ನಗರದ ಮತ್ತೊಂದು ವಿಲ್ಲಾದಲ್ಲಿ ರೇವ್ ಪಾರ್ಟಿ

rave-party
rave-party
Published on

ಪ್ರಮುಖ ಮುಖ್ಯಾಂಶಗಳು

  • 29ಮಂದಿ ಪಾರ್ಟಿ ನಶೆಯಲ್ಲಿ ತೇಲುತ್ತಿದ್ದ ವೇಳೆ ದಾಳಿ
  • ಮೂವರು ಆಯೋಜಕರ ಬಂಧನ
ಬೆಂಗಳೂರು: ನಗರದಲ್ಲಿ ಮತ್ತೊಂದು ರೇವ್‌ಪಾರ್ಟಿ ನಡೆಯುತ್ತಿದ್ದ ಪ್ರತಿಷ್ಠಿತ ವಿಲ್ಲಾದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ವಿಜಯನಗರ ನಿವಾಸಿ ದೀಕ್ಷಿತ್(26), ತರುಣ್(25) ಮತ್ತು ಮಹಾರಾಷ್ಟ್ರದ ಸಾಂಬಾಜಿನಗರ ವೇದಾಂತ್(29) ಬಂಧಿತರು. ಆರೋಪಿಗಳಿಂದ ಹುಕ್ಕಾ ಫ್ಲೆವರ್‌ಗಳು,ಇ-ಸಿಗರೇಟ್, ಬೆಲೆ ಬಾಳುವ ಮದ್ಯದ ಬಾಟಲಿಗಳು ಸೇರಿ ಇತರೆ ನಶೆಯುಕ್ತ ವಸ್ತುಗಳು ಪತ್ತೆಯಾಗಿವೆ.
ಹೌಸ್ ಪಾರ್ಟಿ ಎಂಬ ಹೆಸರಿನ ವಾಟ್ಸ್‌ಪ್ ಗ್ರೂಪ್ ಸೃಷ್ಟಿಸಿಕೊಂಡಿದ್ದ ಗುಂಪು ‘ಅಮಿಗೊಸ್ ಆ್ಯಪ್’ ಮೂಲಕ ಯುವಕ-ಯುವತಿಯರನ್ನು ಗುಂಪಿಗೆ ಸೇರಿಕೊಂಡು ರೇವ್ ಪಾರ್ಟಿ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಮಹಿಳಾ ಸಂರಕ್ಷಣಾ ದಳ ದಾಳಿ ನಡೆಸಿ ಪಾರ್ಟಿ ಆಯೋಜನೆ ಮಾಡಿದ್ದ ಮೂವರನ್ನು ಬಂಧಿಸಿದ್ದಾರೆ. ನಗರದ ಹೊರವಲಯದಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಗಳು ಇದೀಗ ನಗರದ ಒಳಗೆ ರಾಜಾರೋಷವಾಗಿ ನಡೆಯುತ್ತಿರುವುದು ಆತಂಕ ಮೂಡಿಸಿದೆ.
29 ಮಂದಿ ಭಾಗಿ:
ನಗರದ ಹೆಚ್‌ಎಸ್‌ಆರ್ ಲೇಔಟ್‌ನ ರೆವ್ ಕೀಸ್ ಹಾಸ್ಪಿಟಲಿಟಿ ಸರ್ವೀಸ್ ಎಂಬ ವಿಲ್ಲಾದಲ್ಲಿ ಪಾರ್ಟಿ ಮಾಡುತ್ತಿದ್ದರು. ಈ ಮಾಹಿತಿ ಮೇರೆಗೆ ಎಸಿಪಿ ಧರ್ಮೇಂದ್ರ ನೇತೃತ್ವದ ತಂಡ ದಾಳಿ ನಡೆಸಿ 30ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಖಾಸಗಿ ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದು, ಅಮಿಗೊಸ್ ಆ್ಯಪ್ ಮೂಲಕ ಯುವಕ-ಯುವತಿಯರನ್ನು ಸಂಪರ್ಕಿಸುತ್ತಿದ್ದರು. ನಂತರ ಹೌಸ್‌ಪಾರ್ಟಿ ಎಂಬ ವಾಟ್ಸ್‌ಪ್ ಗ್ರೂಪ್ ಮೂಲಕ ಎಲ್ಲರನ್ನು ಸೇರಿಸಿ ಪಾರ್ಟಿ ಆಯೋಜಿಸಿ, ಯುವಕರಿಗೆ 1099 ರೂ. ಯುವತಿಯರಿಗೆ 499 ದರ ನಿಗದಿ ಮಾಡಿದ್ದರು ಎಂಬುದು ಗೊತ್ತಾಗಿದೆ. ದಾಳಿ ವೇಳೆ 12 ಮಂದಿ ಯುವತಿಯರು ಹಾಗೂ 17ಮಂದಿ ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ಎಲ್ಲರನ್ನು ಮಾದಕ ವಸ್ತು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ದಿನಕ್ಕೆ 20 ಸಾವಿರ ಬಾಡಿಗೆ:
