ರಬಕವಿ-ಬನಹಟ್ಟಿ: ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬನಹಟ್ಟಿ ವೃತ್ತ ಪೊಲೀಸ್ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಎರಡು ಗಾಂಜಾ ಪ್ರಕರಣಗಳು ಹಾಗೂ ಐದು ಚಿನ್ನದ ಕಳವು ಪ್ರಕರಣ ಯಶಸ್ವಿಯಾಗಿ ಭೇದಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಒಟ್ಟು 7.63 ಲಕ್ಷ ಮೌಲ್ಯದ ಸ್ವತ್ತು ಹಾಗೂ 72 ಸಾವಿರ ನಗದು ಜಪ್ತಿ ಮಾಡಲಾಗಿದೆ ಎಂದು ಎಂದು ಎಸ್ಪಿ ಸಿದ್ಧಾರ್ಥ ಗೋಯಲ್ ತಿಳಿಸಿದರು.
ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೇರದಾಳ ಹಾಗೂ ಬನಹಟ್ಟಿ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಕಳವು ಹಾಗೂ ಮಾದಕ ವಸ್ತು ಸಾಗಾಟ ಪ್ರಕರಣಗಳ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ತನಿಖೆಯ ವೇಳೆ ದೊರೆತ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿ, ಅವರಿಂದ ಕಳುವಾದ ಹಾಗೂ ಅಕ್ರಮವಾಗಿ ಹೊಂದಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಪೊಲೀಸರ ಕಾರ್ಯಾಚರಣೆಯಲ್ಲಿ 1 ಕೆ.ಜಿ. ಗಾಂಜಾ, 6.55 ಲಕ್ಷ ಮೌಲ್ಯದ 53.6 ಗ್ರಾಂ ಚಿನ್ನಾಭರಣ, 30 ಗ್ರಾಂ ಬೆಳ್ಳಿ, ಎರಡು ದ್ವಿಚಕ್ರ ವಾಹನಗಳು ಸೇರಿ ಒಟ್ಟು 7.63 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ. ಇದಲ್ಲದೆ ಆರೋಪಿಗಳಿಂದ 72 ಸಾವಿರ ನಗದು ಹಣಕೂಡ ವಶಪಡಿಸಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ, ಕಳವು ಹಾಗೂ ಇತರೆ ಅಪರಾಧ ಚಟುವಟಿಕೆಗಳ ವಿರುದ್ಧ ಮುಂದೆಯೂ ಇದೇ ರೀತಿಯ ಕಟ್ಟುನಿಟ್ಟಿನ ಕಾರ್ಯಾಚರಣೆ ಮುಂದುವರಿಯಲಿದೆ. ಸಾರ್ವಜನಿಕರು ತಮ್ಮ ಪ್ರದೇಶಗಳಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಸಹಾಯವಾಣಿಗೆ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.