ಶ್ಯಾಂಪೂ ಬದಲಿಸಲು ಹೇಳುವುದು ಕ್ರೌರ್ಯವಲ್ಲ| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಆದರೆ ಅದು ವಿಚ್ಚೇದನಕ್ಕೆ ಕಾರಣವಾಗಬಹುದು
  • ವರದಣೆ ಪ್ರಕರಣ ದಾಖಲಿಸಲಾಗದು ಎಂದ ಹೈಕೋರ್ಟ್​
ಬೆಂಗಳೂರು: ಪತಿಗೆ ಪೌಷ್ಟಿಕ ಆಹಾರ ನೀಡಿ ನನಗೆ ನೀಡುತ್ತಿರಲಿಲ್ಲ. ಪತಿ ಊಟ ಮುಗಿಸುವವರೆಗೆ ಕಾಯಿಸುತ್ತಿದ್ದರು. ಮೀರಾ ಶ್ಯಾಂಪೂ ಬದಲು ಡೌ ಶ್ಯಾಂಪೂ ಬಳಸುವಂತೆ ಪತಿ ಪೀಡಿಸುತ್ತಿದ್ದನು, ಇದರಿಂದ ನನಗೆ ತೀವ್ರ ಮಾನಸಿಕ ಒತ್ತಡ ಉಂಟಾಗಿ ತಲೆಗೂದಲು ಉದುರಿ ನೆತ್ತಿ ಕಾಣಿಸುವಂತಾಗಿದೆ ತನ್ನ ಪತಿಯ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಿರುವ ಮಹಿಳೆ ಹೈಕೋರ್ಟ್​ನಲ್ಲಿ ಖುದ್ದಾಗಿ ವಾದಿಸಿದ್ದಾರೆ.
ಇದನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಹೌದು ಮೇಡಂ, ನಿಮ್ಮ ಆರೋಪಗಳ ಆಧಾರದಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನ ಕೋರಬಹುದು. ಆದರೆ, ಇದರ ಆಧಾರದಲ್ಲಿ ಪತಿಯ ತಾಯಿ, ತಂದೆ ಮತ್ತು ಇತರ ಸಂಬಂಧಿಕರ ವಿರುದ್ಧ ವರದಣೆ ಕಿರುಕುಳ, ಕ್ರೌರ್ಯದ ಆರೋಪ ಹೊರಿಸಲಾಗದು. ದಂಪತಿಗಳ ನಡುವೆ ಮತ್ತು ಕುಟುಂಬದೊಳಗೆ ಭಿನ್ನಾಭಿಪ್ರಾಯಗಳು ಏರ್ಪಡುವುದು ಸಾಮಾನ್ಯ. ಅದಕ್ಕೆಲ್ಲ ಕ್ರಿಮಿನಲ್​ ಪ್ರಕರಣ ದಾಖಲಿಸಲಾಗುವುದೇ ಎಂದು ಪ್ರಶ್ನಿಸಿತು.
ರಾಗಿಮುದ್ದೆ, ದೋಸೆ ಮಾಡಿಕೊಡು ಎಂದು ಅತ್ತೆ ಕೇಳುವುದು ತಪ್ಪೇ ಎಂಬ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ಅರ್ಜಿದಾರರು, ಇಲ್ಲ ಸ್ವಾಮಿ, ನನ್ನ ಆರೋಪ ಏನೆಂದರೆ ನನ್ನನ್ನು ಅಡುಗೆ ಮನೆಗೆ ಹೋಗಲು ಬಿಡುತ್ತಿರಲಿಲ್ಲ. ಸರಿಯಾದ ಆಹಾರವನ್ನು ಕೊಡುತ್ತಿರಲಿಲ್ಲ. ಎಲ್ಲರ ಊಟ ಆದ ನಂತರ ನಾನು ಸೇವಿಸಬೇಕಿತ್ತು. ಗಂಡನನ್ನು ನನ್ನ ಜತೆ ಮಲಗಲು ಬಿಡದೆ ಬೇರೆ ಕೋಣೆಯಲ್ಲಿ ಮಲಗಲು ಅತ್ತೆ ಹೇಳುತ್ತಿದ್ದರು. ಐದೂವರೆ ತಿಂಗಳು ಅವರ ಮನೆಯಲ್ಲಿ ನಾನು ಕ್ರೌರ್ಯ ಅನುಭವಿಸಿದ್ದೇನೆ ಎಂದು ಅಳಲು ತೋಡಿಕೊಂಡರು. 

ಪೊಲೀಸರಿಂದಲೂ ಅನ್ಯಾಯ:

ಅರ್ಜಿದಾರರು ವಾದ ಮುಂದುವರಿಸಿ, ಪತಿಯ ಮನೆಯವರು ನೆರೆಹೊರೆಯವರ ಮುಂದೆ ತನ್ನ ಬಗ್ಗೆ ತೀವ್ರ ಅಪಪ್ರಚಾರ ನಡೆಸಿ, ಕಳಂಕ ಹೊರಿಸಿದ್ದಾರೆ. ನಾನು ತವರು ಮನೆಗೆ ಬಂದಾಗ, ಅಲ್ಲಿಗೂ ಬಂದು ನನ್ನ ಚಾರಿತ್ರ್ಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಕೃತ್ಯಕ್ಕೆ ಅತ್ತೆಗೆ ಅವರ ಸಹೋದರ ಮತ್ತು ಪತಿಯ ಸ್ನೇಹಿತ ಸಾಥ್​ ನೀಡಿದ್ದಾರೆ. ಕಿರುಕುಳದ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೊದರೆ, ಅವರು ಕೂಡ ಅನ್ಯಾಯ ಮಾಡಿದ್ದಾರೆ. ನನ್ನ ದೂರು ದಾಖಲಿಸುವ ಬದಲು ನನ್ನ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದರು.
⚠️

ಎಲ್ಲವೂ ಕ್ರೌರ್ಯವಲ್ಲ 

ವಾದ ಆಲಿಸಿದ ನ್ಯಾಯಪೀಠ, ದೂರುದಾರರ ದೃಷ್ಟಿಯಲ್ಲಿ ಏನು ಕ್ರೌರ್ಯ ಎಂದಿದೆಯೊ ಅದು ಕ್ರೌರ್ಯವಲ್ಲ. ಕಾನೂನು ಯಾವುದನ್ನು ಕ್ರೌರ್ಯ ಎಂದು ಹೇಳುತ್ತದೆಯೊ ಅದು ಮಾತ್ರ ಕ್ರೌರ್ಯ. ಎಲ್ಲ ಭಿನ್ನಾಭಿಪ್ರಾಯಗಳನ್ನು ಕ್ರೌರ್ಯ ಎನ್ನಲಾಗದು. ಹೀಗೆ ಪರಸ್ಪರ ಪ್ರಕರಣಗಳನ್ನು ದಾಖಲಿಸುವದೂ ಕ್ರೌರ್ಯವಲ್ಲ. ಪತಿಯ ವಿರುದ್ಧದ ಆರೋಪಗಳನ್ನು ಪರಿಗಣಿಸಬಹುದು. ಆದರೆ, ಇಡೀ ಕುಟುಂಬವನ್ನು ಎಳೆದುತರುವುದು ಸರಿಯಲ್ಲ ಎಂದು ಹೇಳಿ ಆದೇಶ ಕಾಯ್ದಿರಿಸಿತು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net