ವಾಷಿ ಜತೆ ಕನ್ನಡಿಗ ರಾಹುಲ್ ತಮಿಳಿನಲ್ಲಿ ಮಾತಾಡಿದಕ್ಕೆ ಸಂಜಯ್​ ಬಂಗಾರ್ ಈ ರೀತಿ ಹೇಳಿದ್ದು ಎಷ್ಟು ಸರಿ? National Language

ಕೆಎಲ್​ ರಾಹುಲ್ ಮತ್ತು ವಾಷಿಂಗ್ಟರ್​ ಸುಂದರ್​
ಕೆಎಲ್​ ರಾಹುಲ್ ಮತ್ತು ವಾಷಿಂಗ್ಟರ್​ ಸುಂದರ್​
Published on

ಪ್ರಮುಖ ಮುಖ್ಯಾಂಶಗಳು

  • ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯ
  • ಈ ಪಂದ್ಯದ ಸಮಯದಲ್ಲಿ ಒಂದು ಆಸಕ್ತಿದಾಯಕ ಘಟನೆ ನಡೆಯಿತು
  • ಭಾಷೆಯ ವಿಚಾರವಾಗಿ ಭಾರತದ ಇಬ್ಬರು ಕಾಮೆಂಟೇಟರ್ಸ್​ ನಡುವೆ ಲೈವ್​ನಲ್ಲಿ ವಾಗ್ವಾದ
ನವದೆಹಲಿ: ಮೂರು ಏಕದಿನ ಪಂದ್ಯಗಳ ಸರಣಿಯ ಭಾಗವಾಗಿ ನಿನ್ನೆ (ಜ.11) ಗುಜರಾತಿನ ವಡೋದರಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಆತಿಥೇಯ ಟೀಮ್​ ಇಂಡಿಯಾ 4 ವಿಕೆಟ್​ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಗಮನಾರ್ಹ ಸಂಗತಿ ಏನೆಂದರೆ, ಕಿವೀಸ್​ ಪಡೆ ಭಾರತಕ್ಕೆ ಕಠಿಣ ಪೈಪೋಟಿ ನೀಡಿತು. ಒಂದು ಹಂತದಲ್ಲಿ ಪಂದ್ಯವನ್ನು ತಮ್ಮಡೆಗೆ ಸೆಳೆದುಕೊಂಡಿತು. ಆದರೆ, ಅಂತಿಮ ಹಂತದಲ್ಲಿ ಮುಗ್ಗಿರಿಸಿದ ಟೀಮ್​ ಇಂಡಿಯಾ ಮುಂದೆ ಶರಣಾಯಿತು. ಇನ್ನು ಈ ಪಂದ್ಯದ ಸಮಯದಲ್ಲಿ ಒಂದು ಆಸಕ್ತಿದಾಯಕ ಘಟನೆ ನಡೆಯಿತು. ಭಾಷಾ ( National Language ) ವಿಚಾರವಾಗಿ ಭಾರತದ ಇಬ್ಬರು ಕಾಮೆಂಟೇಟರ್ಸ್​ ನಡುವೆ ಲೈವ್​ನಲ್ಲಿ ವಾಗ್ವಾದ ನಡೆದಿದೆ.
ಹೌದು, ನಿನ್ನೆಯ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡದ ಆರಂಭಿಕ ಆಟಗಾರರಾದ ಡೆವೊನ್​ ಕಾನ್ವೆ ಮತ್ತು ಹೆನ್ರಿ ನಿಕೋಲಸ್​, ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮೊದಲ ವಿಕೆಟ್​ಗೆ ಈ ಜೋಡಿ 117 ರನ್​ ಜತೆಯಾಟ ನೀಡಿತು. ಉಭಯ ಆಟಗಾರರು ಚೆನ್ನಾಗಿ ಆಡುವಾಗ ವಿಕೆಟ್​ ಕೀಪಿಂಗ್​ ಮಾಡುತ್ತಿದ್ದ ಕನ್ನಡಿಗ ರಾಹುಲ್​, ವಾಷಿಂಗ್ಟನ್​ ಸುಂದರ್​ ಅವರಿಗೆ ತಮಿಳಿನಲ್ಲಿ ಸಲಹೆಗಳನ್ನು ನೀಡುತ್ತಿದ್ದರು.​ ಈ ವೇಳೆ ಕಾಮೆಂಟರಿ ಮಾಡುತ್ತಿದ್ದ ಟೀಮ್​ ಇಂಡಿಯಾದ ಮಾಜಿ ಆಟಗಾರ ವರುಣ್​ ಆ್ಯರನ್​, ರಾಹುಲ್​ ಅವರು ವಾಷಿಂಗ್ಟನ್​ಗೆ ಸಹಾಯ ಮಾಡಲು ಬಯಸಿದರೆ ತಮಿಳು ಭಾಷೆಯಲ್ಲಿ ಹೇಳುವುದು ಉತ್ತಮ. ಏಕೆಂದರೆ, ಚೆನ್ನಾಗಿ ಅರ್ಥವಾಗುತ್ತದೆ ಎಂದರು. ಆದರೆ, ಟೀಮ್​ ಇಂಡಿಯಾದ ಮಾಜಿ ಬ್ಯಾಟಿಂಗ್​ ಕೋಚ್, ಸಂಜಯ್​ ಬಂಗಾರ್​ ಅವರು ನಾನು ರಾಷ್ಟ್ರೀಯ ಭಾಷೆಯನ್ನು ಆಯ್ದುಕೊಳ್ಳುತ್ತೇನೆ ಎಂದು ಪರೋಕ್ಷವಾಗಿ ಹಿಂದಿಯನ್ನು ಉಲ್ಲೇಖಿಸುವ ಮೂಲಕ ಭಾಷಾ ವಿವಾದದ ಚರ್ಚೆ ಹುಟ್ಟುಹಾಕಿದರು.
