ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣದಲ್ಲಿ ಇಡೀ ಜಿಲ್ಲೆಯಲ್ಲಿ ಬಾಗೇಪಲ್ಲಿ ತಾಲೂಕು ಮೊದಲ ಸ್ಥಾನ ಪಡೆದಿರುವುದು ತಲೆ ತಗ್ಗಿಸುವಂತಹ ವಿಚಾರ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಕಾವಲು ಸಮಿತಿಯ ಸಂಯೋಜಕ ರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಗೂಳೂರು ಗ್ರಾಮದ ಕೂಸಿನ ಮನೆಯಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಅಯೋಜಿಸಿದ್ದ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣಗಳ ಬಗ್ಗೆ ಹೆಚ್ಚು ಅರಿವು ಮೂಡಿಸುತ್ತಿದ್ದರೂ, ಈ ಭಾಗದಲ್ಲಿ ಅತೀ ಹೆಚ್ಚು ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿರುವ ಪರಿಣಾಮ ಬಾಗೇಪಲ್ಲಿ ಬಾಲ್ಯ ವಿವಾಹಗಳಲ್ಲಿ ಮೊದಲ ಸ್ಥಾನ ಗಳಿಸಿರುವುದು ದುರಂತದ ಸಂಗತಿ ಅದರಲ್ಲೂ ಗೂಳೂರು ಹೋಬಳಿಯ ಕೊತ್ತಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ ಇನ್ನು ಹೆಚ್ಚಾಗಿ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಆದ್ದರಿಂದ ಇಂತಹ ಪ್ರಕರಣಗಳನ್ನು ತಡೆಗಟ್ಟಲು ಜಿಲ್ಲೆಯಿಂದ ಗ್ರಾಪಂವರೆವಿಗೂ ಕಾವಲು ಸಮಿತಿಯ ಅಧಿಕಾರಿಗಳು ನೌಕರರು ಬಹಳ ಜಾಗೃಕತೆಯಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವೀಚಾರಕಿ ಸುಜಾತಮ್ಮ ಮಾತನಾಡಿ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಪುರುಷರಿಗೆ ನೀಡುವ ಪ್ರಾಮುಖ್ಯತೆ ಹೆಣ್ಣಿಗೆ ನೀಡುತ್ತಿಲ್ಲವಾದ್ದರಿಂದ ಕೇಂದ್ರ ಸರ್ಕಾರ ಬೇಟಿ ಬಚಾವೋ, ಬೇಟಿ ಪಡಾವೋ ಎಂಬ ಕಾರ್ಯಕ್ರವನ್ನು ಜಾರಿಗೆ ತಂದಿದೆ. ಹೆಣ್ಣು ಬೇರೆ ಗಂಡು ಬೇರೆ ಎಂಬ ಪರಿಕಲ್ಪನೆಯನ್ನು ತ್ಯಜಿಸಿ ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂಬ ಮನೋಭಾವನೆ ಬೆಳೆಸಿಕೊಳ್ಳಬೇಕು.
ಸಮಾಜದಲ್ಲಿ ಗರ್ಭಾವ್ಯಸ್ಥೆಯಲ್ಲಿ ಹೆಣ್ಣು ಎಂದು ತಿಳಿದ ಕೂಡಲೇ ಹೆಣ್ಣನ್ನು ಭ್ರೂಣದಲ್ಲಿ ಸಾಯಿಸುವ ಕಾರ್ಯವು ಅತ್ಯಂತ ಪ್ರಾಮಾಣಿಕತೆಯಿಂದ ನಡೆಯುತ್ತಿದೆ. ಒಂದು ವೇಳೆ ಹೆಣ್ಣು ಜನ್ಮ ತಾಳಿದರೆ ಭಾರ ಎಂದು ತಿಳಿದು 18 ವರ್ಷಕ್ಕಿಂತ ಮೊದಲೇ ಮದುವೆ ಮಾಡಿ ಕೈತೊಳೆದುಕೊಳ್ಳುವ ಪರಿಪಾಟವೂ ಹೆಚ್ಚಾಗುತ್ತಿದ್ದು, ಇಂತಹ ಕಾನೂನು ಬಾಹಿರ ಕೆಲಸ ಮಾಡಬಾರದು ಎಂದರು. ಸಿಆರ್ಪಿ ರಾಮಚಂದ್ರ, ಗ್ರಾಪಂ ಕಾರ್ಯದರ್ಶಿ ಸಾಯಿ ಸಾತ್ವಿಕ್ ಇದ್ದರು.