ಭಾವಶುದ್ಧಿಯಿಂದ ಔಷಧ ಫಲ ಪ್ರಾಪ್ತಿ| ಶ್ರೀ ರಾವೇಶ್ವರ ಭಾರತಿ ಮಹಾಸ್ವಾಮೀಜಿ

ವಿಶ್ವ ಆಯುರ್ವೇದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮದ ರೂವಾರಿ ಡಾ. ಗಿರಿಧರ ಕಜೆ ಅವರಿಗೆ ಆಯುರ್ವೇದ ಅಕಾಡೆಮಿ ವತಿಯಿಂದ "ಆಯುರ್ವೇದ ಬೃಹಸ್ಪತಿ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ರಾವೇಶ್ವರ ಭಾರತಿ ಮಹಾಸ್ವಾಮೀಜಿ, ಡಾ.ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವ ಆಯುರ್ವೇದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮದ ರೂವಾರಿ ಡಾ. ಗಿರಿಧರ ಕಜೆ ಅವರಿಗೆ ಆಯುರ್ವೇದ ಅಕಾಡೆಮಿ ವತಿಯಿಂದ "ಆಯುರ್ವೇದ ಬೃಹಸ್ಪತಿ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ರಾವೇಶ್ವರ ಭಾರತಿ ಮಹಾಸ್ವಾಮೀಜಿ, ಡಾ.ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.
Published on
ಬೆಂಗಳೂರು: ಗಿಡಮೂಲಿಕೆಗಳು ದೇವತೆಗಳ ಸಮಾನವಾಗಿದೆ. ಅದನ್ನು ವಾಣಿಜ್ಯ ಉದ್ದೇಶದಿಂದ ಸಂಗ್ರಹಿಸಿದರೆ ಅದು ಫಲಿಸುವುದಿಲ್ಲ. ಆದ್ದರಿಂದ ವೈದ್ಯರು ಭಾವಶುದ್ಧಿಯಿಂದ ಕಾರ್ಯನಿರ್ವಹಿಸಿದರೆ, ದೇಶದಲ್ಲಿ ಆಯುರ್ವೇದದ ಗಾಳಿ ಬೀಸುತ್ತದೆ ಎಂದು ಶ್ರೀ ರಾಮಚಂದ್ರಪುರ ಮಠದ ಶ್ರೀ ರಾವೇಶ್ವರ ಭಾರತಿ ಮಹಾಸ್ವಾಮೀಜಿ ಹೇಳಿದ್ದಾರೆ.
ಕಜೆ ಆಯುರ್ವೇದಿಕ್​ ಫೌಂಡೇಷನ್​ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ 2ನೇ ವಿಶ್ವ ಆಯುರ್ವೇದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಆಶಿರ್ವಚನ ನೀಡಿದರು.
ಗಿಡಮೂಲಿಕೆಗಳಿಗೆ ಜೀವ, ಭಾವ ಮತ್ತು ದಿವ್ಯತೆಯಿದೆ. ಆದ್ದರಿಂದ, ಆಯುರ್ವೇದ ಕೇವಲ ಭೌತಿಕವಲ್ಲ. ಅದು ಅಧ್ಯಾತ್ಮ ಮತ್ತು ದೈವಿಕವೂ ಹೌದು. ಹೀಗಿರುವಾಗ ಆಯುರ್ವೇದ ವೈದ್ಯರು ಪದವಿಯೊಂದನ್ನು ಪಡೆದರೆ ಸಾಲದು. ನಿರಂತರ ಅಭ್ಯಾಸದಿಂದ ಜ್ಞಾನ ಸಂಪಾದಿಸಬೇಕು. ವ್ಯವಹಾರದ ದೃಷ್ಟಿಯನ್ನು ಬಿಟ್ಟು ಕಾರುಣ್ಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಆಯುರ್ವೇದ ಶಿಕ್ಷಣವನ್ನು ಪ್ರಾಥಮಿಕ ಪಠ್ಯಕ್ರಮದಲ್ಲಿ ಅಳವಡಿಸುವ ಅಗತ್ಯವಿದೆ. ಪಿಯುಸಿ ನಂತರದ ಶಿಕ್ಷಣದಲ್ಲಿ ಆಯುರ್ವೇದ ಕಲಿಯುವುದು ಎಲ್ಲರಿಗೂ ಸುಲಭವಲ್ಲ. ಆದ್ದರಿಂದ ವೈದ್ಯಶಾಸ್ತ್ರದ ಆರಂಭಿಕ ಜ್ಞಾನವನ್ನು ಮಕ್ಕಳಲ್ಲಿ ಭಿತ್ತಬೇಕು. ಆಹಾರ ಕ್ರಮದಲ್ಲಿ ಶಿಸ್ತು ಅಳವಡಿಸಿಕೊಂಡರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದೆಲ್ಲವನ್ನು ಎಳವೆಯಿಂದಲೇ ಕಲಿಸಬೇಕು. ಆಯುರ್ವೇದ ಜೀವನ ವಿಧಾನದ ಅವಿಭಾಜ್ಯ ಅಂಗವಾಗಬೇಕು ಎಂದು ಅಭಿಪ್ರಾಯಪಟ್ಟರು.

