ತ್ಯಾಜ್ಯ ವಿಂಗಡಣೆ ಜಾಗೃತಿ ಅವಶ್ಯ waste segregation

Awareness of waste segregation is essential
Awareness of waste segregation is essential
Published on

ಪ್ರಮುಖ ಮುಖ್ಯಾಂಶಗಳು

  • waste segregation
ಕೋಲಾರ : ಸಾರ್ವಜನಿಕರು ಪೌರಪ್ರಜ್ಞೆ ಬೆಳೆಸಿಕೊಂಡು ಕಸವನ್ನು ಮೂಲದಲ್ಲೇ ಬೇರ್ಪಡಿಸಿ ನೀಡಬೇಕು. ಕಸ ವಿಲೇವಾರಿ ಮಾಡುವ ಕುರಿತು ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಸಂಘಟಕರು ಒಣಕಸ ಮತ್ತು ಹಸಿಕಸ ವಿಂಗಡಣೆ ಮಾಡುವ ಕುರಿತು ಜಾಗೃತಿ ಮೂಡಿಸುವುದಲ್ಲದೆ, ಅದರಿಂದ ಸಮಾಜದಲ್ಲಾಗುವ ಪರಿಣಾಮದ ಬಗ್ಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ತಿಳಿಸಿದರು. waste segregation
ನಗರದಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಮಂಗಳವಾರ ಜಿಲ್ಲೆಯ ವಿವಿಧ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛ ಭಾರತ ಮಿಷನ್ 2. 0 ಅಡಿ ಘನತ್ಯಾಜ್ಯ ನಿರ್ವಹಣೆ ಕುರಿತು ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಸಮುದಾಯ ಸಂಘಟಕರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿದರು.
ಕಾರ್ಯಾಗಾರದಲ್ಲಿ ಪೌರಕಾರ್ಮಿಕರಿಗೆ ಘನ ತ್ಯಾಜ್ಯ ನಿರ್ವಹಣೆಯ ವಿಧಾನಗಳು ಮತ್ತು ಅದರ ಪ್ರಾಮುಖ್ಯ ಕುರಿತು ತರಬೇತಿ ನೀಡಲಾಗುತ್ತದೆ ಎಂದರು.
ಘನ ತ್ಯಾಜ್ಯದ ಪ್ರಮಾಣ ಕಡಿಮೆ ಮಾಡುವುದು, ಸುರಕ್ಷಿತ ವಿಲೇವಾರಿ ಖಚಿತಪಡಿಸುವುದು, ಪರಿಸರ ಮಾಲಿನ್ಯ ತಡೆಗಟ್ಟುವುದು, ಸಾರ್ವಜನಿಕರ ಆರೋಗ್ಯರಕ್ಷಿಸುವುದು, ಘನ ತ್ಯಾಜ್ಯ ನಿರ್ವಹಣೆಯ ಉದ್ದೇಶಗಳಾಗಿವೆ ಎಂದರು.
ಒಂದು ದಿನದ ಕೆಲಸವಲ್ಲ : ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ತ್ಯಾಜ್ಯ ವಿಲೇವಾರಿಯ ನಿರ್ವಹಣೆ ಮಾಡುವುದು ಒಂದು ದಿನದ ಕೆಲಸವಲ್ಲ. ಇದು ನಿತ್ಯ ಮತ್ತೆ ಮತ್ತೆ ಮಾಡುವ ಪ್ರಕ್ರಿಯೆ ಆಗಿರುವ ಕಾರಣ ಈ ಬಗ್ಗೆ ಪೌರಕಾರ್ಮಿಕರಿಗೆ ಹೆಚ್ಚಿನ ಅರಿವು ಇರುತ್ತದೆ. ಅದನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಎಲ್ಲ ಸ್ಥಳೀಯ ಸಂಸ್ಥೆಗಳ ಮೇಲಿರುತ್ತದೆ ಎಂದು ಡಿಸಿ ಎಂದರು.
ಸಾರ್ವಜನಿಕರಲ್ಲಿ ಮನವಿ : ಈಗಾಗಲೇ ಕೋಲಾರದ ಅನೇಕ ಭಾಗಗಳಲ್ಲಿ ಸ್ಥಳೀಯ ಸರ್ಕಾರೇತರ ಸಂಸ್ಥೆಗಳೊಂದಿಗೆ ಸೇರಿ ಕಸದ ರಾಶಿತುಂಬಿದ್ದ ಸ್ಥಳಗಳಲ್ಲಿ ಕಸತೆಗೆಸಿ ರಂಗೋಲಿ ಬಿಡಿಸುವುದು ಮತ್ತು ಇನ್ನಿತರ ಆಕರ್ಷಕ ಬಣ್ಣಗಳೊಂದಿಗೆ ಅಲಂಕಾರಿಕ ವಸ್ತುಗಳನ್ನು ಬಳಸಿಕೊಂಡು ಸುಂದರವಾದ ಸ್ಥಳಗಳಾಗಿ ಮಾರ್ಪಡಿಸಿ ಕಸಹಾಕಬಾರದು ಎಂದು ನಾಮಫಲಕ ಅಳವಡಿಸುವ ಕೆಲಸವನ್ನು ನಗರಸಭೆ ಮಾಡುತ್ತಿದೆ. ಆದರೆ ಸಾರ್ವಜನಿಕರು ಇದಕ್ಕೆ ಸಹಕಾರ ನೀಡದೆ ಮತ್ತೆ ಅದೇ ಸ್ಥಳದಲ್ಲಿ ಕಸ ಎಸೆಯುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿಸಾರ್ವಜನಿಕರು ಸಹಕರಿಸಿ ತಮ್ಮ ಸುತ್ತಮುತ್ತಲಿನ ಜಾಗ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮನವಿ ಮಾಡಿದರು.
ಕಸದಿಂದ ನಗರಸಭೆ ಸಂಪನ್ಮೂಲ : ಸಾರ್ವಜನಿಕರು ಕಸವನ್ನು ನೋಡುವ ದೃಷ್ಟಿ ಬದಲಾಯಿಸುವ ಕೆಲಸವನ್ನು ಸಮುದಾಯ ಸಂಘಟಕರು ಮಾಡಬೇಕಾಗಿದೆ. ನಗರದ ವಿವಿಧ ಭಾಗಗಳಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದು, ಅದನ್ನು ಸಮುದಾಯದ ಸಂಘಟಕರು ಗಮನಿಸಿ ಅರಿವು ಮೂಡಿಸಬೇಕು. ಸ್ಥಳೀಯ ನಗರಸಭೆಯ ಕಸ ಸಂಗ್ರಹಿಸುವ ವಾಹನವು ಮನೆಗಳ ಬಳಿ ಬಂದಾಗ ಹಸಿ ಕಸ, ಒಣಕಸ ಬೇರ್ಪಡಿಸಿ ವಾಹನಕ್ಕೆ ನೀಡಬೇಕು ಎಂಬ ಮಾಹಿತಿಯನ್ನು ಎಲ್ಲಸಂಘಟಕರು ತಮಗೆ ನೀಡಿರುವ ವ್ಯಾಪ್ತಿಯ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಬೇಕು. ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿದ್ದು ಕಸ ಬೀದಿಗೆ ಬಾರದಂತೆ ನೋಡಿಕೊಳ್ಳಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net