ಬೆಂಗಳೂರು ದಕ್ಷಿಣ ನಗರ ಪಾಲಿಕೆಗೆ ಭರಪೂರ ಯೋಜನೆ ಘೋಷಣೆ- budget

ಬೆಂಗಳೂರು ದಕ್ಷಿಣ ನಗರ ಪಾಲಿಕೆ
ಬೆಂಗಳೂರು ದಕ್ಷಿಣ ನಗರ ಪಾಲಿಕೆ
Published on
ಬೆಂಗಳೂರು: ದಕ್ಷಿಣ ನಗರ ಪಾಲಿಕೆಯ 3,826.43 ಕೋಟಿ ರೂ. ಗಾತ್ರದ ಬಜೆಟ್ ಶನಿವಾರ ಮಂಡನೆಯಾಗಿದೆ. ಬೆಂಗಳೂರು ನಗರ ಜಿಪಂ ಸಭಾಂಗಣದಲ್ಲಿ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್, 2026-27ನೇ ಸಾಲಿನ ಬಜೆಟ್ ಮಂಡಿಸಿದರು. ಇದರಲ್ಲಿ 48.21 ಲಕ್ಷ ರೂ. ಉಳಿತಾಯ ಆಯವ್ಯಯ ಪ್ರಸ್ತುತಪಡಿಸಿದರು.
ಅಂದಾಜು 26 ಲಕ್ಷ ಜನಸಂಖ್ಯೆ ಹೊಂದಿರುವ ಈ ಪಾಲಿಕೆಯಲ್ಲಿ ‘ಬಿ’ ಖಾತಾ ಆಸ್ತಿಗಳನ್ನು ‘ಎ’ ಖಾತೆ ಆಸ್ತಿಗಳನ್ನಾಗಿ ಪರಿವರ್ತಿಸಲು, ನೀರುಗಾಲುವೆ, ರಸ್ತೆ, ಪಾದಚಾರಿ ಮಾರ್ಗ, ಉದ್ಯಾನ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ಆರೋಗ್ಯ, ಶಿಕ್ಷಣ, ಪರಿಸರ ರಕ್ಷಣೆ ಮತ್ತು ಇ-ಆಫೀಸ್ ಜಾರಿ ಸೇರಿ ಇತರ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಸರ್ಕಾರದ ರಾಜಸ್ವ ಅನುದಾನವಾಗಿ 103.97 ಕೋಟಿ ರೂ. ಮತ್ತು 16ನೇ ಕೇಂದ್ರ ಹಣಕಾಸು ಆಯೋಗದ ಅನುದಾನದಡಿ 128.29 ಕೋಟಿ ರೂ. ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ. ಹೊಸದಾಗಿ ನಿರ್ಮಾಣಗೊಳ್ಳುವ ಸ್ಕೈವಾಕ್‌ಗಳಲ್ಲಿ ವಾಣಿಜ್ಯ ಜಾಹೀರಾತುಗಳಿಗೆ ಅವಕಾಶ ನೀಡಲಾಗುವುದು. ವಾಣಿಜ್ಯ ಪ್ರದೇಶಗಳಲ್ಲಿ ರಸ್ತೆಬದಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ನಿರ್ವಹಿಸಲು ‘ಹೊಸ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ’ ಜಾರಿಗೆ ತರುವುದಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.
ಶಾಸಕರಾದ ಸಿ.ಕೆ.ರಾಮಮೂರ್ತಿ, ಎಂ.ಕೃಷ್ಣಪ್ಪ, ಎಂಎಲ್ಸಿ ಟಿ.ಎ.ಶರವಣ, ಸುಧಾಮ ದಾಸ್ ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಸ್ವಂತ ಕಟ್ಟಡ ನಿರ್ಮಾಣಕ್ಕೆ 150 ಕೋಟಿ
ಬನಶಂಕರಿ ದೇವಸ್ಥಾನ ಮುಂಭಾಗ 150 ಕೋಟಿ ರೂ. ವೆಚ್ಚದಲ್ಲಿ ದಕ್ಷಿಣ ಪಾಲಿಕೆಯ ಸ್ವಂತ ಕಟ್ಟಡ ನಿರ್ಮಿಸಲು ಬಜೆಟ್‌ನಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ. 2026-27ನೇ ಸಾಲಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುತ್ತದೆ.
