ಮೃತ ವ್ಯಕ್ತಿಯ ಹೆಸರಿನಲ್ಲಿ ಅರ್ಜಿ ಸಲ್ಲಿಕೆ| 33 ವರ್ಷಗಳ ಬಳಿಕ ದಂಡ ವಿಧಿಸಿದ ಹೈಕೋರ್ಟ್​| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಇದೊಂದು ವಿಚಿತ್ರ ಪ್ರಕರಣ ಎಂದು ಅಚ್ಚರಿ
ಬೆಂಗಳೂರು: ವ್ಯಕ್ತಿಯೊಬ್ಬರು ಮೃತಪಟ್ಟ ಐದು ವರ್ಷಗಳ ಬಳಿಕ ಅವರ ಹೆಸರಿನಲ್ಲಿಯೇ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿರುವುದು ಬೆಳಕಿಗೆ ಬಂದಿದ್ದು, ಇದೊಂದು ವಿಚಿತ್ರ ಪ್ರಕರಣ ಎಂದು ನ್ಯಾಯಾಲಯ ಅಚ್ಚರಿ ವ್ಯಕ್ತಪಡಿಸಿದೆ.
ಅಕ್ರಮವಾಗಿ ಅರ್ಜಿ ಸಲ್ಲಿಸಿ, ನ್ಯಾಯಾಲಯದಿಂದ ತೀರ್ಪು ಪಡೆದುಕೊಳ್ಳಲಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿ ಇ.ಎಸ್​. ಇಂದಿರೇಶ್​ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳವಾಡಿ ಗ್ರಾಮದ 4.21 ಎಕರೆ ಜಮೀನಿಗೆ ಸಂಬಂಧಿಸಿದ ವಿವಾದ ಇದಾಗಿದೆ. ಈ ಜಮೀನಿನ ಸ್ವಾಧೀನಾನುಭವ ಪತ್ರವನ್ನು (ಒ.ಸಿ) 1981ರಲ್ಲಿ ಸಿ. ನಿಂಗಮ್ಮ ಎಂಬುವರಿಗೆ ನೀಡಿ ಭೂ ನ್ಯಾಯಮಂಡಳಿಯು ಆದೇಶಿಸಿತ್ತು. ಆದರೆ, ಈ ಆದೇಶವನ್ನು ಪ್ರಶ್ನಿಸಿ ಸಿ. ಮರಿಯಪ್ಪ ಎಂಬುವರ ಹೆಸರಿನಲ್ಲಿ, ಅವರ ಪವರ್​ ಆಫ್​ ಅಟರ್ನಿ ಹೊಂದಿರುವ ವ್ಯಕ್ತಿಯಿಂದ 1993ರಲ್ಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆಯಾಗಿತ್ತು.
ಈ ಅರ್ಜಿಯನ್ನು 2001ರಲ್ಲಿ ಪುರಸ್ಕರಿಸಿದ್ದ ಹೈಕೋರ್ಟ್​, ಪ್ರಕರಣವನ್ನು ಮರುಪರಿಶೀಲನೆಗಾಗಿ ಭೂ ನ್ಯಾಯಮಂಡಳಿಗೆ ಹಿಂತಿರುಗಿಸಿತ್ತು. ಆದರೆ, ಅಲ್ಲಿಯೂ ಅರ್ಜಿದಾರರಿಗೆ ಹಿನ್ನಡೆಯಾಗಿತ್ತು. ಆದ್ದರಿಂದ ಮರಿಯಪ್ಪ ಅವರ ವಾರಸುದಾರರು ಮತ್ತೆ ಹೈಕೋರ್ಟ್​ ಮೆಟ್ಟಿಲೇರಿದ್ದರು. ಮರಿಯಪ್ಪ ಅವರು 1993ರ ಅರ್ಜಿ ಸಲ್ಲಿಸುವ ವೇಳೆಗಾಗಲೇ ಮೃತಪಟ್ಟು ಐದು ವರ್ಷಗಳು ಕಳೆದಿತ್ತು ಎಂಬ ವಿಷಯವು ಈ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯದ ಗಮನಕ್ಕೆ ಬಂದಿದೆ.

2001ರ ಆದೇಶ ಮಾನ್ಯವಲ್ಲ:

ಮೃತ ವ್ಯಕ್ತಿಯ ಹೆಸರಿನಲ್ಲಿ ಸಲ್ಲಿಸಲಾದ ಅರ್ಜಿಗೆ ಕಾನೂನಿನಲ್ಲಿ ಯಾವುದೇ ಮಾನ್ಯತೆಯಿಲ್ಲದ ಕಾರಣ, 2001ರಲ್ಲಿ ಪ್ರಕರಣವನ್ನು ಭೂ ನ್ಯಾಯಮಂಡಳಿಗೆ ಮರಳಿಸಿದ ಹೈಕೋರ್ಟ್​ನ ಆದೇಶಕ್ಕೆ ಯಾವುದೇ ಮಾನ್ಯತೆಯಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. 2001ರ ಆದೇಶ ರದ್ದಾಗಿರುವುದರಿಂದ, ಭೂ ನ್ಯಾಯಮಂಡಳಿಯು ನಿಂಗಮ್ಮ ಅವರಿಗೆ 1981ರಲ್ಲಿ ನೀಡಿದ ಸ್ವಾಧೀನಾನುಭವ ಪತ್ರದ ಆದೇಶವೇ ಅಂತಿಮವಾಗಿದೆ ಎಂದು ತಿಳಿಸಿದೆ.

ವಾಸ್ತವ ಮರೆಮಾಚಬಾರದು

ನ್ಯಾಯಾಲಯದ ಮುಂದೆ ಬರುವವರು ಮುಕ್ತ ಮನಸ್ಸಿನಿಂದ ಸತ್ಯ ಒಪ್ಪಿಕೊಳ್ಳಬೇಕು. ವಾಸ್ತವ ಮರೆಮಾಚುವವರಿಗೆ ಯಾವುದೇ ರಕ್ಷಣೆ ನೀಡಲಾಗದು. 1988ರಲ್ಲಿ ಮೃತಪಟ್ಟವರು ಹೆಸರಿನಲ್ಲಿ 1993ರಲ್ಲಿ ಅರ್ಜಿ ದಾಖಲಿಸಲು ಹೇಗೆ ಸಾಧ್ಯ? ಈ ಪ್ರಕರಣವು ತುಂಬಾ ವಿಚಿತ್ರವಾಗಿದೆ. ಈ ಬಗ್ಗೆ ಅರ್ಜಿದಾರರ ವಕೀಲರು ಸಮರ್ಪಕ ಉತ್ತರ ನೀಡಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net