ಹೊಳೆನರಸೀಪುರ : ಸರ್ಕಾರದ ನಿಯಮದಂತೆ ಏಕಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ವ್ಯಾಪಾರಿಗಳು, ವರ್ತಕರು ಹಾಗೂ ಸಾರ್ವಜನಿಕರೂ ಪರಿಸರ ಕಾಳಜಿಯಿಂದ ಕೂಡಲೇ ತ್ಯಜಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಯು.ಎನ್.ಶಿವಶಂಕರ್ ಹೇಳಿದರು.
ಸಾರ್ವಜನಿಕರು ಮತ್ತು ವ್ಯಾಪಾರಿಗಳು ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಬೇಕು. ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುತ್ತಿರುವ ಗಂಭೀರ ಸಮಸ್ಯೆಗಳತ್ತ ಎಲ್ಲರೂ ಗಮನ ಹರಿಸಿ ಪರಿಸರವನ್ನು ಉಳಿಸಬೇಕು ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಪ್ಲಾಸ್ಟಿಕ್ ಬಳಕೆ ನಗರದ ಸೌಂದರ್ಯವನ್ನು ಹಾಳು ಮಾಡುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಆದ್ದರಿಂದ ಸಾರ್ವಜನಿಕರು ಸ್ವಚ್ಛತೆಯತ್ತ ಗಮನಹರಿಸಬೇಕು ಎಂದರು.
ರಸ್ತೆಗೆ ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯವನ್ನು ತಿಂದು ಹಸುಗಳಂತಹ ಮುಗ್ಧ ಪ್ರಾಣಿಗಳು ಮೃತಪಡುತ್ತಿವೆ. ಗೋಮಾತೆಯನ್ನು ಪೂಜಿಸುವ ನಮ್ಮ ಸಂಸ್ಕೃತಿಯಲ್ಲಿ ಪ್ರಾಣಿಗಳಿಗೆ ಹಾನಿ ಮಾಡುವುದು ಸರಿಯಲ್ಲ. ಪ್ಲಾಸ್ಟಿಕ್ ಕಸ ಮತ್ತು ಬಾಟಲಿಗಳನ್ನು ಚರಂಡಿಗಳಿಗೆ ಎಸೆಯುವುದರಿಂದ ನೀರು ಸರಾಗವಾಗಿ ಹರಿಯುವುದಿಲ್ಲ. ಬದಲಾಗಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಮಳೆಗಾಲದಲ್ಲಿ ಕೃತಕ ಪ್ರವಾಹ ಮತ್ತು ರಸ್ತೆಗಳಲ್ಲಿ ನೀರು ನಿಲ್ಲಲು ಮುಖ್ಯ ಕಾರಣವಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ಲಾಸ್ಟಿಕ್ ಬಳಸುವವರ ವಿರುದ್ಧ ಪುರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ದಂಡ ವಿಧಿಸಲಾಗುವುದು. ಅಗತ್ಯ ಬಿದ್ದರೆ ಅಂಗಡಿಗಳ ಪರವಾನಗಿಯನ್ನೂ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಮಾರುಕಟ್ಟೆಕೆ ತೆರಳಿದರೆ ಬಟ್ಟೆ ಚೀಲಗಳನ್ನು ಬಳಸುವ ಮೂಲಕ ಸಾರ್ವಜನಿಕರು ಪರಿಸರ ಉಳಿವಿಗೆ ಸಹಕರಿಸಬೇಕು. ಸ್ವಚ್ಛತಾ ಕಾರ್ಯದಲ್ಲಿ ಸಾರ್ವಜನಿಕರು ಮತ್ತು ವ್ಯಾಪಾರಿಗಳು ಪುರಸಭೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.