ಅರಕಲಗೂಡು ತಾಲೂಕಿನ ಶಣವಿನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಶಾಲಾ ಪ್ರಾರಂಭೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ತಟ್ಟೆ, ಲೋಟ, ಪುಸ್ತಕ, ಪೆನ್‌ಗಳನ್ನು ವಿತರಿಸಲಾಯಿತು. ಸಂತೋಷ್, ಕುಮಾರ್, ಯಾಸ್ಮೀನ್ ತಾಜ್, ಮಂಜುನಾಥ್ ಇತರರಿದ್ದರು.
ಅರಕಲಗೂಡು: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಆಂಗ್ಲ ಮಾಧ್ಯಮ ಶಿಕ್ಷಕರನ್ನು ನೇಮಿಸಬೇಕು ಎಂದು ಸಂತೆಮರೂರು ಗ್ರಾಪಂ ಮಾಜಿ ಸದಸ್ಯ ಸಂತೋಷ್ ಶಣವಿನಕುಪ್ಪೆ ಒತ್ತಾಯಿಸಿದರು.
ತಾಲೂಕಿನ ಶಣವಿನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಶಾಲಾ ಪ್ರಾರಂಭೋತ್ಸವ ಸಮಾರಂಭದಲ್ಲಿ ಊರಿನ ದಾನಿ ಮಾದೇಶ್ ಅವರು ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿದ ತಟ್ಟೆ ಹಾಗೂ ಲೋಟಗಳನ್ನು ವಿತರಿಸಿ ಮಾತನಾಡಿದ ಅವರು, ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ದ್ವಿಭಾಷಾ ಮಾಧ್ಯಮ ಶಿಕ್ಷಣ ಆರಂಭವಾಗಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಇಷ್ಟಲ್ಲದೆ ಈ ಬಾರಿ ಮಕ್ಕಳ ದಾಖಲಾತಿ ಪ್ರಮಾಣದಲ್ಲೂ ಗಣನೀಯವಾಗಿ ಹೆಚ್ಚಳವಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಾಲೆಗೆ ಇನ್ನೂ ಒಬ್ಬ ಶಿಕ್ಷಕರ ಅಗತ್ಯವಿದೆ. ಆಂಗ್ಲ ಮಾಧ್ಯಮ ಶಿಕ್ಷಕರನ್ನು ತುರ್ತಾಗಿ ನೇಮಿಸಿ ಮಕ್ಕಳ ಭವಿಷ್ಯಕ್ಕೆ ನೆರವಾಗಬೇಕು ಎಂದು ಆಗ್ರಹಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಯಾಸ್ಮಿನ್ ತಾಜ್ ಮಾತನಾಡಿ, ಪ್ರಸ್ತುತ ರಾಜ್ಯದಲ್ಲಿ ಶಿಕ್ಷಣ ಕ್ರಾಂತಿ ಶುರುವಾಗಿದ್ದು ಸರ್ಕಾರಿ ಶಾಲೆಗಳು ಆಧುನಿಕವಾಗಿ ಉನ್ನತೀಕರಿಸಲ್ಪಡುತ್ತಿವೆ. ಖಾಸಗಿ ಶಾಲೆಗಳ ವ್ಯಾಮೋಹ ತೊರೆದು ಪಾಲಕರು ಮತ್ತು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕನ್ನಡ ಭಾಷಾ ಜಿಪಿಟಿ ಶಿಕ್ಷಕಿ ದಿವ್ಯಮಣಿ ಮಾತನಾಡಿ, ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಕಲಿಯುವುದು ಒಂದು ಕನಸಾಗಿತ್ತು. ಆದರೆ ಇಂದು ಸರ್ಕಾರಿ ಶಾಲೆಯಲ್ಲೇ ಇದು ನನಸಾಗಿದೆ ಎಂದರು. ಗಣಿತ ಜಿಪಿಟಿ ಶಿಕ್ಷಕ ಸಾಗರ್ ಮಾತನಾಡಿ, ಶಿಕ್ಷಣ ಇಲಾಖೆಯು ಜಾರಿಗೆ ತಂದಿರುವ ಉಚಿತ ಶಿಕ್ಷಣದ ಸದುದ್ದೇಶಗಳು ಹಾಗೂ ಯೋಜನೆಗಳ ಕುರಿತು ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಸಭೆ ನಡೆಸಿ ವಿವರಿಸಲಾಗಿದೆ ಎಂದು ಹೇಳಿದರು.
ಗ್ರಾಮದ ದಾನಿ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ, ಉಚಿತವಾಗಿ ಪುಸ್ತಕ ಹಾಗೂ ಲೇಖನಿಗಳನ್ನು ವಿತರಿಸಿದರು. ಹಿರಿಯ ಶಿಕ್ಷಕ ಪರಮೇಶ್, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್, ಗ್ರಾಮಸ್ಥರಾದ ರಾಜೇಗೌಡ, ಸಚಿನ್, ಕುಮಾರ್, ಪಾರ್ವತಿ, ಜಯಮ್ಮ, ಅಂಗನವಾಡಿ ಶಿಕ್ಷಕಿ ಮಂಜುಳಾ ಇದ್ದರು.