ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ 12 ಪುಂಡರ ಬಂಧನ

basavaraj padukote
basavaraj padukote
Published on

ಪ್ರಮುಖ ಮುಖ್ಯಾಂಶಗಳು

  • ಐವರು ಆರೋಪಿಗಳು ಪೊಲೀಸ್ ಕಸ್ಟಡಿಗೆ
  • ಉಳಿದ 7 ಮಂದಿ ಜೈಲಿಗೆ ಕಳುಹಿಸಿದ ಕೋರ್ಟ್
ಬೆಂಗಳೂರು: ಫುಟ್‌ಪಾತ್ ತೆರವು ಕಾರ್ಯಾಚರಣೆಯ ವೇಳೆ ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 12 ಮಂದಿಯನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆ ಪೈಕಿ ಐವರನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ನಿನ್ನೆ ಮಧ್ಯಾಹ್ನ ಶಿವಾಜಿನಗರ ಬಸ್ ನಿಲ್ದಾಣದ ಸುತ್ತಲಿನ ಪ್ರದೇಶದಲ್ಲಿ ುಟ್‌ಪಾತ್ ತೆರವು ಕಾರ್ಯಾಚರಣೆ ವೇಳೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಗೂಂಡಾ ವರ್ತನೆ ತೋರಿದ್ದರು. ಬಂಧಿತರು ಪೊಲೀಸರ ಮುಂದೆ ತಾವು ಮಾಡಿದ್ದು ತಪ್ಪು ಎಂದು ಕೈಮುಗಿದು ಬೇಡಿಕೊಂಡಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವಿಡಿಯೊ ವೀಕ್ಷಣೆ ಮಾಡಿರುವ ಸಾರ್ವಜನಿಕರು ಆರೋಪಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೌಡಿಶೀಟರ್ ಬಂಧನ:

ಪ್ರಮುಖ ಆರೋಪಿ ವೈಟ್‌ಫೀಲ್ಡ್‌ನ ಸಿದ್ದಾಪುರ ನಿವಾಸಿ ಹಾಗೂ ವರ್ತೂರು ಠಾಣೆಯ ರೌಡಿಶೀಟರ್ ಬಸವರಾಜ್ ಪಡುಕೋಟೆ (57) , ಸಿದ್ದಾಪುರದ ನಿವಾಸಿಗಳಾದ ರಘು (28), ಭರತ (25), ಪರಶುರಾಮ್ (27) ಕಲಬುರಗಿ ಮೂಲದ ಬಸವರಾಜು (28), ಶಿವಾಜಿನಗರದ ಶಂಕರ್ (52), ಪಾರ್ಥಿಬನ್(23), ಕೊಟ್ರೇಶ್ (26), ಮುಜಾಹಿದ್ ಅಹಮ್ಮದ್ (39), ಹೊಂಗಸಂದ್ರದ ರಾಜನ್ (19), ಯಲಚೇನಹಳ್ಳಿ ಕಿರಣ್ (34) ಹಾಗೂ ಬ್ಯಾಟರಾಯನಪುರದ ರಂಗಸ್ವಾಮಿ (49) ಬಂಧಿತರು.

ಐವರು ಪೊಲೀಸ್ ಕಸ್ಟಡಿಗೆ:

ಬಂಧಿತ 12 ಮಂದಿ ಆರೋಪಿಗಳನ್ನು ಬುಧವಾರ ನಗರದ 10ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು 12 ಆರೋಪಿಗಳ ಪೈಕಿ 5 ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು. ಬಸವರಾಜ್ ಪಡುಕೋಟೆ, ರಘು, ಬಸವರಾಜು, ಪಾರ್ಥಿಬನ್ ಮತ್ತು ಪರಶುರಾಮ್ ಎಂಬುವರನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗಿದೆ. ಉಳಿದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ಮೇಲೆ ಪೆಪ್ಪರ್ ಸ್ಪ್ರೇ:

ಆರೋಪಿಗಳು ಜಿಬಿಎ ಅಧಿಕಾರಿಗಳ ಮೇಲೆ ಪೆಪ್ಪರ್ ಸ್ಪ್ರೇ ಮಾಡಿ ಹಲ್ಲೆ ನಡೆಸಿದ್ದಾರೆ. ಪೆಪ್ಪರ್ ಸ್ಪ್ರೇಯನ್ನು ಎಲ್ಲಿಂದ ತಂದಿದ್ದರು. ಅಧಿಕಾರಿಗಳ ಮೇಲೆ ಹಲ್ಲೆಯ ಉದ್ದೇಶವೇನು ಎಂಬುದರ ಬಗ್ಗೆ ವಿವಿಧ ಆಯಾಮದಲ್ಲಿ ತನಿಖೆ ಮುಂದುವರಿಸಿದ್ದಾರೆ. ಜಿಬಿಎ ಅಧಿಕಾರಿಗಳು ಗಣೇಶನ ದೇವಸ್ಥಾನ ಹಾಗೂ ಕನ್ನಡ ಧ್ವಜ ತೆರವು ಮಾಡಲು ಮುಂದಾಗಿದ್ದರು. ಇದನ್ನು ಪ್ರಶ್ನಿಸಿದ್ದಾಗ ಅಧಿಕಾರಿಗಳು ನಿಂದಿಸಿದ್ದರು ಈ ವೇಳೆ ಗಲಾಟೆಯಾಗಿದೆ ಎಂದು ರೌಡಿ ಶೀಟರ್ ಬಸವರಾಜ ಆರೋಪ ಮಾಡಿದ್ದಾನೆ. ಮತ್ತೊಂದೆಡೆ ಫುಟ್‌ಪಾತ್ ತೆರವು ಮಾಡುವ ವೇಳೆಯಲ್ಲಿಯೇ ಆರೋಪಿಗಳು ಹಲ್ಲೆ ಮಾಡಿದ್ದಾರೆ ಎಂದು ಜಿಬಿಎ ಅಧಿಕಾರಿಗಳಿಂದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಮುಖಆರೋಪಿ ಬಸವರಾಜ್ ಪಡುಕೋಟೆ ಯಾದಗಿರಿ ಮೂಲದವನಾಗಿದ್ದು, ವರ್ತೂರ್ ಠಾಣೆ ರೌಡಿಶೀಟರ್ ಆಗಿದ್ದಾನೆ. ಶಿವಾಜಿ ನಗರಕ್ಕೆ ಯಾಕೆ ಬಂದಿದ್ದ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net