ಆನ್‌ಲೈನ್ ವೇದಿಕೆಗಳಲ್ಲಿ ಧತ್ತೂರ ಹಣ್ಣು ಮತ್ತು ಅವುಗಳ ಬೀಜ ಮಾರಾಟ ನಿಷೇಧ

Datura Fruti
Datura Fruti
Published on

ಪ್ರಮುಖ ಮುಖ್ಯಾಂಶಗಳು

  • * ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯಿಂದ ಆದೇಶ
  • * ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದುಪಡಿಸುವ ಎಚ್ಚರಿಕೆ

ಬೆಂಗಳೂರು:

ರಾಜ್ಯದ ಆನ್‌ಲೈನ್ ಮಾರಾಟ ವೇದಿಕೆಗಳಲ್ಲಿ ಧತ್ತೂರ ಹಣ್ಣು ಹಾಗೂ ಅವುಗಳ ಬೀಜ ಮಾರಾಟವನ್ನು ನಿಷೇಧಿಸಿ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಆದೇಶ ಹೊರಡಿಸಿದೆ.

ಜತೆಗೆ, ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್, ಬಿಗ್‌ಬಾಸ್ಕೆಟ್‌ನಂತಹ ಸಂಸ್ಥೆಗಳಿಗೆ ವಿಷಕಾರಿ ಧತೂರ ಹಣ್ಣು ಪೂರೈಸುತ್ತಿದ್ದವರ ಆಹಾರ ಪರವಾನಗಿ ಅಮಾನತುಗೊಳಿಸುವಂತೆ ರಾಜ್ಯ ಹಾಗೂ ಕೇಂದ್ರ ಅಂಕಿತಾಧಿಕಾರಿ, ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಈ ಕುರಿತು ಇ-ಕಾಮರ್ಸ್ ತಾಣಗಳಲ್ಲಿ ಧತ್ತೂರ ಹಣ್ಣು ಮಾರಾಟ ಹಾಗೂ ಪ್ರಚಾರ ನಡೆಸಲಾಗುತ್ತಿದೆ. ಸೇವನೆಗೆ ಯೋಗ್ಯವಲ್ಲದ ಹಣ್ಣುಗಳ ಮೇಲೆ ಆಹಾರ ಉತ್ಪನ್ನಗಳಿಗೆ ನೀಡುವ ಎಫ್‌ಎಸ್‌ಎಸ್‌ಎಐ ನೋಂದಣಿ ಸಂಖ್ಯೆ ಹಾಕಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ. ಹೀಗಾಗಿ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006, ನಿಯಮ 2011ರ ಅಡಿಯಲ್ಲಿ ಸಂಬಂಧಿತ ಆನ್‌ಲೈನ್ ಮಾರಾಟ ವೇದಿಕೆಗಳು, ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಬಿಗ್‌ಬಾಸ್ಕೆಟ್, ಸ್ವಿಗ್ಗಿ ಇನ್‌ಸ್ಟಾ ಮಾರ್ಟ್ ಸಂಸ್ಥೆಗಳಲ್ಲಿ ಈ ಹಣ್ಣು ಮಾರಾಟ ನಿಷೇಧಿಸಲಾಗಿದೆ.
ಧತ್ತೂರ ಸಸ್ಯವು ವಿಷಕಾರಿ ಗುಣಲಕ್ಷಣಗಳನ್ನು ಹೊಂದಿದ್ದು, ಅದರ ಹಣ್ಣುಗಳು ಹಾಗೂ ಬೀಜಗಳ ಸೇವನೆಯು ಮಾನವನ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ. ಹೀಗಾಗ ಧತ್ತೂರ ಹಣ್ಣುಗಳು ಹಾಗೂ ಬೀಜಗಳನ್ನು ಆಹಾರ ಬಳಕೆಗಾಗಿ ಅಥವಾ ಸೇವನೆಗಾಗಿ ಮಾರಾಟ ಮಾಡುವುದು, ವಿತರಿಸುವುದು, ಮಾರಾಟಕ್ಕಾಗಿ ಪ್ರದರ್ಶಿಸುವುದು ಅಥವಾ ಯಾವುದೇ ರೀತಿಯ ಆನ್‌ಲೈನ್ ವೇದಿಕೆಗಳ ಮೂಲಕ ಪ್ರಚಾರ ಮಾಡುವುದನ್ನು ನಿಷಿದ್ಧಗೊಳಿಸಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ಬೆಂಗಳೂರಿನ ಜೆ.ಸಿ. ನಗರದ ನಿವಾಸಿಯೊಬ್ಬರು ಇ-ಕಾಮರ್ಸ್ ವೇದಿಕೆಗಳಲ್ಲಿ ಧತ್ತೂರ ಹಣ್ಣು ಮತ್ತು ಬೀಜಗಳ ಮಾರಾಟದ ಬಗ್ಗೆ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಈ ವಿಷಯ ಬೆಳಕಿಗೆ ಬಂದಿದೆ.
ಸಾರ್ವಜನಿಕ ಸಲಹೆ:
* ಧತ್ತೂರ ಹಣ್ಣು ಹಾಗೂ ಅವುಗಳ ಬೀಜಗಳನ್ನು ಆಹಾರ ಅಥವಾ ಸೇವನೆಗಾಗಿ ಖರೀದಿಸಬಾರದು.
*ಧತ್ತೂರ ಹಣ್ಣು ಅಥವಾ ಬೀಜಗಳ ಮಾರಾಟ ಮತ್ತು ವಿತರಣೆ ಸಂಬಂಧಿಸಿ ಯಾವುದೇ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು.
* ಆನ್‌ಲೈನ್ ಮಾರಾಟ ವೇದಿಕೆಗಳಲ್ಲಿ ಧತ್ತೂರ ಹಣ್ಣು ಮತ್ತು ಬೀಜಗಳಿಗೆ ಸಂಬಂಧಿಸಿದ ಜಾಹಿರಾತು ನೀಡಬಾರದು. ಅವು ಸಾರ್ವಜನಿಕವಾಗಿ ಲಭ್ಯವಾಗದಂತೆ ಕ್ರಮವಹಿಸಬೇಕು.
* ಸಂಬಂಧಿತ ಮಾರಾಟಗಾರರು, ಪೂರೈಕೆದಾರರು ಹಾಗೂ ವಿತರಕರು ತಮ್ಮ ಬಳಿ ಲಭ್ಯವಿರುವ ದಾಸ್ತಾನು, ಉತ್ಪನ್ನದ ಮೂಲ ಹಾಗೂ ಈಗಾಗಲೇ ಮಾರಾಟ ಮಾಡಿರುವ ಕುರಿತು ದಾಖಲೆಗಳನ್ನು ಇಲಾಖೆಗೆ ಒದಗಿಸಬೇಕು.
* ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸಾರ್ವಜನಿಕರು ಹಾಗೂ ಸಂಬಂಧಿತ ಎಲ್ಲರೂ ಧತ್ತೂರ ಹಣ್ಣುಗಳ ಮಾರಾಟ ಮತ್ತು ಬಳಕೆ ಮಾಡದಂತೆ ಇಲಾಖೆಯ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net