ಸಾಮರಸ್ಯದಿಂದ ಉದ್ಧಾರ: 

ಮೂಡಬಿದಿರೆಯ ಡಾ.ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮ ಮತ್ತು ಆಯುರ್ವೇದದಲ್ಲಿ ಭೇದವಿಲ್ಲ. ಮನಶುದ್ಧಿ, ವಚನ ಶುದ್ಧಿ ಮತ್ತು ಕಾಯಶುದ್ಧಿಯನ್ನು ಅವೆರಡೂ ಪುನರುಚ್ಛರಿಸಿವೆ. ಸನಾತನ ಧರ್ಮದಲ್ಲಿ ಹಲವು ಪಂಥಗಳಿದ್ದರೂ ನಾವು ಸಾಮರಸ್ಯದಿಂದ ಬಾಳಬೇಕಿದೆ. ನಮ್ಮಲ್ಲಿ ಭೇದವಿಲ್ಲದೆ ಬಾಳಿದರೆ ಭಾರತೀಯ ಸಮಾಜದ ಉದ್ಧಾರವಾಗುತ್ತದೆ ಎಂದರು.
ಆಧ್ಯಾತ್ಮದ ವ್ರತ-ನಿಯಮಗಳು ಉಳಿದಿರುವುದರಿಂದ ಭಾರತ ಇಂದು ಉಳಿದಿದೆ. ಇದಕ್ಕೆ ಆಯುರ್ವೇದದ ಕೊಡುಗೆಯೂ ಇದೆ. ಆದ್ದರಿಂದ, ಆಯುರ್ವೇದ ವಿಶ್ವಮಾನ್ಯವಾಗಲು ನಾವು ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ. ಅಮೆರಿಕ ಮತ್ತು ಯುರೋಪಿಯನ್ನರು ಅಯುರ್ವೇದದ ಮಹತ್ವವನ್ನು ಅಧಿಕೃತವಾಗಿ ಒಪ್ಪಿಕೊಳ್ಳುವಂತೆ ಕೆಲಸಗಳಾಗಬೇಕು. ನಾಟಿ ಔಷಧಗಳನ್ನು ಕೊಡುವ ಹಿರಿಯರ ಮಾಹಿತಿಗಳನ್ನು ವಿಡಿಯೋ ದಾಖಲಾತಿ ಮಾಡಿ ಉಳಿಸಿಕೊಳ್ಳಬೇಕು ಎಂದು ಹೇಳಿದರು.
ರಾಷ್ಟ್ರೀಯ ಆಯುರ್ವೇದ ವಿಜ್ಞಾನಗಳ ಸಂಶೋಧನಾ ಪರಿಷತ್​ನ ಪ್ರಧಾನ ಉಪನಿರ್ದೇಶಕ ಡಾ.ಎನ್​. ಶ್ರೀಕಾಂತ್, ವಿಜಯವಾಣಿ ಸಂಪಾದಕ ಕೆ.ಎನ್​. ಚನ್ನೇಗೌಡ, ಆಯುಷ್​ ಟಿವಿ ಕಾರ್ಯನಿರ್ವಾಹಕ ನಿರ್ದೇಶಕ ಎಂ. ಹರಿಕೃಷ್ಣ, ಸಿಸಿಐಎಂ ಮಾಜಿ ಉಪನಿರ್ದೇಶಕ ಡಾ. ಜಯಪ್ರಕಾಶ್​ ನಾರಾಯಣ್​ ಮತ್ತಿತರರು ಉಪಸ್ಥಿತರಿದ್ದರು.  