440 ಕೋಟಿ ವೆಚ್ಚದಲ್ಲಿ ಬೃಹತ್ ನೀರುಗಾಲುವೆ ಅಭಿವೃದ್ಧಿ
ವಿಶ್ವ ಬ್ಯಾಂಕ್ ನೆರವಿನೊಂದಿಗೆ 28.50 ಕಿ.ಮಿ. ಉದ್ದದ ಬೃಹತ್ ಮಳೆ ನೀರುಗಾಲುವೆಗಳನ್ನು 440 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. 2026-27ರಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು. 200 ಕೋಟಿ ರೂ. ಮುನ್ಸಿಪಲ್ ಬಾಂಡ್ ಪಡೆಯಲು ಉದ್ದೇಶಿಸಲಾಗಿದೆ. ಈ ಅನುದಾನವನ್ನು ಪಾಲಿಕೆ ವ್ಯಾಪ್ತಿಯಲ್ಲಿ ಮೂಲಸೌಕರ್ಯಕ್ಕೆ ಬಳಸಲಾಗುವುದು. ಬನಶಂಕರಿ ದೇವಸ್ಥಾನ-ಮೆಟ್ರೋ-ಟಿಟಿಎಂಸಿಗಳಲ್ಲಿ ಪಾದಚಾರಿಗಳು ಸುರಕ್ಷಿತವಾಗಿ ಓಡಾಡಲು 32 ಕೋಟಿ ರೂ. ವೆಚ್ಚದಲ್ಲಿ ಸ್ಕೈವಾಕ್ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಪಿಪಿಪಿ ಅಡಿ 18 ಸ್ಕೈವಾಕ್ ಸ್ಥಾಪಿಸಲು ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ.
1,101 ಕೋಟಿ ಆಸ್ತಿತೆರಿಗೆ ನಿರೀಕ್ಷೆ
ಆಸ್ತಿ ತೆರಿಗೆ ಬಾಬ್ತಿನಲ್ಲಿ 1,101 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಆಸ್ತಿಗಳ ತೆರಿಗೆ ಹೆಚ್ಚಿಸದೆ ವೈಜ್ಞಾನಿಕವಾಗಿ ತೆರಿಗೆ ಸಂಗ್ರಹಕ್ಕೆ ಒತ್ತು ಕೊಡಲಾಗಿದೆ. ಕಡಿಮೆ ತೆರಿಗೆ ಘೋಷಿಸಿಕೊಂಡಿರುವ ಪ್ರಕರಣ ಪತ್ತೆ ಮಾಡಿ ಮರು ಮೌಲ್ಯಮಾಪನ ಕೈಗೊಂಡು, ಪರಿಣಾಮಕಾರಿ ಆಸ್ತಿ ನಿರ್ವಹಣೆ ಮೂಲಕ ಆದಾಯ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ‘ಬಿ‘ ಖಾತೆಯ ಆಸ್ತಿಗಳನ್ನು ‘ಎ’ ಖಾತೆಯ ಆಸ್ತಿಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಜಾರಿಯಲ್ಲಿದ್ದು, ಇದರಿಂದ 225 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.
ಸೆಪ್ಟೆಂಬರ್‌ಗೆ ಈಜಿಪುರ ಎಲಿವೇಟೆಡ್ ಪೂರ್ಣ
ಈ ವರ್ಷದ ಸೆಪ್ಟೆಂಬರ್‌ಗೆ ಈಜಿಪುರ ಎಲಿವೇಟೆಡ್ ಕಾರಿಡರ್ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ. ಡೇರಿ ಸರ್ಕಲ್ನಿಂದ ನೈಸ್ ರಸ್ತೆವರೆಗಿನ ಬನ್ನೇರುಘಟ್ಟ ರಸ್ತೆ, ಬನಶಂಕರಿ ದೇವಸ್ಥಾನದಿಂದ ಹೊರವರ್ತುಲ ರಸ್ತೆವರೆಗೆ 20 ಕೋಟಿ ರೂ. ಮತ್ತು ಬೇಗೂರು ಮುಖ್ಯರಸ್ತೆಯಿಂದ ಬೇಗೂರು-ಕೊಪ್ಪ ರಸ್ತೆವರೆಗೆ 40 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಗಲೀಕರಣಕ್ಕೆ ಉದ್ದೇಶಿಸಲಾಗಿದೆ.
