

ಬೆಂಗಳೂರು: ಸಾರ್ವಜನಿಕ ವಲಯದಲ್ಲಿ ಈ ವರ್ಷ ಪೂರ್ತಿ ಚರ್ಚೆಯಾಗಿದ್ದು ಕಾಂಗ್ರೆಸ್ನ ಆಂತರಿಕ ಬೆಳವಣಿಗೆ ಮತ್ತು ಜಾತಿ ಗಣತಿ ವಿಚಾರ. 2024ಕ್ಕೆ ಹೋಲಿಸಿದರೆ ಬಿಜೆಪಿ ಕೊಂಚ ಚೇತರಿಸಿಕೊಂಡಂತೆ ಕಾಣಿಸಿತು. ಆದರೆ, ಗೊಂದಲ ಪೂರ್ಣ ಪರಿಹಾರವಾದಂತಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ದಳಪತಿಗಳು ಸ್ಪಷ್ಟತೆ ತಂದುಕೊಳ್ಳುವ ಪ್ರಯತ್ನ ಮಾಡಿದ್ದು ವಿಶೇಷ. ಇನ್ನು ಶಾಸನ ಸಭೆ ಹಲವು ಮಹತ್ವದ ಮಸೂದೆಗಳನ್ನು ಅಂಗೀಕರಿಸಿತು. ಒಬ್ಬ ಸಚಿವರ ತಲೆದಂಡವೂ ಆಯಿತು. ಇನ್ವೆಸ್ಟ್ ಕರ್ನಾಟಕ, ಬೆಂಗಳೂರು ಟೆಕ್ ಸಮಿಟ್ನಂತಹ ದೊಡ್ಡ ಸಮಾವೇಶಗಳೂ ನಡೆದವು. ರಾಜಭವನಕ್ಕೆ ಲೋಕಭವನವೆಂದು ಮರುನಾಮಕರಣವಾಗಿದ್ದು ಇನ್ನೊಂದು ವಿಶೇಷ.
ಕಾಂಗ್ರೆಸ್ನಲ್ಲಿ ಈ ವರ್ಷ ಅಕ್ಷರಶಃ ಬೂದಿಮುಚ್ಚಿದ ಕೆಂಡದ ಸ್ಥಿತಿ. ಅಧಿಕಾರ ಹಂಚಿಕೆ ಒಪ್ಪಂದ, ಅದಕ್ಕೆ ಸಂಬಂಧಿಸಿದಂತೆ ನಾಯಕರ ಹೇಳಿಕೆ- ನಡವಳಿಕೆ ಗಮನಾರ್ಹವಾಗಿದ್ದವು. ಹೈಕಮಾಂಡ್ ಹಲವು ಬಾರಿ ತೇಪೆ ಹಾಕಿದರೂ ಅದು ನಿಲ್ಲಲಿಲ್ಲ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಕೈಯಲ್ಲಿ ನಿಯಂತ್ರಣ ಸಾಧ್ಯವಾಗದಿದ್ದಾಗ, ಎಐಸಿಸಿ ಅಧ್ಯಕ್ಷ ಖರ್ಗೆಯವರೇ ಮಾತಿನ ಚಾಟಿ ಬೀಸಿದರು. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ. ಸರ್ಕಾರದ ಕಾರ್ಯಕ್ರಮಗಳ ಕುರಿತ ಚರ್ಚೆಗಿಂತ ನಾಯಕತ್ವದ ವಿಷಯ ಹೆಚ್ಚೆಚ್ಚು ಚರ್ಚೆಯಾಗಲು ಅವರದೇ ಪಕ್ಷದ ನಾಯಕರು ಅವಕಾಶ ಮಾಡಿಕೊಟ್ಟಿದ್ದು ವಿಶೇಷ. ಉಪಾಹಾರ, ಡಿನ್ನರ್ ಸಭೆಗಳು, ಶಾಸಕರ ದೆಹಲಿ ಪ್ರವಾಸ, ಬಹಿರಂಗ ಹೇಳಿಕೆಗಳ ಮೂಲಕ ವಿಷಯ ಜೀವಂತ ಇಡುವ ಪ್ರಯತ್ನ ನಡೆದೇ ಇತ್ತು.
ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳ ಸಾಲ ವಸೂಲಾತಿ ವಿಚಾರ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತು. ಸಾಲ ವಸೂಲಿಗೆ ಖಾಸಗಿ ಸಂಸ್ಥೆಗಳು ಅನುಸರಿಸಿದ ಕ್ರಮ ಆಕ್ರೋಶಕ್ಕೆ ತುತ್ತಾಯಿತು, ಇದರ ಬಿಸಿ ಸರ್ಕಾರಕ್ಕೂ ತಟ್ಟಿತು. ಕೊನೆಗೆ ಕಿರು ಸಾಲ ಕಿರುಕುಳಕ್ಕೆ ಲಗಾಮು ಹಾಕಲು ಹೊಸ ಕಾಯ್ದೆಯನ್ನೇ ಜಾರಿಗೆ ತಂದಿತು.
ಇಡೀ ದೇಶವನ್ನು ನಕ್ಸಲ್ಮುಕ್ತ ಮಾಡಬೇಕೆಂದು ಕೇಂದ್ರ ಸರ್ಕಾರ ವಿಶೇಷ ಕಾರ್ಯತಂತ್ರ ರೂಪಿಸುತ್ತಿದ್ದಂತೆ ರಾಜ್ಯದಲ್ಲಿ ನಕ್ಸಲರನ್ನು ಮನವೊಲಿಸಿ ಮುಖ್ಯವಾಹಿನಿಗೆ ತರುವ ಕೆಲಸ ನಡೆಯಿತು. ಮೊದಲ ಹಂತದಲ್ಲಿ ಮುಂಡಗಾರು ಲತಾ ಸೇರಿ 6 ಮಂದಿ ಮುಖ್ಯಮಂತ್ರಿ ಸಮ್ಮುಖದಲ್ಲಿ ಶರಣಾದರು. ಅವರಿಗೆ ವಿಶೇಷ ಪ್ಯಾಕೇಜ್ ನೀಡುವುದಾಗಿ ಸರ್ಕಾರ ಘೋಷಿಸಿತು.
ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಿ, 300 ಕೋಟಿ ರೂ. ಮೌಲ್ಯದ ಒಟ್ಟು 142 ಆಸ್ತಿಗಳನ್ನು ಜಪ್ತಿ ಮಾಡಿಕೊಂಡಿತು. ರಿಯಲ್ ಎಸ್ಟೇಟ್ ಉದ್ಯಮಿಗಳು, ಏಜೆಂಟ್ಗಳು, ಅಧಿಕಾರಿಗಳು, ರಾಜಕಾರಣಿಗಳು ಬೇನಾಮಿ ಹೆಸರಲ್ಲಿ ನಿವೇಶನ ಪಡೆದುಕೊಂಡಿದ್ದು ಕಂಡುಬಂದಿತ್ತು.
ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಸಾರಿಗೆ ನಿಗಮಗಳನ್ನು ರಕ್ಷಿಸಲು ಸರ್ಕಾರ ಪ್ರಯಾಣ ದರ ಶೇಕಡ 15ರಷ್ಟು ಏರಿಸಲು ನಿರ್ಧಾರ ಕೈಗೊಂಡಿತು. ವರ್ಷದ ಆರಂಭದ ಮೊದಲ ವಾರದಿಂದಲೇ ಈ ನಿರ್ಧಾರ ಜಾರಿಗೆ ಬಂತು. ಪ್ರತಿಪಕ್ಷದ ಕಡೆಯಿಂದ ತೀವ್ರ ವಿರೋಧ ವ್ಯಕ್ತವಾದರೂ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿತು.
ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಸರ್ಕಾರ ಆಹ್ವಾನಿಸಿದ ವಿಚಾರ ಕೋರ್ಟ್ ಮೆಟ್ಟಿಲೇರಿತು. ಸರ್ಕಾರದ ನಿರ್ಧಾರ ವಿರೋಧಿಸಿ ಬಿಜೆಪಿ ಪ್ರತಿಭಟನೆ ದಾಖಲಿಸಿತು. ಕನ್ನಡ ಭಾಷೆ ಹಾಗೂ ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ನಿಲುವು ಪ್ರಕಟಿಸಬೇಕೆಂದೂ ಪಟ್ಟು ಹಿಡಿದವು. ಅಂತಿಮವಾಗಿ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು. ಬಾನು ಮುಷ್ತಾಕ್ ದಸರಾ ಉದ್ಘಾಟಿಸಿದರು.
ವೋಟ್ ಚೋರಿ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ ಸಂದರ್ಭದಲ್ಲಿ ಅದರ ಬಗ್ಗೆ ಲಘುವಾಗಿ ಮಾತನಾಡಿದ ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು.
ಜಾಗತಿಕ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕ ಫೆಬ್ರವರಿಯಲ್ಲಿ ನಡೆಯಿತು. ಮೊದಲ ದಿನವೇ 6 ಲಕ್ಷ ಕೋಟಿ ರೂ. ಹೂಡಿಕೆ ಘೋಷಣೆಯಾಯಿತು. ಸರ್ಕಾರ ಹೊಸ ಕೈಗಾರಿಕಾ ನೀತಿ, ಉಮಾ ಪೋರ್ಟಲ್ ಸೇವೆಯನ್ನು ಪ್ರಕಟಿಸಿತು. ಬೆಂಗಳೂರು ಟೆಕ್ ಸಮ್ಮೇಳನ ಕೂಡ ಈ ಬಾರಿ ಹಲವು ವಿಶೇಷಗಳೊಂದಿಗೆ ಗಮನ ಸೆಳೆಯಿತು.
ಕೆ.ಎನ್. ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ನಡೆದಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ಆಗ್ರಹಿಸಿ ವಿಧಾನಸಭೆಯಲ್ಲಿ ಪ್ರತಿಭಟಿಸಿದ್ದ ಬಿಜೆಪಿಯ 18 ಶಾಸಕರನ್ನು ಸ್ಪೀಕರ್ ಯು.ಟಿ.ಖಾದರ್ ಅಮಾನತುಗೊಳಿಸಿದ್ದರು. ಆ ಶಾಸಕರು ವಿಧಾನಮಂಡಲ ಸಭೆಗಳು, ಕ್ಷೇತ್ರದ ಸಭೆಗಳಲ್ಲೂ ಪಾಲ್ಗೊಳ್ಳಲು ಅವಕಾಶ ಇರಲಿಲ್ಲ. ಶಾಸಕರು ವಿಷಾದ ವ್ಯಕ್ತಪಡಿಸಿದ ಬಳಿಕ ನಿರ್ಧಾರ ಹಿಂಪಡೆಯಲಾಯಿತು. ಹನಿಟ್ರ್ಯಾಪ್ ಪ್ರಕರಣ ಕೂಡ ತನಿಖೆ ಇಲ್ಲದೆ ಮರೆಗೆ ಸರಿಯಿತು.
ಸಾಮಾಜಿಕ ಬಹಿಷ್ಕಾರ ಮತ್ತು ದ್ವೇಷ ಭಾಷಣ ವಿರೋಧಿ ಮಸೂದೆಗಳು ಶಾಸನ ಸಭೆಯ ಅನುಮೋದನೆ ಪಡೆದವು. ರಾಜ್ಯಪಾಲರ ಸಹಿಗಾಗಿ ಕಳಿಸಲಾಗಿದ್ದು, ಇನ್ನೂ ಕಾಯ್ದೆ ರೂಪ ಪಡೆದಿಲ್ಲ. ದ್ವೇಷ ಭಾಷಣ ಮಸೂದೆ ವಿರುದ್ಧ ಬಿಜೆಪಿ ಸದನದ ಒಳ ಹೊರಗೂ ಹೋರಾಟ ನಡೆಸಿತು. ಸರ್ಕಾರ ಮಾತ್ರ ತನ್ನ ನಿಲುವಿನಿಂದ ಹಿಂದೆ ಸರಿಯಲಿಲ್ಲ.
