ಜೆಜೆಎಂ ನೀರು ಪೂರೈಕೆಗೆ ಸೂಕ್ತ ಕ್ರಮ

ಗೊಳಸಂಗಿ ಗ್ರಾಮಸ್ಥರ ನೀರಿನ ಸಮಸ್ಯೆಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಅಭಿಯಂತರ ವಿ.ಬಿ. ಗೊಂಗಡಿ ಗುರುವಾರ ಆಲಿಸಿದರು. ಗ್ರಾ.ಪಂ. ಕಾರ್ಯದರ್ಶಿ ಅಶೋಕ ಗಲಗಲಿ, ರವಿ ಬುಜಂಗೋಳ ಮತ್ತಿತರರಿದ್ದರು.
ಗೊಳಸಂಗಿ ಗ್ರಾಮಸ್ಥರ ನೀರಿನ ಸಮಸ್ಯೆಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಅಭಿಯಂತರ ವಿ.ಬಿ. ಗೊಂಗಡಿ ಗುರುವಾರ ಆಲಿಸಿದರು. ಗ್ರಾ.ಪಂ. ಕಾರ್ಯದರ್ಶಿ ಅಶೋಕ ಗಲಗಲಿ, ರವಿ ಬುಜಂಗೋಳ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳ ದಿಢೀರ್ ಭೇಟಿ
  • ಅಳಲು ತೋಡಿಕೊಂಡ ಗ್ರಾಮಸ್ಥರು
ಗೊಳಸಂಗಿ: ಸಮರ್ಪಕ ನೀರು ಪೂರೈಕೆಯಿಂದ ಬಳಲುತ್ತಿದ್ದ ಗೊಳಸಂಗಿ ಗ್ರಾಮಸ್ಥರಿಗೆ ಮಾ. 28ರಿಂದಲೇ ಜಲ ಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ನೀರು ಪೂರೈಕೆಗೆ ಚಾಲನೆ ನೀಡುವ ಕುರಿತು ಸಂಬಂಧಿಸಿದ ಅಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದರು.
ವಿಜಯವಾಣಿ ದಿನಪತ್ರಿಕೆಯಲ್ಲಿ ಮಾ. 26ರಂದು ‘ಗೊಳಸಂಗಿಯಲ್ಲಿ ಜೀವ ಜಲಕ್ಕಾಗಿ ಹಾಹಾಕಾರ.!’ ಶೀರ್ಷಿಕೆಯಡಿ ಪ್ರಕಟಗೊಂಡ ವರದಿಯನ್ನು ಗಮನಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಅಭಿಯಂತರ ವಿ.ಬಿ. ಗೊಂಗಡಿ, ಸ್ಥಳೀಯ ಗ್ರಾ.ಪಂ. ಕಾರ್ಯದರ್ಶಿ ಅಶೋಕ ಗಲಗಲಿ ಮತ್ತಿತರರು ಗ್ರಾಮದ ಪಾರ್ವತಿಮಠ ಸ್ವಾಮಿಗಳ ಬೀದಿ (ಮಡ್ಡಿ), ಇಂದಿರಾ ನಗರ ಮತ್ತಿತರ ಕಡೆ ಗುರುವಾರ ಭೇಟಿ ನೀಡಿ ಗ್ರಾಮಸ್ಥರಿಂದ ನೀರಿನ ಸಮಸ್ಯೆಯನ್ನು ಆಲಿಸಿದರು.
ಬಳಿಕ ಮಾತನಾಡಿದ ಅಧಿಕಾರಿ ವಿ.ಬಿ. ಗೊಂಗಡಿ, ಶನಿವಾರ ಪ್ರಾಯೋಗಿಕವಾಗಿ ಪಾರ್ವತಿಮಠ ಸ್ವಾಮಿಗಳ ಬೀದಿ (ಮಡ್ಡಿ) ಮತ್ತು ಇಂದಿರಾ ನಗರದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ನೀರು ಪೂರೈಕೆಗೆ ಚಾಲನೆ ನೀಡಲಾಗುವುದು. ಮುಂದೆ ಹಂತ ಹಂತವಾಗಿ ಇತರೇ ವಾರ್ಡ್‌ಗಳ ಪ್ರತಿ ಬೀದಿಗೆ ನೀರು ಪೂರೈಸಲಾಗುವುದೆಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಅಶೋಕ ಗಲಗಲಿ ಮಾತನಾಡಿ, ನೀರು ಅಮೂಲ್ಯ ವರ. ನೀರನ್ನು ಗ್ರಾಮಸ್ಥರು ಪೋಲು ಮಾಡದೆ ಸಮರ್ಪಕವಾಗಿ ಬಳಕೆ ಮಾಡಬೇಕು. ಗ್ರಾಮಸ್ಥರು ಮನೆಗಳಿಗೆ ನೀರು ಸಂಗ್ರಹಿಸಲು ಬಳಕೆ ಮಾಡುತ್ತಿದ್ದ ಮೋಟಾರನ್ನು ಯಾವುದೇ ಕಾರಣಕ್ಕೂ ಬಳಸುವಂತಿಲ್ಲ. ಹಾಗೊಂದು ವೇಳೆ ಯಾರಾದರೂ ಮೋಟಾರು ಬಳಕೆ ಮಾಡುವುದು ಕಂಡು ಬಂದಲ್ಲಿ ಹೆಸ್ಕಾಂ ಅಧಿಕಾರಿಗಳಿಂದಲೇ ಶಿಸ್ತು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.
ರವಿ ಬುಜಂಗೋಳ, ಶರಣಪ್ಪ ಸಂಗಣ್ಣವರ, ವಿನೋದ ಲಮಾಣಿ, ಚನ್ನಮಲ್ಲ ಗುಡ್ಡದ ಮತ್ತಿತರರಿದ್ದರು.

ಗೊಳಸಂಗಿ ಇಂದಿರಾ ನಗರದಲ್ಲಿ 15 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ 2.5 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಶಿಥಿಲಾವಸ್ಥೆ ತಲುಪಿದ್ದು ಕೂಡಲೇ ಅದನ್ನು ನೆಲಸಮ ಮಾಡಿ ಹೊಸ ನೀರಿನ ಟ್ಯಾಂಕ್ ನಿರ್ಮಿಸಲಾಗುವುದು. ಜತೆಗೆ ವಾಟರ್‌ಮನ್‌ಗಳಿಗೂ ಆಗಾಗ ನೀರಿನ ಸದ್ಬಳಕೆ ಮತ್ತು ಸರಬರಾಜು ಕುರಿತು ಅಗತ್ಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.

| ವಿ.ಬಿ. ಗೊಂಗಡಿ, ಸಹಾಯಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಉಪವಿಭಾಗ ಬಸವನ ಬಾಗೇವಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net