ಶಾಲಾ - ಕಾಲೇಜುಗಳ ಬಳಿ ಜಂಕ್‌ಫುಡ್ ಮಾರಾಟ ನಿಷೇಧ : ಆರೋಗ್ಯ ಸಚಿವ ಯು.ಟಿ. ಖಾದರ್

ban on sale of junk food near schools and colleges
ban on sale of junk food near schools and colleges
Published on

ಪ್ರಮುಖ ಮುಖ್ಯಾಂಶಗಳು

  • * ಆಹಾರ ಸುರಕ್ಷತೆ ಇಲಾಖೆಯಿಂದ 134 ಶಾಲಾ ಕಾಲೇಜುಗಳ ಆವರಣದಲ್ಲಿ ಪರಿಶೀಲನೆ
  • * ಮಳೆಗಾಲದಲ್ಲಿ ಹೋಟೆಲ್‌ಗಳಲ್ಲಿ ಬಿಸಿ ನೀರು ಕಡ್ಡಾಯ ಶೀಘ್ರದಲ್ಲೇ ಆದೇಶ
ಬೆಂಗಳೂರು: ಮಕ್ಕಳ ಆರೋಗ್ಯದ ದೃಷ್ಟಿಯಿಂದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಶಾಲಾ-ಕಾಲೇಜುಗಳ ಆವರಣ ಮತ್ತು ಸುತ್ತಮುತ್ತ 50 ಮೀಟರ್ ವ್ಯಾಪ್ತಿಯಲ್ಲಿ ಕುರುಕಲು ತಿಂಡಿಗಳ (ಜಂಕ್ ಫುಡ್) ಮಾರಾಟ ನಿಷೇಧಿಸಿದೆ.
ಈ ಕುರಿತು ನಗರದ ಆರೋಗ್ಯಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಸಚಿವ ಯು.ಟಿ. ಖಾದರ್, ಅಧಿಕ ಕೊಬ್ಬು, ಅಧಿಕ ಸಕ್ಕರೆ ಹಾಗೂ ಅಧಿಕ ಸೋಡಿಯಂ/ ಉಪ್ಪು ಹೊಂದಿರುವ ಆಹಾರ ಪದಾರ್ಥಗಳು ಮತ್ತು ಪಾನೀಯಗಳು ಆರೋಗ್ಯಕ್ಕೆ ಮಾರಕವಾಗಿವೆ. ಇಂತಹ ಆಹಾರ ಪದಾರ್ಥಗಳ ಮಾರಾಟ, ಉಚಿತ ವಿತರಣೆ, ಜಾಹಿರಾತು ಹಾಗೂ ಪ್ರಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಸುರಕ್ಷಿತ, ಗುಣಮಟ್ಟದ ಹಾಗೂ ಆರೋಗ್ಯಕರ ಆಹಾರ ಲಭ್ಯತೆಯನ್ನು ಖಚಿತಪಡಿಸುವ ಉದ್ದೇಶದಿಂದ ಇಲಾಖೆಯು ಜುಲೈ ತಿಂಗಳು ರಾಜ್ಯದಾದ್ಯಂತ 134 ಶಾಲೆ-ಕಾಲೇಜುಗಳ ಆವರಣದಲ್ಲಿ ಪರಿಶೀಲನೆ ನಡೆಸಿದೆ. ಈ ಅವಧಿಯಲ್ಲಿ ಸಂಶಯಾಸ್ಪದ 53 ಆಹಾರ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯದ ವಿಶ್ಲೇಷಣೆಗೆ ಕಳುಹಿಸಲಾಗಿದೆ ಎಂದರು.
3 ಲಕ್ಷ ರೂ. ದಂಡ:
ಶಾಲಾ-ಕಾಲೇಜು ಆವರಣದಲ್ಲಿ ಕುರುಕಲು ತಿಂಡಿಗಳನ್ನು ಮಾರಾಟ ಮಾಡಿದಲ್ಲಿ ಕಾನೂನಿನಡಿ ಕ್ರಮ ಕೈಗೊಳ್ಳಲಾಗುವದು. 3 ಲಕ್ಷ ರೂ. ವರೆಗೂ ದಂಡ ವಿಧಿಸಲು ಅವಕಾಶವಿದೆ. ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳಿಗೂ ಈ ಕುರಿತು ಅರಿವು ಮೂಡಿಸಲಾಗುವುದು. ಅದೇ ರೀತಿ ಶಾಲಾ-ಕಾಲೇಜು ಆವರಣದಲ್ಲಿ ಕುರುಕಲು ತಿಂಡಿಗಳನ್ನು ಮಾರಾಟ ಮಾಡದಂತೆ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳೂ ಕ್ರಮವಹಿಸಬೇಕು. ಪ್ರಮುಖ ಸ್ಥಳಗಳಲ್ಲಿ ಎಚ್ಚರಿಕೆ ಫಲಕಗಳನ್ನು ಪ್ರದರ್ಶಿಸಬೇಕು. ಈ ಕುರಿತ ಶಾಲಾ - ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಲಾಗುವುದು ಎಂದು ಹೇಳಿದರು.
ಕಡ್ಡಾಯ ನೋಂದಣಿ:
ಶಾಲೆಗಳ ಸಮೀಪದಲ್ಲಿರುವ ಎಲ್ಲ ಆಹಾರ ಮಳಿಗೆಗಳು, ಹೋಟೆಲ್‌ಗಳು, ಬೇಕರಿಗಳು, ಕ್ಯಾಂಟೀನ್‌ಗಳು ಹಾಗೂ ಇತರ ಆಹಾರೋದ್ಯಮ ಸಂಸ್ಥೆಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿ ಕಡ್ಡಾಯವಾಗಿ ನೋಂದಣಿಯಾಗಿ, ಪರವಾನಗಿ ಪಡೆಯಬೇಕು. ಸ್ವಚ್ಛತೆ ಹಾಗೂ ಆಹಾರ ಸುರಕ್ಷತಾ ಮಾನಂಡಗಳನ್ನು ಪಾಲಿಸಬೇಕು ಎಂದರು.
ಮಕ್ಕಳಲ್ಲಿ ಜಾಗೃತಿ ಮೂಡಿಸಿ:
ಆಹಾರ ಸುರಕ್ಷತಾ ಅಧಿಕಾರಿಗಳು ಶಾಲಾ-ಕಾಲೇಜುಗಳ ಸುತ್ತಮುತ್ತಲಿನ ಆಹಾರ ಮಳಿಗೆಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ನೋಟಿಸ್ ಜಾರಿ, ಪರವಾನಗಿ ರದ್ಧತಿಯಂತಹ ಕ್ರಮಕ್ಕೆ ಕಾನೂನಿನಡಿ ಅವಕಾಶವಿದೆ. ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿ ಉತ್ತೇಜಿಸಬೇಕು. ಪೌಷ್ಠಿಕ ಆಹಾರದ ಕುರಿತು ಅರಿವು ಮೂಡಿಸಬೇಕು. ಜಂಕ್ ುಡ್ ಸೇವನೆ ತಡೆಯುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಹಾಗೆಯೇ ಶಾಲಾ ಹಾಗೂ ಕಾಲೇಜುಗಳಲ್ಲಿ ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳು ಆಹಾರ ಸುರಕ್ಷತಾ ಮಾರ್ಗಸೂಚಿ ಅನುಸಾರ ಇರಬೇಕು. ಚಿಕ್ಕಿ, ಪಾಪ್ ಕಾರ್ನ್, ಮೊಳಕೆ ಕಾಳುಗಳು, ಹಣ್ಣು, ತರಕಾರಿ ಸೇರಿ ಸುರಕ್ಷಿತ ಹಾಗೂ ಸಮತೋಲನ ಆಹಾರ ಪದಾರ್ಥಗಳನ್ನು ನೀಡಬೇಕು.
ಸುದ್ದಿಗೋಷ್ಠಿಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆಯುಕ್ತ ಕೆ. ಶ್ರೀನಿವಾಸ, ಆರೋಗ್ಯ ಇಲಾಖೆ ಆಯುಕ್ತ ಗುರುದತ್ತ ಹೆಗಡೆ ಇತರರು ಉಪಸ್ಥಿತರಿದ್ದರು.