ರಸ್ತೆಗಳ ಅಭಿವೃದ್ಧಿಗೆ 433 ಕೋಟಿ ವೆಚ್ಚ
ಪಾಲಿಕೆ ವ್ಯಾಪ್ತಿಯಲ್ಲಿ ಡಾಂಬರೀಕರಣ, ಸುರಕ್ಷಿತ ಪಾದಚಾರಿ ಮಾರ್ಗಗಳು, ಚರಂಡಿ ನಿರ್ಮಾಣ, ಜಂಕ್ಷನ್‌ಗಳ ಅಭಿವೃದ್ದಿ ಒಳಗೊಂಡಂತೆ 433 ಕೋಟಿ ರೂ. ವೆಚ್ಚದಲ್ಲಿ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆ ಹಾಗೂ ವಾರ್ಡ್ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ಪ್ರಗತಿಯಲ್ಲಿದೆ. 72 ವಾರ್ಡ್‌ಗಳ ಅಭಿವೃದ್ದಿ ಮತ್ತು ನಿರ್ವಹಣೆಯ 162 ಕೋಟಿ ರೂ. ಮೀಸಲಿಟ್ಟಿದ್ದೇವೆ. ಮೆಟ್ರೋ ನಿಲ್ದಾಣಗಳಲ್ಲಿ ಸ್ವಯಂಚಾಲಿತ ಕಾರು ಪಾರ್ಕಿಂಗ್ ಒದಗಿಸಲು ಬೆಂಗಳೂರು ಮೆಟ್ರೋ ರೈಲು ನಿಗಮದೊಂದಿಗೆ ಸಮನ್ವಯ ಸಾಧಿಸಲಾಗುತ್ತದೆ.
ಬಜೆಟ್‌ನ ಇತರ ಮುಖ್ಯಾಂಶ
* ಪಾಲಿಕೆಯ ಎಲ್ಲ ಕಚೇರಿಗಳಲ್ಲಿ ಕಾಗದರಹಿತ ಆಡಳಿತ ತರಲು ಇ-ಆಫೀಸ್ ಜಾರಿ
* ಪಾಲಿಕೆ ಆದಾಯ 2,795 ಕೋಟಿ ರೂ., ಕೇಂದ್ರ-ರಾಜ್ಯ ಸರ್ಕಾರದ 927 ಕೋಟಿ ರೂ. ನೆರವು
* ಹೊಸ ಜಾಹೀರಾತು ನೀತಿ ಮೂಲಕ ಆಂದಾಜು 126 ಕೋಟಿ ರೂ. ಆದಾಯ ಸಂಗ್ರಹ
* 5.13 ಲಕ್ಷ ಆಸ್ತಿಗಳ ಪೈಕಿ 1.83 ಲಕ್ಷ ಆಸ್ತಿಗಳಿಗೆ ಇ- ಖಾತಾ ನೀಡಿಕೆ
* ಹೊಸ ಪ್ರೀಮಿಯಂ ನೀತಿಯಿಂದ 360 ಕೋಟಿ ರೂ. ಆದಾಯ ನಿರೀಕ್ಷೆ
* ಕಟ್ಟಡ ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪ್ರಮಾಣಪತ್ರ ವಿತರಿಸುವ ಶುಲ್ಕಗಳ ಮೂಲಕ 382 ಕೋಟಿ ರೂ. ಆದಾಯ ನಿರೀಕ್ಷೆ
* ಜಯನಗರ ಶ್ರೀ ರಾಘವೇಂದ್ರಸ್ವಾಮಿ ದೇವಸ್ಥಾನ ಜಂಕ್ಷನ್, ವೇಗಾ ಸಿಟಿ ಜಂಕ್ಷನ್ ಸೇರಿ ಇತರ ಪ್ರಮುಖ ಜಂಕ್ಷನ್‌ಗಳಲ್ಲಿ ಗ್ರೇಡ್ ಸೆಪರೇಟರ್ ನಿರ್ಮಾಣ
* 25 ಸಾವಿರ ಸಸಿಗಳನ್ನು ನೆಡಲು ಉಪಕ್ರಮ
* ಖಾಸಗಿ ಸಹಭಾಗಿತ್ವದಲ್ಲಿ ರಸ್ತೆ, ಉದ್ಯಾನ, ಪ್ರಮುಖ ವೃತ್ತಗಳಲ್ಲಿ ಕಸಮುಕ್ತ ಸ್ಥಳಗಳನ್ನಾಗಿ ಪರಿವರ್ತಿಸಲು ಕ್ರಮ
* ಘನತ್ಯಾಜ್ಯ ನಿರ್ವಹಣೆ, ಸಂಗ್ರಹಣೆ ಹಾಗೂ ವಿಲೇವಾರಿಗೆ 300 ಕೋಟಿ ರೂ. ಮೀಸಲು
* ಕಲ್ಯಾಣ ಕಾರ್ಯಕ್ರಮಗಳಿಗೆ ಒಟ್ಟು 260 ಕೋಟಿ ರೂ. ನಿಗದಿ.
ಹೈಲೈಟ್ಸ್))
3,826.43 ಕೋಟಿ ರೂ.
ಬಜೆಟ್ ಗಾತ್ರ
3,825.95 ಕೋಟಿ ರೂ.
ಅಂದಾಜು ವೆಚ್ಚ
48.21 ಲಕ್ಷ ರೂ.
ಉಳಿತಾಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net