ಸಮ್ಮೇಳನದ ಉದ್ಘೋಷಣೆಗಳು 

1. ಆಯುರ್ವೇದವನ್ನು ಪ್ರಾಥಮಿಕ ಶಾಲೆಗಳ ಪಠ್ಯಕ್ರಮದಲ್ಲಿ ಅಳವಡಿಸಬೇಕು.  

2. ಎಲ್ಲ ವೈದ್ಯಪದ್ಧತಿಗಳಿಗೆ ಸಮಾನ ಅನುದಾನ ನೀಡಬೇಕು.  

3. ಎಲ್ಲ ರಾಜ್ಯಗಳಲ್ಲಿ ಆಯುಷ್​ ಸಚಿವಾಲಯಗಳನ್ನು ಸ್ಥಾಪಿಸಬೇಕು.  

4. ವೈದ್ಯಕಿಯ ಗಿಡಮೂಲಿಕೆಗಳನ್ನು ಬೆಳೆಸಲು ಅನುದಾನ ಮೀಸಲಿರಿಸಬೇಕು.  

5. ಎಲ್ಲ ರೀತಿಯ ಔಷಧೀಯ ಸಸ್ಯಗಳನ್ನು ಬೆಳೆಯಲು ಅನುಮತಿ ನೀಡಬೇಕು.  

6. ಎಲ್ಲ ರಾಜ್ಯಗಳಲ್ಲಿ ಕನಿಷ್ಠ 5 ಆಯುರ್ವೇದ ಸಂಶೋಧನಾ ಕೇಂದ್ರಗಳ ಸ್ಥಾಪನೆ.  

7. ದೇಶದ ಎಲ್ಲ ತಾಲೂಕುಗಳಲ್ಲಿ ಆಯುರ್ವೇದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ.  

8. ದೇಶದ ಎಲ್ಲ ತಾಲೂಕುಗಳಲ್ಲಿ ಆಯುರ್ವೇದ ಕ್ಷೇಮ ಕೇಂದ್ರಗಳ ಸ್ಥಾಪನೆ.  

9. ಎಲ್ಲ ಆಯುರ್ವೇದಿಕ್​ ಚಿಕಿತ್ಸೆಗಳಿಗೆ ವಿಮೆ ಸೌಲಭ್ಯ ವಿಸ್ತರಿಸಬೇಕು.  

10. ಆಯುರ್ವೇದ ಔಷಧಗಳಿಗೆ ತೆರಿಗೆ ಕಡಿತ ಮಾಡಬೇಕು.

ಆಯುರ್ವೇದ ಸಿಟಿಗೆ ಸಹಕಾರ

ಬೆಳಗಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ, ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವಥ್​ ನಾರಾಯಣ, ಥೈಲ್ಯಾಂಡ್​ನಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ವ್ಯವಸ್ಥಿತವಾಗಿ ಬೆಳೆದಿವೆ. ಅದೇ ರೀತಿ ಆಯುರ್ವೇದ ಕೇಂದ್ರಗಳನ್ನು ರಾಜ್ಯದಲ್ಲಿ ಆರಂಭಿಸಲು ಅವಕಾಶಗಳಿವೆ. ಡಾ. ಗಿರಿಧರ ಕಜೆ ಅವರು ರಾಜ್ಯದಲ್ಲಿ ಆಯುರ್ವೇದ ಸಿಟಿಯನ್ನು ನಿರ್ಮಿಸಲು ಅವರು ಪ್ರಯತ್ನಿಸಿದರೆ ಅದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. 

ಸ್ಥಳಿಯವಾಗಿ ಮೊದಲಿಂದಲೂ ಮನೆಯಲ್ಲಿ ಬಳಸುವ ಧಾನ್ಯ ಬಳಸಬಹುದೇ ಹೊರತು ಎಲ್ಲರೂ ಸಿರಿ ಧಾನ್ಯ ಬಳಸಿದರೆ ಅನಾರೋಗ್ಯ ಉಂಟಾಗುತ್ತದೆ. ಆಹಾರ ಪದ್ಧತಿಯಲ್ಲಿನ ಬದಲಾವಣೆ ಇಂದಿನ ಅನಾರೋಗ್ಯ ಪೀಡಿತ ಸಮಾಜಕ್ಕೆ ಕಾರಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net