ಹೋಟೆಲ್‌ಗಳಲ್ಲಿ ಬಿಸಿ ನೀರು ಕಡ್ಡಾಯಕ್ಕೆ ಆದೇಶ

ಮಳೆಗಾಲದ ಸಂದರ್ಭದಲ್ಲಿ ವೈರಾಣು ಜ್ವರ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಅಶುದ್ಧ ಕುಡಿಯುವ ನೀರು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಆದ್ದರಿಂದ ದರ್ಶಿನಿಗಳು, ಕ್ಯಾಂಟೀನ್‌ಗಳು ಸೇರಿ ಎಲ್ಲ ಹೋಟೆಲ್‌ಗಳಲ್ಲಿ ಮಳೆಗಾಲದಲ್ಲಿ ಕಡ್ಡಾಯವಾಗಿ ಬಿಸಿ ನೀರು ಕೊಡಬೇಕು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದರು.

ವಿದ್ಯಾರ್ಥಿಗಳ ಆರೋಗ್ಯ ಸಂರಕ್ಷಣೆ ಹಾಗೂ ಸುರಕ್ಷಿತ ಆಹಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆಯು ಮುಂದಿನ ದಿನಗಳಲ್ಲಿಯೂ ಕಾಲ ಕಾಲಕ್ಕೆ ವಿಶೇಷ ಪರಿಶೀಲನಾ ಅಭಿಯಾನಗಳನ್ನು ಕೈಗೊಳ್ಳುವ ಮುಖಾಂತರ ತಪಾಸಣೆ ನಡೆಸಲಾಗುವುದು. ನಿಯಮ ಉಲ್ಲಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

— - ಕೆ. ಶ್ರೀನಿವಾಸ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆಯುಕ್ತ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net