ನಾವು ವಿಶ್ವದ ನಂಬರ್ 1 ತಂಡಕ್ಕೆ... ಸೋಲಿನ ಬೆನ್ನಲ್ಲೇ ನ್ಯೂಜಿಲೆಂಡ್ ನಾಯಕನಿಂದ ಅಚ್ಚರಿ ಹೇಳಿಕೆ​! Michael Bracewell

 ನ್ಯೂಜಿಲೆಂಡ್ ನಾಯಕ ಮೈಕೆಲ್ ಬ್ರೇಸ್‌ವೆಲ್
ನ್ಯೂಜಿಲೆಂಡ್ ನಾಯಕ ಮೈಕೆಲ್ ಬ್ರೇಸ್‌ವೆಲ್
Published on

ಪ್ರಮುಖ ಮುಖ್ಯಾಂಶಗಳು

  • ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯ
  • ಕ್ರಿಕೆಟ್​ ಪ್ರೇಮಿಗಳ ಮನಸ್ಸು ಗೆದ್ದ ನ್ಯೂಜಿಲೆಂಡ್ ತಂಡದ ಹೋರಾಟದ ಮನೋಭಾವ
  • ಫೀಲ್ಡಿಂಗ್ ಜೊತೆಗೆ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಭಾರತಕ್ಕೆ ಬೆದರಿಕೆಯಾಗಿತ್ತು ಕಿವೀಸ್​
  • ಟೀಮ್​ ಇಂಡಿಯಾ ವಿರುದ್ಧ ಸೋಲಿನ ಬೆನ್ನಲ್ಲೇ ನ್ಯೂಜಿಲೆಂಡ್ ನಾಯಕನಿಂದ ಅಚ್ಚರಿ ಹೇಳಿಕೆ​
Michael Bracewell : ಮೂರು ಏಕದಿನ ಪಂದ್ಯಗಳ ಸರಣಿಯ ಭಾಗವಾಗಿ ನಿನ್ನೆ (ಜ.11) ಗುಜರಾತಿನ ವಡೋದರಾದಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡ 4 ವಿಕೆಟ್‌ಗಳಿಂದ ಸೋಲನ್ನು ಅನುಭವಿಸಿತು. ಆದರೂ, ನ್ಯೂಜಿಲೆಂಡ್ ತಂಡ ತಮ್ಮ ಹೋರಾಟದ ಮನೋಭಾವದಿಂದಾಗಿ ಕ್ರಿಕೆಟ್​ ಪ್ರೇಮಿಗಳ ಮನಸ್ಸನ್ನು ಗೆದ್ದಿತು.
ಹೌದು, ಕಿವೀಸ್​ ಪಡೆ ಫೀಲ್ಡಿಂಗ್ ಜೊತೆಗೆ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಭಾರತಕ್ಕೆ ಬೆದರಿಕೆಯಾಗಿತ್ತು. ಮೊದಲು, ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಕಿವೀಸ್​, ನಂತರ ಬೌಲಿಂಗ್‌ನಲ್ಲಿ ವಿಶಿಷ್ಟ ಹೋರಾಟದ ಮನೋಭಾವ ತೋರಿಸಿತು. ಒಂದು ಹಂತದಲ್ಲಿ, ಸುಲಭವಾಗಿ ಗೆಲುವಿನತ್ತ ಸಾಗುತ್ತಿದ್ದ ಭಾರತ ತಂಡಕ್ಕೆ ಸೋಲಿನ ಭಯ ಉಂಟು ಮಾಡಿತು. ಕೈಲ್ ಜೇಮಿಸನ್ ಅವರಂತಹ ಏಕೈಕ ಅನುಭವಿ ಬೌಲರ್‌ನೊಂದಿಗೆ ಕಿವೀಸ್​ ಪಡೆ, ಭಾರತೀಯ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರಿತು.
ಪಂದ್ಯದ ನಂತರ ಮಾತನಾಡಿದ ನಾಯಕ ಮೈಕೆಲ್ ಬ್ರೇಸ್‌ವೆಲ್, ತಮ್ಮ ತಂಡದ ಪ್ರದರ್ಶನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಟೀಮ್ ಇಂಡಿಯಾವನ್ನು ಕಾಡಿದ ಜೇಮಿಸನ್ ಅವರನ್ನು ಬ್ರೇಸ್​ವೆಲ್​ ಹೊಗಳಿದರು. ತಮ್ಮ ಅತ್ಯುತ್ತಮ ಬ್ಯಾಟಿಂಗ್‌ನಿಂದ ಇನ್ನಿಂಗ್ಸ್‌ಗೆ ಜೀವ ತುಂಬಿದ ಡ್ಯಾರಿಲ್ ಮಿಚೆಲ್​ರನ್ನೂ ಕೊಂಡಾಡಿದರು. ತಮ್ಮ ತಂಡದ ಹೋರಾಟದ ಮನೋಭಾವವನ್ನು ಹೊಗಳುತ್ತಾ ಉತ್ತುಂಗಕ್ಕೇರಿಸಿದರು.