ಬೌಲಿಂಗ್​ ಮಾಡುವಾಗ ಚೆಂಡಿನ ವೇಗವನ್ನು ಕಡಿಮೆ ಮಾಡುವಂತೆ ರಾಹುಲ್​ ಅವರು ವಾಷಿಂಗ್ಟನ್​ ಸುಂದರ್​ಗೆ ಹೇಳುವುದು ಸ್ಟಂಪ್​ ಮೈಕ್​ನಿಂದ ಕೇಳಿಸುತ್ತದೆ. ಈ ಅಂಶವನ್ನೇ ಇಟ್ಟುಕೊಂಡು ವರುಣ್​ ಆ್ಯರನ್​ ಮತ್ತು ಸಂಜಯ್​ ಬಂಗಾರ್​ ನಡುವೆ ಈ ಕೆಳಗಿನಂತೆ ಸಂಭಾಷಣೆ ನಡೆಯಿತು.
ವರುಣ್​ ಆ್ಯರನ್​: ಕೆ.ಎಲ್​. ರಾಹುಲ್​ ಅವರು ವಾಷಿಂಗ್ಟನ್​ ಸುಂದರ್​ ಜತೆ ತಮಿಳಿನಲ್ಲಿ ಮಾತನಾಡಬೇಕು. ಆತ ಮೀಡಿಯಂ ಪೇಸರ್​ ಬೇಡ ನಿಧಾನವಾಗಿ ಬೌಲಿಂಗ್​ ಮಾಡುವಂತೆ ರಾಹುಲ್​ ಹೇಳುತ್ತಿದ್ದಾರೆ. ಸಂಜಯ್​ ಭಾಯ್​, ತಮಿಳಿನಲ್ಲಿ ಹೇಳುವುದರಿಂದ ವಾಷಿಂಗ್ಟನ್​ ಸುಂದರ್​ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಎಂಬುದನ್ನು ನೀವು ಒಪ್ಪುತ್ತೀರಾ?
ಸಂಜಯ್​ ಬಂಗಾರ್​: ನಾನು ರಾಷ್ಟ್ರೀಯ ಭಾಷೆಯಲ್ಲಿ ಹೆಚ್ಚು ನಂಬಿಕೆಯನ್ನು ಇಡುತ್ತೇನೆ.
ವರುಣ್​: ನಾನು ಪ್ರಾದೇಶಿಕ ಭಾಷೆಗಳಲ್ಲಿ ಮಾತ್ರ ನಂಬಿಕೆ ಇಡುತ್ತೇನೆ ಎಂದು ನಾನೆಲ್ಲ ಹೇಳುತ್ತಿದ್ದೇನೆ?
ಸಂಜಯ್​ ಬಂಗಾರ್​: ನೋಡಿ, ವಾಷಿಂಗ್ಟನ್​ ಅವರು ಹಿಂದಿನ ಚೆಂಡನ್ನು 92 ಕಿ.ಮೀ. ವೇಗದಲ್ಲಿ ಬೌಲ್ ಮಾಡಿದರು. ಹಾಗಾಗಿ ಭಾಷೆ ಅಷ್ಟು ಮುಖ್ಯ ಎಂದು ನಾನು ಭಾವಿಸುವುದಿಲ್ಲ.
