ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕಹಿ ಸುದ್ದಿ: ಮುಂದಿನ ತಿಂಗಳು ಶೇ. 5ರಷ್ಟು ಟಿಕೆಟ್​ ಬೆಲೆ ಏರಿಕೆ! Namma Metro

ನಮ್ಮ ಮೆಟ್ರೋ
ನಮ್ಮ ಮೆಟ್ರೋ
Published on

ಪ್ರಮುಖ ಮುಖ್ಯಾಂಶಗಳು

  • ಮತ್ತೊಮ್ಮೆ ಟಿಕೆಟ್​ ಬೆಲೆ ಏರಿಕೆಗೆ ಮುಂದಾದ ನಮ್ಮ ಮೆಟ್ರೋ
  • ಕಳೆದ ವರ್ಷ ಫೆಬ್ರವರಿಯಲ್ಲಿ ಶೇ. 71 ರಷ್ಟು ಬೆಲೆ ಏರಿಸಿತ್ತು
  • ಇದೀಗ ಮತ್ತೆ ಫೆಬ್ರವರಿ ತಿಂಗಳಲ್ಲಿ ಶೇ. 5 ರಷ್ಟು ಟಿಕೆಟ್​ ಬೆಲೆ ಏರಿಸಲು ಸಜ್ಜು
ಬೆಂಗಳೂರು: ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಟಿಕೆಟ್​ ಬೆಲೆಯಲ್ಲಿ ಭಾರಿ ಏರಿಕೆ ಮಾಡಿದ್ದ ನಮ್ಮ ಮೆಟ್ರೋ ( Namma Metro ) ಇದೀಗ, ಮತ್ತೊಮ್ಮೆ ಬೆಲೆ ಏರಿಕೆಗೆ ಮುಂದಾಗಿದೆ. ಮುಂದಿನ ಫೆಬ್ರವರಿ ತಿಂಗಳಲ್ಲಿ ಮತ್ತೊಮ್ಮೆ ಮೆಟ್ರೋ ದರ ಏರಿಕೆಯಾಗುವ ಸಾಧ್ಯತೆ ಇದ್ದು, ಪ್ರಯಾಣಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) 2026ರ ಫೆಬ್ರವರಿಯಿಂದ ಶೇ.5ರಷ್ಟು ಟಿಕೆಟ್​ ದರ ಹೆಚ್ಚಿಸಲು ಮುಂದಾಗಿದೆ. ದರ ನಿಗದಿ ಸಮಿತಿ ಶಿಫಾರಸ್ಸಿನ ಆಧಾರದ ಮೇಲೆ ಈ ದರ ಹೆಚ್ಚಳವಾಗಲಿದೆ.
ನಮ್ಮ ಮೆಟ್ರೋದಲ್ಲಿ ಪ್ರತಿ ವರ್ಷ ಸ್ವಯಂಚಾಲಿತ ದರ ಏರಿಕೆ ಮಾಡುವ ವ್ಯವಸ್ಥೆ ಜಾರಿಯಾಗಿದೆ. ಅದರಂತೆ ಫೆಬ್ರವರಿಯಲ್ಲಿ ಟಿಕೆಟ್​ ಬೆಲೆಯಲ್ಲಿ ಹೆಚ್ಚಳವಾಗಲಿದೆ. 2025ರ ಫೆಬ್ರವರಿಯಲ್ಲಿ ಶೇ 71 ರಷ್ಟು ಭಾರಿ ದರ ಏರಿಕೆ ಮಾಡಲಾಗಿತ್ತು. ಏಕೆಂದರೆ, ಹಲವು ವರ್ಷಗಳಿಂದ ಬೆಲೆ ಏರಿಕೆ ಮಾಡಿರಲಿಲ್ಲ. ಹೀಗಾಗಿ ಶೇ. 71ರಷ್ಟು ಏರಿಕೆ ಮಾಡಿದ್ದೇವೆ ಎಂದು ಬಿಎಂಆರ್​ಸಿಎಲ್​ ಸ್ಪಷ್ಟನೆ ನೀಡಿತ್ತು.
ಕಳೆದ ವರ್ಷ ಕನಿಷ್ಠ 10 ರೂಪಾಯಿಯಿಂದ ಗರಿಷ್ಠ 90 ರೂ. ವರೆಗೂ ಏರಿಕೆ ಮಾಡಲಾಗಿತ್ತು. ಇದು ಸಾರ್ವಜನಿಕರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ವಾರ್ಷಿಕ ನೀತಿಯಡಿ ಮತ್ತೆ ದರ ಏರಿಕೆಯಾಗುತ್ತಿದ್ದು, ಜನರಿಂದ ತೀವ್ರ ಟೀಕೆಗಳು ಕೇಳಿಬರುತ್ತಿವೆ.

ದರ ಏರಿಕೆ ಏಕೆ?

ವಿದ್ಯುತ್ ದರ ಏರಿಕೆ, ನಿರ್ವಹಣೆ ವೆಚ್ಚ ಹೆಚ್ಚಳ, ಸಾಲ ಮರುಪಾವತಿ ಮತ್ತು ಆರ್ಥಿಕ ಸ್ಥಿರತೆಗಾಗಿ ದರ ಹೆಚ್ಚಳ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಈ ಏರಿಕೆಯಿಂದ ಪ್ರಯಾಣಿಕರಿಗೆ (ವಿಶೇಷವಾಗಿ ದೈನಂದಿನ ಕಾರ್ಮಿಕರು) ಹೆಚ್ಚಿನ ಹೊರೆ ಆಗಲಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ. ಸ್ಮಾರ್ಟ್ ಕಾರ್ಡ್ ಅಥವಾ QR ಟಿಕೆಟ್ ಬಳಸುವವರಿಗೆ 5% ರಿಯಾಯಿತಿ ಮುಂದುವರಿಯುತ್ತದೆ.

ಇತರ ನಗರಗಳಲ್ಲಿ ಇತ್ತೀಚಿನ ದರ ಏರಿಕೆ

ದೆಹಲಿ ಮೆಟ್ರೋದಲ್ಲಿ 2025ರ ಆಗಸ್ಟ್‌ನಲ್ಲಿ ಸಣ್ಣ ಪ್ರಮಾಣದ ಏರಿಕೆ (1 ರಿಂದ 4 ರೂ.) ಮಾಡಲಾಗಿದ್ದು, ಕನಿಷ್ಠ 11 ಮತ್ತು ಗರಿಷ್ಠ 64 ರೂ. ಆಗಿದೆ. ಆದರೆ ಬೆಂಗಳೂರಿನಷ್ಟು ಭಾರಿ ಏರಿಕೆ ಇಲ್ಲ. ಬೆಲೆಗಳ ಕುರಿತಾದ ಹೆಚ್ಚಿನ ವಿವರಗಳಿಗಾಗಿ BMRCL ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net