ಪಾರ್ಟಿ ನಡೆಸಲು ವಿಲ್ಲಾಕ್ಕೆ ದಿನಕ್ಕೆ 20 ಸಾವಿರ ರೂ. ಬಾಡಿಗೆ ನೀಡಿ ರೆವ್ ಕೀ ಹಾಸ್ಪಿಟಾಲಿಟಿ ವಿಲ್ಲಾ ಬುಕ್ ಮಾಡಿ, ಇಡೀ ರಾತ್ರಿ ಮದ್ಯ, ನಿಷೇಧಿತ ಹುಕ್ಕಾ ಹಾಗೂ ಇ-ಸಿಗರೇಟ್‌ಗಳೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿದ್ದರು ಎನ್ನಲಾಗಿದೆ. ರೇವ್‌ಪಾರ್ಟಿ ಸುಳಿವು ಲಭಿಸುತ್ತಿದ್ದಂತೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪಾರ್ಟಿಯಲ್ಲಿದ್ದ ಮಹಿಳೆಯರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ನಿಯಮ ಉಲ್ಲಂಘಿಸಿ ವಿಲ್ಲಾ ನೀಡಿದ್ದ ಮನೆ ಮಾಲೀಕರ ವಿರುದ್ಧ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ಮೇಲೆ ಅತ್ಯಾಚಾರ ಪ್ರಕರಣ
ನಗರದ ಜಕ್ಕೂರು ಬಳಿಯ ರೆಕ್ಸ್‌ವಿಲ್ಲಾದಲ್ಲಿ ಪಾರ್ಟಿಗೆ ಕರೆದು ತಮಿಳುನಾಡು ಮೂಲದ ವಿದ್ಯಾರ್ಥಿನಿ ಮೇಲೆ ಆಕೆಯ ಸ್ನೇಹಿತರೇ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಸಂಬಂಧ ಯುವತಿ ನೀಡಿದ ದೂರಿನ ಆಧಾರದ ಮೇಲೆ ಅಮೃತಹಳ್ಳಿ ಪೊಲೀಸರು ಪಶ್ಚಿಮ ಬಂಗಾಳ ಮೂಲದ ಡಿಕ್ಸನ್ ಸ್ಯಾಂಡ್ರೊ (21) ಮತ್ತು ಅವನ ಸ್ನೇಹಿತ ನಿಖಿಲ್ (35) ಎಂಬುವರನ್ನು ಬಂಧಿಸಿದ್ದರು. ಸಂತ್ರಸ್ಥ ಯುವತಿ ಬೆಂಗಳೂರಿನ ಖಾಸಗಿ ಕಾಲೇಜಿಗೆ ದಾಖಲಾದ ಮೊದಲ ವರ್ಷದ ಬಿಎ ವ್ಯಾಸಂಗ ಮಾಡುತ್ತಿದರು. ಫೆಬ್ರವರಿ 14ರ ರಾತ್ರಿ, ಆರೋಪಿ ಡಿಕ್ಸನ್ ಜಕ್ಕೂರು ಬಳಿಯ ರೆಕ್ಸ್ ವಿಲ್ಲಾಕ್ಕೆ ಪಾರ್ಟಿಗೆ ಆಹ್ವಾನಿಸಿದ್ದಾನೆ. ಹೀಗಾಗಿ ಯುವತಿ ಮಧ್ಯರಾತ್ರಿಯ ನಂತರ ವಿಲ್ಲಾಗೆ ಹೋಗಿದ್ದು, ಈ ವೇಳೆ ಡಿಕ್ಸನ್ ತನ್ನ ಸಹಚರ ನಿಖಿಲ್ ಜತೆ ಕುಡಿದ ಮತ್ತಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದರು. ಅಲ್ಲದೇ ಆರೋಪಿಗಳು ಮದ್ಯದಲ್ಲಿ ಡ್ರಗ್ಸ್ ಬರೆಯಿಸಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿತ್ತು. ಇದಾದ ಬಳಿಕ ಈಗ ಇಂತಹದ್ದೇ ವಿಲ್ಲಾದಲ್ಲಿ ಮತ್ತೊಂದು ರೇವ್ ಮಾದರಿಯ ಪಾರ್ಟಿ ನಡೆದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net