ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧ

ban-on-gutka-and-paan-masala-which-contain-tobacco-and-nicotine
ban-on-gutka-and-paan-masala-which-contain-tobacco-and-nicotine
Published on

ಪ್ರಮುಖ ಮುಖ್ಯಾಂಶಗಳು

  • * ಆಹಾರ ಸುರಕ್ಷತೆ ಇಲಾಖೆಯಿಂದ ಆದೇಶ
  • * ನಿಯಮ ಉಲ್ಲಂಸಿದವರ ವಿರುದ್ಧ ಕಾನೂನು ಕ್ರಮ

ಬೆಂಗಳೂರು:

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯಾದ್ಯಂತ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲ ಉತ್ಪನ್ನಗಳ ಮೇಲೆ ಸರ್ಕಾರ ಕಟ್ಟುನಿಟ್ಟಿನ ನಿಷೇಧ ಹೇರಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಈ ಕುರಿತು ಆ.10ರಂದು ಆದೇಶ ಹೊರಡಿಸಿದೆ. ಈ ಆದೇಶ ಒಂದು ವರ್ಷದ ಅವಧಿಗೆ ಜಾರಿಯಲ್ಲಿರಲಿದೆ. ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಣೆ, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.
ಜನರ ಆರೋಗ್ಯ ಕಾಪಾಡುವ ಸಲುವಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಕಲಂ 30(2)() ಹಾಗೂ (ಮಾರಾಟದ ಮೇಲಿನ ನಿಷೇಧ ಮತ್ತು ನಿರ್ಬಂಧಗಳು) 2011ರ ನಿಯಮಗಳ ಅಡಿ ಈ ಕ್ರಮ ಕೈಗೊಳ್ಳಲಾಗಿದೆ.

ಯಾವ ಉತ್ಪನ್ನಗಳ ಮೇಲೆ ನಿಷೇಧ:

ಗುಟ್ಕಾ ಹಾಗೂ ಪಾನ್ ಮಸಾಲ ಜತೆಗೆ ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಇತರೆ ಉತ್ಪನ್ನಗಳನ್ನೂ ಪ್ರತ್ಯೇಕವಾಗಿ ಮಾರಾಟ ಮಾಡುವುದುನ್ನು ನಿಷೇಧಿಸಲಾಗಿದೆ. ಇದಲ್ಲದೆ ಪೊಟ್ಟಣ್ಣಗಳನ್ನು ಮಾಡಲ್ಪಟ್ಟ ಹಾಗೂ ಮಾಡಲ್ಪಡದಿರುವ, ಗ್ರಾಹಕರು ಸುಲಭವಾಗಿ ಮಿಶ್ರಣ ಮಾಡಿಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಮಾರಾಟ ಅಥವಾ ವಿತರಣೆಗೂ ಈ ನಿಷೇಧ ಅನ್ವಯವಾಗಲಿದೆ.

ಸಂಗ್ರಹಣೆ ಮತ್ತು ಮಾರಾಟಕ್ಕೆ ಅವಕಾಶವಿಲ್ಲ:

ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಾವನ್ನು ಸ್ಯಾಶೆ, ಪೌಚ್, ಪೊಟ್ಟಣ ಹಾಗೂ ಕಂಟೇನರ್ ಸೇರಿ ಯಾವುದೇ ವಿಧಾನಗಳಲ್ಲಿ ಸಂಗ್ರಹ ಮತ್ತು ಮಾರಾಟಕ್ಕೆ ಅವಕಾಶವಿಲ್ಲ ಎಂದು ಇಲಾಖೆ ತಿಳಿಸಿದೆ.

ವಿಶೇಷ ಕಾರ್ಯಾಚರಣೆ:

ಈ ಸಂಬಂಧ ಅಹಾರ ಸುರಕ್ಷತಾ ಅಧಿಕಾರಿಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ವಿಶೇಷ ತಪಾಸಣೆ ಮತ್ತು ಕಾರ್ಯಚರಣೆ ಕೈಗೊಳ್ಳಲಾಗುವುದು. ಈ ವೇಳೆ ಕಾಯ್ದೆ ಉಲ್ಲಂಸಿ ನಿಷೇಧಿತ ಉತ್ಪನ್ನಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಅಥವಾ ಸಂಗ್ರಹಿಸಿಡುವವರ ವಿರುದ್ಧ ಕಾನೂನು ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

ನಿಷೇಧಿತ ತಂಬಾಕು ಹಾಗೂ ನಿಕೋಟಿನ್ ಉತ್ಪನ್ನಗಳ ತಯಾರಿಕೆ, ಮಾರಾಟ ಅಥವಾ ವಿತರಣೆ ಕಂಡುಬಂದಲ್ಲಿ, ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ ನೀಡಬೇಕು. ಆರೋಗ್ಯಕರ ಹಾಗೂ ವ್ಯಸನಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಾರ್ವಜನಿಕರು ಸಹಕರಿಸಬೇಕು.

— - ಕೆ. ಶ್ರೀನಿವಾಸ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net