ರಾಜ್ಯಾದ್ಯಂತ ಮದ್ಯ-ಮಾಂಸ ಮಾರಾಟ ನಿಷೇಧಿಸಿ

ಉಮೇಶ ಕೋಳಕೂರ
ಉಮೇಶ ಕೋಳಕೂರ
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಪಾಧ್ಯಕ್ಷ ಉಮೇಶ ಕೋಳಕೂರ ಒತ್ತಾಯ
  • ಬಸವ ಜಯಂತಿ, ಅಕ್ಷಯ ತೃತೀಯಾ ಹಿನ್ನೆಲೆ
ವಿಜಯಪುರ: ಮಹಾತ್ಮ ಬಸವೇಶ್ವರ ಜಯಂತಿ ಹಾಗೂ ಅಕ್ಷಯ ತೃತೀಯ ಪ್ರಯುಕ್ತ ರಾಜ್ಯಾದ್ಯಂತ ಮಾಂಸ-ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕೋಳಕೂರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಏ.20ರಂದು ವಿಶ್ವಗುರು ಬಸವಣ್ಣನವರ ಜನ್ಮದಿನ ಹಾಗೂ ಹಿಂದೂಗಳ ಪವಿತ್ರ ಹಬ್ಬವಾದ ಅಕ್ಷಯ ತೃತೀಯಾವನ್ನು ಒಟ್ಟಾಗಿ ಆಚರಿಸಲ್ಪಡುತ್ತಿವೆ. ಅಂದು ರಾಜ್ಯಾದ್ಯಂತ ಮಹಾತ್ಮ ಬಸವೇಶ್ವರರ ದಿವ್ಯ ಸಂದೇಶ ಸಾರುವ ಪ್ರಯತ್ನ ನಡೆಯುತ್ತದೆ. ವಿಶೇಷವಾಗಿ ವಿಜಯಪುರ, ಬಾಗಲಕೋಟೆ ಮತ್ತು ಬೀದರ್ ಭಾಗದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹೀಗಾಗಿ ಅಂದು ಮದ್ಯ ಮತ್ತು ಮಾಂಸ ಮಾರಾಟ ನಿಷೇಧಗೊಳಿಸಿ ಅವರ ಮಹಾತ್ಮರ ಸಂದೇಶ ಪಾಲನೆಗೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.
ವಿಶ್ವಗುರು ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ...ಎಂದು ಸಾರಿದವರು. ಅಹಿಂಸೆ ಮತ್ತು ಜೀವಕಾರುಣ್ಯ ಅವರ ತತ್ವಗಳ ಮೂಲಾಧಾರ. ಅಂತಹ ಮಹಾಪುರುಷರ ಜಯಂತಿಯ ದಿನದಂದು ಜಿಲ್ಲೆಯಾದ್ಯಂತ ಮಾಂಸದ ಅಂಗಡಿಗಳು ತೆರೆದಿರುವುದು ಮತ್ತು ಪ್ರಾಣಿ ವಧೆ ಮಾಡುವುದು ಅವರ ತತ್ವಗಳಿಗೆ ಹಾಗೂ ಭಕ್ತರ ಭಾವನೆಗಳಿಗೆ ತೀವ್ರ ಧಕ್ಕೆ ತರುತ್ತದೆ. ಅದೇ ರೀತಿ, ಅಕ್ಷಯ ತೃತೀಯದಂತಹ ಮಂಗಳಕರ ದಿನದಂದು ಮದ್ಯದಂತಹ ವಸ್ತುಗಳ ಮಾರಾಟವು ಹಬ್ಬದ ಪಾವಿತ್ರತೆಯನ್ನು ಕೆಡಿಸುತ್ತದೆ ಎಂದು ಕೋಳಕೂರ ತಿಳಿಸಿದ್ದಾರೆ.
ಅಂದು ವಿಜಯಪುರ ಜಿಲ್ಲೆಯಾದ್ಯಂತ ಲಕ್ಷಾಂತರ ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಅನ್ನದಾಸೋಹ ಹಾಗೂ ಮೆರವಣಿಗೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಜನರ ಧಾರ್ಮಿಕ ಭಾವನೆಗಳನ್ನು ಗೌರವಿಸುವ ಸಲುವಾಗಿ ಈ ಕಠಿಣ ಕ್ರಮ ಅನಿವಾರ್ಯವಾಗಿದ್ದು, ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಬಸವ ಜಯಂತಿಯಂದು ಮಾಂಸ ಮಾರಾಟ (ಕಸಾಯಿಖಾನೆ ಸೇರಿ) ಹಾಗೂ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಈ ಕೂಡಲೇ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕೆಂದು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net