀಗಾಗಿಯೇ ಸಿದ್ದರಾಮಯ್ಯನವರು ಬಸವಣ್ಣನನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದ್ದಾರೆ. ಅಲ್ಲದೆ, ಸರಕಾರದ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಪ್ರದರ್ಶನ ಕಡ್ಡಾಯವಾಗಿದೆ. ಇದರಾಚೆಗೆ, ನಮ್ಮ ಸರಕಾರ ಜಾರಿಗೊಳಿಸಿರುವ ಸಮಸಮಾಜ ನಿರ್ಮಾಣ, ಬಡವರ ಸಬಲೀಕರಣ, ಮಹಿಳೆಯರ ಸಶಕ್ತೀಕರಣ, ಅಲ್ಪಸಂಖ್ಯಾತರ ಶ್ರೇಯಸ್ಸು, ಬಹುಸಂಖ್ಯಾತರ ಕಲ್ಯಾಣ, ಮಹಿಳೆಯರ ಉನ್ನತಿ ಇವೆಲ್ಲವುಗಳ ಹಿಂದೆಯೂ ಬಸವಣ್ಣನ ಉದಾತ್ತ ಮತ್ತು ರಚನಾತ್ಮಕ ಚಿಂತನೆಗಳಿವೆ. ಎಲ್ಲರನ್ನೂ ಒಳಗೊಳ್ಳುವ ಸುಸ್ಥಿರ ಅಭಿವೃದ್ಧಿಯಲ್ಲಿ ಬಸವಣ್ಣನ ಮಾತಾದ ‘ಇವ ನಮ್ಮವ, ಇವ ನಮ್ಮವ ಎಂದೆಣಿಸಯ್ಯ’ ಎನ್ನುವ ಭಾವನೆಯ ಬೇರಿದೆ.