ಪ್ರಕೃತಿ ಸೊಬಗಿನ ಅಂಕನಹಳ್ಳಿ village natural beauty

ಪ್ರಕೃತಿ ಸೊಬಗಿನ ಅಂಕನಹಳ್ಳಿ village natural beauty
ಪ್ರಕೃತಿ ಸೊಬಗಿನ ಅಂಕನಹಳ್ಳಿ village natural beauty
Published on

ಪ್ರಮುಖ ಮುಖ್ಯಾಂಶಗಳು

  • ಸುತ್ತಲೂ ತೆಂಗು, ಮಾವಿನ ತೋಟ
  • ಜಿಲ್ಲಾ ಕೇಂದ್ರದಿಂದ 9 ಕಿಮೀ ಅಂತರದಲ್ಲಿದೆ ಸುಂದರ ಗ್ರಾಮ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ: ಸುತ್ತಲೂ ಮಾವು, ತೆಂಗಿನ ತೋಟ, ಹಸಿರುಹೊದ್ದ ಎತ್ತರದ ಪ್ರಕೃತಿ ಶ್ರೀಮಂತಿಕೆಯೊಂದಿಗೆ ಜಿಲ್ಲೆಯಲ್ಲಿ ದೊಡ್ಡ ಗ್ರಾಮವಾಗಿ ಗುರುತಿಸಿಕೊಂಡಿರುವುದು ಅಂಕನಹಳ್ಳಿ. village natural beauty
ಜಿಲ್ಲಾ ಕೇಂದ್ರ ರಾಮನಗರದಿಂದ 9 ಕಿಮೀ ಅಂತರದಲ್ಲಿರುವ, ಕೈಲಾಂಚ ಹೋಬಳಿಯ ಅಂಕನಹಳ್ಳಿ ತನ್ನದೇ ಪ್ರಕೃತಿ ಸೊಬಗು ಹೊಂದಿದೆ. ಗ್ರಾಮದಲ್ಲಿ 2 ಸಾವಿರ ಜನಸಂಖ್ಯೆ, ಈ ಪೈಕಿ 1300 ಮತದಾರರಿದ್ದು, ಇಲ್ಲಿ ವ್ಯವಸಾಯವೇ ಪ್ರಧಾನ. ಬಹುತೇಕರು ರೇಷ್ಮೆ, ಮಾವು, ತರಕಾರಿ ಬೆಳೆಯುತ್ತಾರೆ. ಹೈನುಗಾರಿಕೆ ಆದಾಯದ ಮೂಲ.
ಹಳೇ ಗ್ರಾಮ ಈಗಿನ ಊರಿನಿಂದ ಬಹಳ ಹೊರಗೆ ಇತ್ತೆಂದೂ, ಆ ಗ್ರಾಮದ ಜನ ಅಂಕನಹಳ್ಳಿಗೆ ಬರಲಿಲ್ಲವೆಂದು ಹಿರಿಯರು ಹೇಳುತ್ತಾರೆ. ಸದ್ಯ ಅಂಕನಹಳ್ಳಿಯು ಎರಡ್ಮೂರು ತಲೆಮಾರಿನಲ್ಲಷ್ಟೇ ಹೊಸ ಗ್ರಾಮವಾಗಿ ಉದಯವಾಗಿದೆ. ಕೂಟಗಲ್ ಹೊಸೂರಿನಿಂದ ಗಿರೀಗೌಡ ಎಂವಬುವರು ಕುಟುಂಬ ಸಮೇತ ಗ್ರಾಮ ತೊರೆದು ಎತ್ತರದ ಪ್ರದೇಶ ಅಂಕನಹಳ್ಳಿಗೆ ಬಂದು ಸೇರಿ ಮಾರಮ್ಮ ದೇವಾಲಯ ಕಟ್ಟಿಕೊಂಡು ವಾಸಿಸುತ್ತಿದ್ದರು. ನಂತರ ಅವರ ಮಕ್ಕಳಾದ ಕೃಷ್ಣೇಗೌಡ, ನಿಂಗೇಗೌಡ ಎಂಬುವರು ಗ್ರಾಮವನ್ನು ಮತ್ತಷ್ಟು ವಿಸ್ತರಿಸಿದರು. ಬೇರೆ ಬೇರೆ ಗ್ರಾಮಗಳಿಂದ ಜನರು ನೆಲೆನಿಂತ ಪರಿಣಾಮ ಗ್ರಾಮ ದೊಡ್ಡದಾಗಿ ಬೆಳೆದಿದೆ ಎನ್ನಲಾಗುತ್ತಿದೆ. ಅಂಕನಹಳ್ಳಿ ಹೆಸರು ಹೇಗೆ ಬಂದಿದೆ?ಎನ್ನುವುದಕ್ಕೆ ಯಾರ ಬಳಿಯೂ ಸರಿಯಾದ ಉತ್ತರ ಇಲ್ಲ.