1. ಭೂ ಪರಿವರ್ತನೆ ಪ್ರಕ್ರಿಯೆ ಸುಲಭಗೊಳಿಸಲು ಹೊಸ ನಿಯಮ ಜಾರಿ.
2. ಕೈಗಾರಿಕೆ ಆರಂಭಿಸಲು ಏಕ ಗವಾಕ್ಷಿ ವ್ಯವಸ್ಥೆ ಮೇಲ್ದರ್ಜೆಗೆ.
3. ಭ್ರಷ್ಟಾಚಾರ ತಡೆಯಲು ಮತ್ತು ವಿಳಂಬ ತಪ್ಪಿಸಲು ಆಟೋ ಮ್ಯುಟೇಷನ್ ವ್ಯವಸ್ಥೆ.
4. ಬೆಂಗಳೂರಿನ ಸುಮಾರು 6 ಲಕ್ಷಕ್ಕೂ ಅಧಿಕ ಬಿ ಖಾತಾಗಳನ್ನು ಎ ಖಾತೆ ಮಾಡಲು ನಿರ್ಧಾರ.
5. ಸರ್ಕಾರಿ ಉದ್ಯೋಗಕ್ಕೆ ನೇರ ನೇಮಕ ವಯೋಮಿತಿ ಸಡಿಲಿಕೆ.
6. ಮಹಿಳೆಯರಿಗೆ ವೇತನ ಸಹಿತ ಋತುಚಕ್ರ ರಜೆ ನೀಡಲು ಆದೇಶ.
7. ಬಿಪಿಎಲ್ ಕಾರ್ಡ್ನವರಿಗೆ ಇಂದಿರಾ ಕಿಟ್ ನೀಡಲು ನಿರ್ಣಯ.
8. ಗಿಗ್ ಕಾರ್ವಿುಕರ ಕಲ್ಯಾಣಕ್ಕಾಗಿ ಮಹತ್ವದ ಕಾಯ್ದೆ.
9. ಪರಿಶಿಷ್ಟರಿಗೆ ಒಳ ಮೀಸಲು ಕಲ್ಪಿಸುವ ಸಲುವಾಗಿ ವಿಧೇಯಕ ಅಂಗೀಕಾರ.
ಪಕ್ಷದ ರಾಜ್ಯ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ರನ್ನು ಬಿಜೆಪಿ 6 ವರ್ಷ ಉಚ್ಚಾಟಿಸಿತು. ಇವರೊಂದಿಗೆ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್, ಯಶವಂತಪುರ ಶಾಸಕ ಸೋಮಶೇಖರ್ ಅವರನ್ನೂ ಪಕ್ಷವಿರೋಧಿ ಚಟುವಟಿಕೆ ಆರೋಪ ಹಿನ್ನೆಲೆಯಲ್ಲಿ ಪಕ್ಷದಿಂದ ಹೊರಗಿಡಲಾಯಿತು.
ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಸತ್ಯಾಸತ್ಯತೆ ತಿಳಿಯಲು ಸರ್ಕಾರ ಎಸ್ಐಟಿ ರಚಿಸಿತು. ಹತ್ತಾರು ಕಡೆ ಅಗೆದು ನೋಡಿದ ಎಸ್ಐಟಿಗೆ ನಿರ್ದಿಷ್ಟ ಪುರಾವೆ ಸಿಗದಾಯಿತು. 3923 ಪುಟಗಳ ತನಿಖಾ ವರದಿಯನ್ನು ಕೋರ್ಟ್ಗೆ ಸಲ್ಲಿಸಿದ್ದು, ಬುರುಡೆ ತಂಡವೇ ಷಡ್ಯಂತ್ರ ಮಾಡಿತ್ತು ಎಂಬುದು ಮೇಲ್ನೋಟಕ್ಕೆ ಕಂಡುಬಂತು. ಈ ವಿಷಯ ರಾಜಕೀಯ ಮಹತ್ವ ಪಡೆಯಿತು. ಬಿಜೆಪಿ ತಂಡ ಧರ್ಮಸ್ಥಳಕ್ಕೆ ತೆರಳಿ ಶ್ರೀಕ್ಷೇತ್ರದ ಪರ ದನಿ ಮೊಳಗಿಸಿತು.