ಈ ರೀತಿಯಾಗಿ ವರುಣ್​ ಮತ್ತು ಸಂಜಯ್​ ನಡುವೆ ವಾಗ್ವಾದ ನಡೆಯಿತು. ಅಂತಿಮವಾಗಿ ಇಬ್ಬರು ತಮ್ಮ ಚರ್ಚೆಯಿಂದ ಹಿಂದೆ ಸರಿದು, ಪಂದ್ಯದ ಕಡೆ ಗಮನ ಹರಿಸಿದರು. ಇಲ್ಲಿ ಮುಖ್ಯವಾಗಿ ತಿಳಿಯಬೇಕಾದ ಸಂಗತಿ ಏನೆಂದರೆ, ಭಾರತ ಯಾವುದೇ ರಾಷ್ಟ್ರ ಭಾಷೆಯನ್ನು ಹೊಂದಿಲ್ಲ. ಆದರೆ, ಭಾರತ ಸಂವಿಧಾನ 8ನೇ ಶೆಡ್ಯೂಲ್​​ನಲ್ಲಿ ಹಿಂದಿ ಮತ್ತು ಇಂಗ್ಲಿಷ್​ ಅನ್ನು ಅಧಿಕೃತ ಭಾಷೆ ಅಂತ ಮಾತ್ರ ಪರಿಗಣಿಸಲಾಗಿದೆ. ಭಾರತ ಒಕ್ಕೂಟ ರಾಜ್ಯಗಳ ವ್ಯವಸ್ಥೆಯನ್ನು ಹೊಂದಿರುವುದರಿಂದ ಇಲ್ಲಿ ರಾಷ್ಟ್ರೀಯ ಭಾಷೆ ಎಂದು ಯಾವುದನ್ನು ಪರಿಗಣಿಸಿಲ್ಲ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 300 ರನ್ ಗಳಿಸಿತು. ಕಿವೀಸ್ ತಂಡದ ಬ್ಯಾಟ್ಸ್‌ಮನ್‌ಗಳಲ್ಲಿ ಡ್ಯಾರೆಲ್ ಮಿಚೆಲ್ (84 ರನ್​, 71 ಎಸೆತ, 5 ಬೌಂಡರಿ, 3 ಸಿಕ್ಸರ್‌), ಹೆನ್ರಿ ನಿಕೋಲ್ಸ್ (62 ರನ್​, 69 ಎಸೆತ, 8 ಬೌಂಡರಿ) ಮತ್ತು ಡೆವೊನ್ ಕಾನ್ವೇ (56 ರನ್​, 67 ಎಸೆತ, 6 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳನ್ನು ಗಳಿಸಿದರು. ಟೀಮ್ ಇಂಡಿಯಾ ಬೌಲರ್‌ಗಳಲ್ಲಿ ಸಿರಾಜ್, ಹರ್ಷಿತ್ ರಾಣಾ ಮತ್ತು ಪ್ರಸಿದ್ಧ ಕೃಷ್ಣ ತಲಾ ಎರಡು ವಿಕೆಟ್ ಪಡೆದರು. ಕುಲದೀಪ್ ಯಾದವ್ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ್ದ ಭಾರತದ ಪರ ವಿರಾಟ್ ಕೊಹ್ಲಿ (93 ರನ್​, 8 ಬೌಂಡರಿ, 91 ಎಸೆತ, 1 ಸಿಕ್ಸರ್) ಅದ್ಭುತ ಇನ್ನಿಂಗ್ಸ್ ಆಡಿದರು. ಭಾರತ 49 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. ಉಳಿದ ಬ್ಯಾಟ್ಸ್‌ಮನ್‌ಗಳಲ್ಲಿ, ಶುಭಮಾನ್ ಗಿಲ್ (56 ರನ್​, 71 ಎಸೆತ 3 ಬೌಂಡರಿ, 2 ಸಿಕ್ಸರ್) ಮತ್ತು ಶ್ರೇಯಸ್ ಅಯ್ಯರ್ (49 ರನ್​, 47 ಎಸೆತ, 4 ಬೌಂಡರಿ, 1 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಕಿವೀಸ್ ಬೌಲರ್‌ಗಳಲ್ಲಿ ಕೈಲ್ ಜೇಮಿಸನ್ ನಾಲ್ಕು ವಿಕೆಟ್ ಪಡೆದರು. ಆದಿತ್ಯ ಅಶೋಕ್ ಮತ್ತು ಕ್ರಿಶ್ಚಿಯನ್ ಕ್ಲಾರ್ಕ್ ತಲಾ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net