ಗ್ರಾಮದಲ್ಲಿ ಅಂಗನವಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, 1ರಿಂದ 7ನೇ ತರಗತಿವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಹೈಕೋರ್ಟ್ ನಿವೃತ್ತ ಜಡ್ಜ್ ಹೊನ್ನಪ್ಪ ಅವರು ಈ ಶಾಲೆಯಲ್ಲೇ ವ್ಯಾಸಂಗ ಮಾಡಿದ್ದರು ಎಂದು ಗ್ರಾಮದವರು ಹೇಳುತ್ತಾರೆ.
ಕೈಹಿಡಿದ ಹೈನುಗಾರಿಕೆ: ತೆಂಗು, ರೇಷ್ಮೆ, ಮಾವು, ರಾಗಿ ಬೆಳೆಯುವ ಪ್ರದೇಶದ ಗ್ರಾಮವಾಗಿರುವ ಅಂಕನಹಳ್ಳಿ ಹೆಚ್ಚಿನ ನೀರಾವರಿ ಸೌಲಭ್ಯವಿಲ್ಲದಿದ್ದರೂ ಬೋರ್‌ವೆಲ್ ಕೊರೆಸಿಕೊಂಡು ರೈತರು ಹೈನುಗಾರಿಕೆ ಮಾಡುತ್ತಾರೆ. ಗ್ರಾಮದಲ್ಲಿ ಹಾಲಿನ ಡೇರಿ, ಹಾಲು ಶೀತಲ ಕೇಂದ್ರವಿದ್ದು, ಪ್ರತಿದಿನ 3,500 ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಜನರ ಜೀವನಾಧಾರಕ್ಕೆ ಹೈನುಗಾರಿಕೆಯೇ ಬೆನ್ನೆಲುಬು. ಇನ್ನು ಮಾವು ಬೆಳೆಯನ್ನು ವಾಣಿಜ್ಯ ಬೆಳೆಯಾಗಿಸಿಕೊಂಡೂ, ಮಾವು ವ್ಯಾಪಾರದಲ್ಲೂ ಮುಂದಡಿ ಇಟ್ಟಿದ್ದಾರೆ. ರೈತರು ತೋಟಗಳ ಜತೆಗೆ ಸುತ್ತಮುತ್ತಲ ಗ್ರಾಮಗಳ ರೈತರ ಮಾವಿನ ತೋಟಗಳನ್ನು ಗುತ್ತಿಗೆ ಪಡೆದು ಮಾವು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ನೆಲಬಾವಿಗಳು ಇಲ್ಲಿನ ವಿಶೇಷ: ಗ್ರಾಮ ಎತ್ತರ ಪ್ರದೇಶವಿರುವುದು ಹಾಗೂ ಕೆರೆಯು ಗ್ರಾಮದಿಂದ ದೂರವಿರುವ ಕಾರಣ ಈ ಹಿಂದೆ ನೀರಿಗೆ ಅಭಾವವಿತ್ತು. ಆಗ ಗ್ರಾಮದಲ್ಲಿ ನೀರಿನ ಬವಣೆ ನೀಗಿಸಿದ್ದು ಇಲ್ಲಿನ ಕಲ್ಲಿನ ನೆಲಬಾವಿಗಳು. ಗ್ರಾಮದಲ್ಲಿ ಹಿಂದೆ 5 ನೆಲಬಾವಿಗಳಿದ್ದವು. ಗ್ರಾಮ ಎತ್ತರ ಪ್ರದೇಶದಲ್ಲಿದ್ದರೂ ವರ್ಷದ ಎಲ್ಲ ದಿನಗಳಲ್ಲೂ ಈ ಬಾವಿಗಳಲ್ಲಿ ನೀರು ಸಿಗುತ್ತಿತ್ತು. ಬೋರ್‌ವೆಲ್‌ಗಳು ಬಂದ ನಂತರ ಐದು ಬಾವಿಗಳಲ್ಲಿ ಎರಡು ಭಾವಿಗಳು ಮಾತ್ರ ಉಳಿದಿದ್ದು, ಮೂರು ಮುಚ್ಚಿಹೋಗಿವೆ. ಎರಡು ಬಾವಿಗಳಲ್ಲಿ ಈಗಲೂ ನೀರಿದೆ. ಗ್ರಾಮದ ಅಂಕನಹಳ್ಳಿ ಕೆರೆ, ಎರಡು ಕಟ್ಟೆಗಳು ಈ ಭಾಗದಲ್ಲಿ ಅಂತರ್ಜಲಮಟ್ಟ ಸುಧಾರಿಸಿವೆ.
ರಂಗೋಲಿ ಬುಟ್ಟಿಯಲ್ಲಿ ಬಂದ ಮಾರಮ್ಮ: ಗಿರೀಗೌಡ ಎಂಬುವರು ಅಂಕನಹಳ್ಳಿ ಸೇರಿದಾಗ ರಂಗೋಲಿ ಬುಟ್ಟಿಯಲ್ಲಿ ಒಂದು ಕಲ್ಲು ಬಂದಿತ್ತು. ಆದರೆ ಗಿರೀಗೌಡ ಅವರು ಕಲ್ಲನ್ನು ಒಂದು ಕಡೆ ಎಸೆದು ಬಂದಿದ್ದರು. ರಾತ್ರಿ ಕನಸಿನಲ್ಲಿ ಕಲ್ಲಿನ ರೂಪದಲ್ಲಿ ಮಾರಮ್ಮ ಬಂದಳಂತೆ. ಕೂಡಲೇ ಎಚ್ಚೆತ್ತ ಗಿರೀಗೌಡ ಕಲ್ಲು ಬಿಸಾಕಿದ ಸ್ಥಳದಲ್ಲಿ ಹುಡುಕಿ ದೇವಾಲಯ ನಿರ್ಮಿಸಿದರು. ಸಣ್ಣದಾಗಿದ್ದ ದೇವರ ಮೂರ್ತಿ(ಕಲ್ಲು) ಬೆಳೆಯುತ್ತಿದೆ ಎನ್ನುತ್ತಾರೆ ಗ್ರಾಮದ ಹಿರಿಕ ಸಿದ್ದರಾಮಣ್ಣ.
