ಎರಡನೇ ಹಂತದಲ್ಲಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ

ಎಂ.ಬಿ. ಪಾಟೀಲ
ಎಂ.ಬಿ. ಪಾಟೀಲ
Published on

ಪ್ರಮುಖ ಮುಖ್ಯಾಂಶಗಳು

  • ಹೈಕಮಾಂಡ್ ಮುಖಂಡರಲ್ಲಿ ಎಂಬಿಪಿ ವೈಯಕ್ತಿಕ ಮನವಿ
  • ಸಚಿವ ಎಂ.ಬಿ. ಪಾಟೀಲ ಮಾಹಿತಿ
ವಿಜಯಪುರ: ವಿಜಯಪುರ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ಬೇಡಿಕೆ ಇದ್ದು, ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಮುಖಂಡರಿಗೆ ವಿನಂತಿಸಿದ್ದೇನೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಬುಧವಾರ, ಸಚಿವರಾಗಿ ಪ್ರಮಾಣ ಸ್ವೀಕರಿಸುವ ಮುಂಚೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 6 ಜನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಇನ್ನೊಂದು ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಮುಖಂಡರಿಗೆ ವೈಯಕ್ತಿಕವಾಗಿ ವಿನಂತಿಸಿದ್ದೇನೆ. ಮುಂದಿನ ಸಚಿವ ಸಂಪುಟದಲ್ಲಿ ಅದೂ ಈಡೇರಲಿದೆ ಎಂದು ಅವರು ಭರವಸೆ ನೀಡಿದರು.
ಈ ಹಿಂದೆ ಐದು ವರ್ಷ ಜಲಸಂಪನ್ಮೂಲ ಸಚಿವನಾಗಿ, ಅಲ್ಪ ಅವಧಿಗೆ ಗೃಹ ಸಚಿವನಾಗಿ ಮತ್ತು ಮೂರು ವರ್ಷ ಕೈಗಾರಿಕೆ ಸಚಿವನಾಗಿ ಮಾಡಿದ ಕಾರ್ಯ ನನಗೆ ತೃಪ್ತಿ ತಂದಿದೆ. ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿಯವರ ಆಶೀರ್ವಾದದಿಂದ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದೇನೆ.
ವಿಜಯಪುರ ಜಿಲ್ಲೆಯ ಜನತೆಯ ಆಶೀರ್ವಾದದಿಂದ ಇದೀಗ ಮತ್ತೆ ಸಚಿವನಾಗಿದ್ದು, ಖಾತೆ ಯಾವುದು ಸಣ್ಣದಲ್ಲ, ದೊಡ್ಡದಲ್ಲ. ಗ್ರಂಥಾಲಯ ಸಚಿವನಾದರೂ ಪ್ರತಿ ಹಳ್ಳಿಗಳಲ್ಲಿ ಗ್ರಂಥಾಲಯ ತೆರೆದು ಜ್ಞಾನದ ಪ್ರಸಾರ ಮಾಡುವ ಮೂಲಕ ಆ ಇಲಾಖೆಯ ಘನತೆಯನ್ನು ಹೆಚ್ಚಿಸಬಹುದು ಎಂದರು.
ವಿಜಯಪುರ ಜಿಲ್ಲೆಯಲ್ಲಿ 8 ಮತಕ್ಷೇತ್ರಗಳಿದ್ದು, ಮುಂದಿನ ಬಾರಿ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರ ಆಯ್ಕೆಯಾಗಲು ನಾವೆಲ್ಲರೂ ಶ್ರಮಿಸಬೇಕಿದೆ ಎಂದು ಅವರು ಹೇಳಿದರು.
ಪಕ್ಷದ ಮುಖಂಡರಾದ ಎಸ್.ಎಂ. ಪಾಟೀಲ ಗಣಿಯಾರ, ಮಾಜಿ ಶಾಸಕ ರಾಜು ಆಲಗೂರ, ಹಿರಿಯ ನ್ಯಾಯವಾದಿ ಎಸ್.ಎಸ್. ಛಾಯಾಗೋಳ, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿಯವರು ಎಂ.ಬಿ. ಪಾಟೀಲರನ್ನು ಅಭಿನಂದಿಸಿದರು.
ತಿಕೋಟಾ-ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಈರಗೊಂಡ ಬಿರಾದಾರ, ಮುಖಂಡರಾದ ಜಿ.ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಬಸವರಾಜ ದೇಸಾಯಿ ಜೈನಾಪುರ, ವಿ.ಎಸ್. ಪಾಟೀಲ, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಸಂತೋಷ ಹೊಕ್ರಾಣಿ, ಚೆನ್ನು ವಾರದ, ಆರ್.ಜೆ. ಯರನಾಳ, ಜಕ್ಕಪ್ಪ ಯಡವೆ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net