ಬೆಂಗಳೂರು: ಸೈಟು, ಮನೆ, ಕಟ್ಟಡ, ವಿಲ್ಲಾ ಸೇರಿದಂತೆ ಕೃಷಿಯೇತರ ಸ್ಥಿರಾಸ್ತಿಗಳಿಗೆ ಇ-ಖಾತಾ (ಡಿಜಿಟಲ್ ಖಾತಾ, digital khata ) ಪಡೆಯಲು ಪರದಾಡುತ್ತಿರುವ ರಾಜ್ಯದ ಜನತೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಸ್ಥಳೀಯ ಸಂಸ್ಥೆಗಳ ಆಸ್ತಿಗೆ ಇ-ಖಾತಾ ನೀಡುವ ಇ-ಆಸ್ತಿಯ ತಾಂತ್ರಿಕ ಸಮಸ್ಯೆ ಬಗೆಹರಿಸುವ ಯತ್ನ ಅಧಿಕಾರಿಗಳಿಂದ ನಡೆಯುತ್ತಿಲ್ಲ ಎಂಬ ಆರೋಪ ಒಂದೆಡೆ ಆದರೆ, ಗ್ರಾ.ಪಂ ವ್ಯಾಪ್ತಿಯ ಆಸ್ತಿಗಳಿಗೆ ಡಿಜಿಟಲ್ ಖಾತಾ ನೀಡುವ ಇ-ಸ್ವತ್ತು 2.0 ತಂತ್ರಾಂಶಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಚಾಲನೆ ಕೊಟ್ಟು ತಿಂಗಳೇ ಕಳೆದರೂ ಸ್‌ಟಾವೇರ್ ಸಿದ್ಧವಾಗಿಲ್ಲ. ಈ ನೆಪ ಹೇಳಿಕೊಂಡೇ ಪಂಚಾಯಿತಿಗಳಲ್ಲಿ ಇಂದು-ನಾಳೆ ಎಂದು ಕಾಲ ಮುಂದೂಡುತ್ತಿರುವುದು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.