ಅಷ್ಟಕ್ಕೂ ಬ್ರೇಸ್‌ವೆಲ್ ಹೇಳಿದ್ದೇನೆಂದರೆ, ಈ ಪಂದ್ಯದಲ್ಲಿ ನಾವು ಸೋತಿದ್ದರೂ, ನಮಗೆ ಹೆಮ್ಮೆಯಿದೆ. ನಾವು ವಿಶ್ವದ ನಂಬರ್ 1 ತಂಡವನ್ನು ಒತ್ತಡಕ್ಕೆ ಒಳಪಡಿಸಿದೆವು. ನಾವು ಇನ್ನೂ 20 ರಿಂದ 30 ರನ್ ಗಳಿಸಿದ್ದರೆ, ಫಲಿತಾಂಶ ವಿಭಿನ್ನವಾಗಿರುತ್ತಿತ್ತು. ಗಾಯದಿಂದ ಹಿಂತಿರುಗಿದ ಜೇಮಿಸನ್ ಅವರು ಅದ್ಭುತವಾಗಿ ಬೌಲಿಂಗ್ ಮಾಡಿದರು. ಬ್ಯಾಟ್ಸ್‌ಮನ್‌ಗಳಲ್ಲಿ ವಿಶೇಷವಾಗಿ ಡ್ಯಾರಿಲ್ ಮಿಚೆಲ್, ತಮ್ಮ ಎಲ್ಲಾ ಅನುಭವವನ್ನು ಬಳಸಿಕೊಂಡರು ಮತ್ತು ಉತ್ತಮ ಸ್ಕೋರ್ ಮಾಡಲು ನಮಗೆ ಸಹಾಯ ಮಾಡಿದರು. ಆದಾಗ್ಯೂ, ನಾವು ಇನ್ನೂ 20 ರಿಂದ 30 ರನ್ ಗಳಿಸಬೇಕಿತ್ತು ಎಂದರು.
ನಾವು ಯಾವಾಗಲೂ ಪಂದ್ಯವನ್ನು ಬದಲಾಯಿಸುವ ಕ್ಷಣಗಳನ್ನು ಸೃಷ್ಟಿಸುವ ಬಗ್ಗೆ ಮಾತನಾಡುತ್ತೇವೆ. ಇಂದು ನಾವು ಕೆಲವು ವಿಭಾಗಗಳಲ್ಲಿ ಅತ್ಯುತ್ತಮವಾಗಿ ಆಡಿದ್ದೇವೆ. ಆದರೆ, ಕೆಲವು ಪ್ರಮುಖ ಅವಕಾಶಗಳನ್ನು ಕಳೆದುಕೊಂಡೆವು. ಭಾರತದಲ್ಲಿ ಆಡುವುದು ಸುಲಭವಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ನಾವು ಸೋತರೂ ಸಹ, ನಮ್ಮ ತಂಡ ಯಾವಾಗಲೂ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಶ್ರಮಿಸುತ್ತದೆ ಎಂದು ಬ್ರೇಸ್‌ವೆಲ್ ಹೇಳಿದರು.
ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 300 ರನ್ ಗಳಿಸಿತು. ಕಿವೀಸ್ ತಂಡದ ಬ್ಯಾಟ್ಸ್‌ಮನ್‌ಗಳಲ್ಲಿ ಡ್ಯಾರೆಲ್ ಮಿಚೆಲ್ (84 ರನ್​, 71 ಎಸೆತ, 5 ಬೌಂಡರಿ, 3 ಸಿಕ್ಸರ್‌), ಹೆನ್ರಿ ನಿಕೋಲ್ಸ್ (62 ರನ್​, 69 ಎಸೆತ, 8 ಬೌಂಡರಿ) ಮತ್ತು ಡೆವೊನ್ ಕಾನ್ವೇ (56 ರನ್​, 67 ಎಸೆತ, 6 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳನ್ನು ಗಳಿಸಿದರು. ಟೀಮ್ ಇಂಡಿಯಾ ಬೌಲರ್‌ಗಳಲ್ಲಿ ಸಿರಾಜ್, ಹರ್ಷಿತ್ ರಾಣಾ ಮತ್ತು ಪ್ರಸಿದ್ಧ ಕೃಷ್ಣ ತಲಾ ಎರಡು ವಿಕೆಟ್ ಪಡೆದರು. ಕುಲದೀಪ್ ಯಾದವ್ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ್ದ ಭಾರತದ ಪರ ವಿರಾಟ್ ಕೊಹ್ಲಿ (93 ರನ್​, 8 ಬೌಂಡರಿ, 91 ಎಸೆತ, 1 ಸಿಕ್ಸರ್) ಅದ್ಭುತ ಇನ್ನಿಂಗ್ಸ್ ಆಡಿದರು. ಭಾರತ 49 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. ಉಳಿದ ಬ್ಯಾಟ್ಸ್‌ಮನ್‌ಗಳಲ್ಲಿ, ಶುಭಮಾನ್ ಗಿಲ್ (56 ರನ್​, 71 ಎಸೆತ 3 ಬೌಂಡರಿ, 2 ಸಿಕ್ಸರ್) ಮತ್ತು ಶ್ರೇಯಸ್ ಅಯ್ಯರ್ (49 ರನ್​, 47 ಎಸೆತ, 4 ಬೌಂಡರಿ, 1 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಕಿವೀಸ್ ಬೌಲರ್‌ಗಳಲ್ಲಿ ಕೈಲ್ ಜೇಮಿಸನ್ ನಾಲ್ಕು ವಿಕೆಟ್ ಪಡೆದರು. ಆದಿತ್ಯ ಅಶೋಕ್ ಮತ್ತು ಕ್ರಿಶ್ಚಿಯನ್ ಕ್ಲಾರ್ಕ್ ತಲಾ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net