ದೇವದುರ್ಗದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ಬಿಎಲ್‌ಎಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಎಐಸಿಸಿ ಮಹಿಳಾ ಘಟಕ ಕಾರ್ಯದರ್ಶಿ ಶ್ರೀದೇವಿ ರಾಜಶೇಖರ ಉದ್ಘಾಟಿಸಿದರು. ಮುಖಂಡರಾದ ಮುತ್ತುರಾಜ್, ಮಾರೆಪ್ಪ ಹರವಿ, ಸಾಬಣ್ಣ ಕಮಲದಿನ್ನಿ, ವೆಂಕಟೇಶ ಮಕ್ತಲ್, ಪ್ರಕಾಶ ಪಾಟೀಲ್, ರಾಜು ಗೌಡ, ಬಾಬು ಜಾನಿ ಇದ್ದರು.
ದೇವದುರ್ಗ: ಕೇಂದ್ರ ಸರ್ಕಾರದ ಅವೈಜ್ಞಾನಿಕ ಆರ್ಥಿಕ ನೀತಿಗಳು ಹಾಗೂ ಜನವಿರೋಧಿ ಆಡಳಿತದಿಂದ ಬಡವರು ಸಂಕಷ್ಟ ಎದುರಿಸುತ್ತಿದ್ದು, ಬೆಲೆ ಏರಿಕೆಯಿಂದ ಜೀವನ ನಿರ್ವಹಿಸುವುದೇ ಕಷ್ಟವಾಗಿದೆ ಎಂದು ಎಐಸಿಸಿ ಮಹಿಳಾ ಘಟಕ ಕಾರ್ಯದರ್ಶಿ ಶ್ರೀದೇವಿ ರಾಜಶೇಖರ ಆರೋಪಿಸಿದರು.
ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕುರಿತು ಬಿಎಲ್‌ಎಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಮತದಾನ ಹಕ್ಕು ಕಸಿಯುವ ಹುನ್ನಾರ ನಡೆಯುತ್ತಿದೆ.
ಇದರ ಬಗ್ಗೆ ಕಾರ್ಯಕರ್ತರು ಎಚ್ಚರಿಕೆ ವಹಿಸಬೇಕು. ಮುಂದೆ ನಡೆಯುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗದಂತೆ ನಿಗಾ ವಹಿಸಬೇಕು ಎಂದರು.
ಕಳೆದ 12ವರ್ಷಗಳಿಂದ ಬಡ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ದಿನಬಳಕೆ ವಸ್ತುಗಳು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ಅಡುಗೆ ಅನಿಲ ದರ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದವರು ಈಗ ಸೈಲೆಂಟ್ ಆಗಿ ಬೆಲೆ ಏರಿಕೆ ಬೆಂಬಲಿಸುತ್ತಿದ್ದಾರೆ ಎಂದು ಕುಟುಕಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಗೌಡ ಪಾಟೀಲ್ ಗೌರಂಪೇಟೆ ಮಾತನಾಡಿದರು. ಪ್ರಮುಖರಾದ ಸಾಬಣ್ಣ ಹೂಗಾರ, ನಾಗಪ್ಪ ಕುರುಕುಂದಿ, ಭೀಮಣ್ಣ ವೀರಗೋಟ, ಸುಶೀಲಮ್ಮ, ಬುವಾಜಿ ಗೌರಂಪೇಟೆ, ಪಿಡ್ಡಪ್ಪ ನಾಯಕ, ಶಿವರಾಜ ಗೆಜ್ಜೆಬಾವಿ ಇತರರಿದ್ದರು.