ಶಹಾಬಾದ್: ಪಟ್ಟಣದ ಶ್ರೀ ಜಗದಂಬಾ ದೇವಿ ದೇಗುಲದಲ್ಲಿ ನಗರದಲ್ಲಿರುವ ನಾಲ್ಕು ಬಂಜಾರ ತಾಂಡಾಗಳ ನಾಯಕರು, ಕಾರಬಾರಿ, ಡಾವ, ಸರಪಂಚ, ಹಿರಿಯ ಮುಖಂಡರ ಸಮಿತಿ ಸಭೆ ಸೋಮವಾರ ನಡೆಯಿತು. ಹಿರಿಯ ಮುಖಂಡರಾದ ಕಿಶನ್ ನಾಯಕ, ಸುರೇಶ ನಾಯಕ, ಸೂರಜ್ ರಾಠೋಡ್ ಮಾತನಾಡಿ, ವಧು-ವರ ಕುಟುಂಬದವರು 1 ತೊಲ ಬಂಗಾರ ನೀಡಬೇಕು. ವಿವಾಹ ಉಡುಗೊರೆಗಳಿಗಾಗಿ ವಧು ಕುಟುಂಬದವರು ವರನಿಗೆ 61,000 ರೂ. ನೀಡಬೇಕು. ವಿವಾಹ ಸಂದರ್ಭದಲ್ಲಿ ತಾಳಿ, ನಾಲ್ಕು ಗುಂಡು ವಧುವಿಗೆ ನೀಡಬೇಕು. ಸಾಡಿ ಕಾರ್ಯಕ್ರಮ ಸರಳವಾಗಿರಬೇಕು. ವಿವಾಹದಲ್ಲಿ ಧ್ವನಿವರ್ಧಕ, ಡಿಜೆ ಸಂಪೂರ್ಣ ನಿಷೇಧಿಸಲಾಗಿದೆ. ತಾಯಿಗೆ ನೀಡುವ ಒಂದು ಜೋಡಿ ಬಟ್ಟೆ ಮಾತ್ರ ನೀಡಬೇಕು. ಉಡುಗೊರೆ ನಿಷೇಧಿಸಲಾಗಿದೆ. ಈ ಎಲ್ಲ ಷರತ್ತುಗಳಿಗೆ ಸಮಾಜದವರು ಬದ್ಧವಾಗಿರಬೇಕು. ನಿಯಮ ಉಲ್ಲಂಸಿದ್ದಲ್ಲಿ 5 ಲಕ್ಷ ರೂ. ದಂಡ ಸಮಾಜಕ್ಕೆ ನೀಡಬೇಕಾಗುತ್ತದೆ ಎಂದು ರ್ನಿಣಯ ಕೈಗೊಳ್ಳಲಾಯಿತು ಎಂದು ಹೇಳಿದರು. ಕುಮಾರ ಚವ್ಹಾಣ್, ಹಣಮಂತ ಪವಾರ್, ರವಿ ರಾಠೋಡ್, ದಿಲೀಪ್ ನಾಯಕ, ದೇವರಾಜ ರಾಠೋಡ್, ಸುಭಾಷ ನಾಯಕ್, ವಿಶ್ವನಾಥ ರಾಠೋಡ್, ಧಮುರ್ ನಾಯಕ, ಭರತ ರಾಠೋಡ್, ಮಂಗಲ ನಾಯಕ, ರಮೇಶ ರಾಠೋಡ್ ಇತರರಿದ್ದರು.