ಪರಿಶಿಷ್ಟರ ಹಣ ದುರ್ಬಳಕೆ, ಭ್ರಷ್ಟಾಚಾರ ಬೆಲೆ ಏರಿಕೆ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ರಾಜ್ಯದುದ್ದಗಲಕ್ಕೂ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿತ್ತು. ಏಪ್ರಿಲ್-ಮೇನಲ್ಲಿ ಒಟ್ಟು 4 ಹಂತದಲ್ಲಿ ನಡೆದ ಪ್ರತಿಭಟನಾ ಸಭೆಗಳು ಸರ್ಕಾರಕ್ಕೆ ಕಿರಿಕಿರಿ ಉಂಟುಮಾಡಿದವು. ಸರ್ಕಾರಕ್ಕೆ 2 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ ನಡೆಸಿತು. ಹೊಸಪೇಟೆ, ಮೈಸೂರಿನಲ್ಲಿ ದೊಡ್ಡ ಸಮಾವೇಶ ನಡೆಸಿ 2 ವರ್ಷದ ರಿಪೋರ್ಟ್ಕಾರ್ಡ್ ಜನರ ಮುಂದಿಟ್ಟಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಹಿನ್ನೆಲೆಯಲ್ಲಿ ರಾಜ್ಯದುದ್ದಗಲಕ್ಕೂ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು. ಪಥ ಸಂಚಲನಕ್ಕೆ ಕೆಲವು ಕಡೆ ಅವಕಾಶ ಕೊಡದ್ದಕ್ಕೆ ಕೋರ್ಟ್ ಮಧ್ಯಪ್ರವೇಶ ಮಾಡಬೇಕಾಯಿತು. ಕೊನೆಗೆ ಪಥ ಸಂಚಲನ ನಡೆಯಿತು. ಇನ್ನೊಂದೆಡೆ ಆರೆಸ್ಸೆಸ್ಸನ್ನೇ ಪರೋಕ್ಷವಾಗಿ ಗುರಿಯಾಗಿಸಿ, ಖಾಸಗಿ ಸಂಸ್ಥೆಗಳು ತಮ್ಮ ಯಾವುದೇ ಕಾರ್ಯಕ್ರಮವನ್ನು ಸರ್ಕಾರಿ ಜಾಗದಲ್ಲಿ ಅಥವಾ ಮುಜರಾಯಿ ದೇವಾಲಯದ ವ್ಯಾಪ್ತಿಯಲ್ಲಿ ನಡೆಸಬೇಕಾದರೆ ಜಿಲ್ಲಾಡಳಿತದಿಂದ ಅನುಮತಿ ಪಡೆಯುವುದನ್ನು ಸರ್ಕಾರ ಕಡ್ಡಾಯಗೊಳಿಸಿತು.
ಜಾತಿಗಣತಿ ವಿಚಾರ ಇಡೀ ವರ್ಷ ಚರ್ಚೆಯಾಯಿತು. ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ ವರದಿ ಸಂಪುಟ ಸಭೆಯಲ್ಲಿ ಮಂಡನೆಯಾದರೂ ಒಳಾಕ್ರೋಶದ ಕಾರಣಕ್ಕೆ ಅನುಮೋದನೆ ಸಿಗಲಿಲ್ಲ. ವರದಿಯ ಕೆಲವು ಅಂಶ ಸೋರಿಕೆ ಯಾದವು. ಆಯೋಗ ಹೊಸದಾಗಿ ಸಮೀಕ್ಷೆಗೆ ಮುಂದಾಯಿತು. ಮನೆ ಮನೆ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹ ಮುಗಿದಿದೆ. ಹೊಸ ವರ್ಷದ ವೇಳೆಗೆ ಸರ್ಕಾರಕ್ಕೆ ವರದಿ ಸಲ್ಲಿಕೆ ಸಾಧ್ಯತೆ ಇದೆ.