ಚೋಳರ ಕಾಲದ ದೇಗುಲಗಳು: ಗ್ರಾಮದಲ್ಲಿ ಮಾರಮ್ಮ, ಈಶ್ವರ, ಬಸವೇಶ್ವರ, ಪಾರ್ವತಮ್ಮ, ಕಬ್ಬಾಳಮ್ಮ, ಶನೇಶ್ವರ, ಮಲೈ ಮಹದೇಶ್ವರ, ಬಸವೇಶ್ವರ, ಚಾಮುಂಡೇಶ್ವರಿ ದೇಗುಲಗಳಿವೆ. ಈಶಾನ್ಯ ಮೂಲೆಯಲ್ಲಿನ ಈಶ್ವರ, ಬಸವೇಶ್ವರ ದೇವಾಲಯಗಳು ಚೋಳರ ಕಾಲದ್ದು ಎಂದು ಹೇಳಲಾಗುತ್ತದೆ. ಮಣ್ಣಿನಲ್ಲಿ ಮುಚ್ಚಿಹೋಗಿದ್ದ ಈಶ್ವರ ಬಸವೇಶ್ವರ ದೇವಾಲಯಗಳನ್ನು ಗ್ರಾಮಸ್ಥರು ಜೀರ್ಣೋದ್ಧಾರಗೊಳಿಸಿದ್ದಾರೆ. ಈ ಸ್ಥಳದಲ್ಲಿ ವೀರಗಲ್ಲು, ಮಾಸ್ತಿಗಲ್ಲುಗಳಿವೆ. 2 ದಶಕಗಳಿಂದ ಬಸವೇಶ್ವರ ಅಗ್ನಿಕೊಂಡವು ರಸ್ತೆ ಸಮಸ್ಯೆಯಿಂದ ನಡೆದಿರಲಿಲ್ಲ. ಈಗ ರಸ್ತೆ ಆಗಿದೆ. ಮುಂದೆ ಹಬ್ಬ ನಡೆಸಲಾಗುವುದು ಎನ್ನುತ್ತಾರೆ ಗ್ರಾಮಸ್ಥರು. ಮಲೈ ಮಹದೇಶ್ವರ ದೇವಾಲಯದಲ್ಲಿ ಪ್ರತಿವರ್ಷ ದೀಪಾವಳಿಯಲ್ಲಿ ಹಾಲರಬಿ ಉತ್ಸವ ವಿಶೇಷವಾಗಿರುತ್ತದೆ. ಲಕ್ಕೋಜನಹಳ್ಳಿ ವೀರಭದ್ರಸ್ವಾಮಿ, ರೇವಣಸಿದ್ದೇಶ್ವರ ರೇಣುಕಾಂಭ ದೇವಿಯ ಉತ್ಸವ ಮೂರ್ತಿ ತಂದು ಉತ್ಸವ ಮಾಡಲಾಗುತ್ತದೆ. ಶನೈಶ್ಚರ ದೇವಾಲಯದಲ್ಲಿ ವರ್ಷಕ್ಕೆ ಒಂದು ಬಾರಿ ಕರಗ ನಡೆಯುತ್ತದೆ. ಗ್ರಾಮ ದೇವರುಗಳ ಹಬ್ಬ ಮಾಡಿದ ಸಂದರ್ಭದಲ್ಲಿ ಮಾರಮ್ಮದೇವಿಗೆ ತಂಬಿಟ್ಟಿನ ಆರತಿ ಬೆಳಗಲಾಗುತ್ತದೆ. ಈ ದೇವರಿಗೆ ಅಗ್ನಿಕೊಂಡ ಇಲ್ಲ.
ಕಾಡು ಪ್ರಾಣಿ ಕಾಟ: ಗ್ರಾಮದ ಪಕ್ಕವೇ ಅರಣ್ಯ ಪ್ರದೇಶಗಳಿದ್ದು, ಚಿರತೆ, ಕರಡಿ, ಕಾಡುಹಂದಿ, ಆಗ್ಗಾಗ ಆನೆಗಳ ಉಪಟಳವಿದೆ. ರಾಗಿ, ಜೋಳದಂತ ಸಲು, ಕುರಿ, ಮೇಕೆ, ಕೋಳಿಯಂತಹ ಸಾಕು ಪ್ರಾಣಿಗಳು ಚಿರತೆ ದಾಳಿಗೆ ಬಳಿಯಾಗುತ್ತಲೇ ಇವೆ.
"

ಅಂಕನಹಳ್ಳಿ ಒಂದಷ್ಟು ಎತ್ತರ ಪ್ರದೇಶದಲ್ಲಿದ್ದು, ಹಚ್ಚ ಹಸಿರಿನ ಮಧ್ಯೆ ಸುