ಕಳೆದ 40 ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ. ಮೂರು ಬಾರಿ ಶಾಸಕನಾಗಿ ಪಕ್ಷಕ್ಕೆ ಅಗಾಧ ಕೊಡುಗೆ ನೀಡಿದ್ದು, ಪಕ್ಷವೂ ನನಗೆ ಸಾಕಷ್ಟು ಅವಕಾಶ ನೀಡಿದೆ. ಆದರೆ, ಅವಿಭಜಿತ ವಿಜಯಪುರ ಜಿಲ್ಲೆಯ ರಾಜಕೀಯ ಇತಿಹಾಸ ಗಮನಿಸಿದಾಗ ಇಂಡಿ ವಿಧಾನ ಸಭೆ ಕ್ಷೇತ್ರಕ್ಕೆ ಈವರೆಗೂ ಸಚಿವ ಸ್ಥಾನ ಸಿಕ್ಕಿಲ್ಲ. ಆ ಕೊರಗು ಇಂದಿಗೂ ಕ್ಷೇತ್ರದ ಜನರನ್ನು ಕಾಡುತ್ತಿದೆ. ಈ ಹಿಂದೆ ಹ್ಯಾಟ್ರಿಕ್ ಸಾಧನೆ ಮೆರೆದ ಆರ್.ಆರ್. ಕಲ್ಲೂರ, ರವಿಕಾಂತ ಪಾಟೀಲರಾದಿಯಾಗಿ ಯಾರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಈ ಅವಧಿಯಲ್ಲಾದರೂ ಸಚಿವ ಸ್ಥಾನ ಸಿಗಬಹುದೆಂಬ ಆಶಾಭಾವ ಕ್ಷೇತ್ರದ ಜನರಲ್ಲಿ ಮನೆ ಮಾಡಿದೆ. ಈ ನಿಟ್ಟಿನಲ್ಲಿ ಹೈಕಮಾಂಡ್ ಗಮನಿಸಬೇಕು ಎಂದರು.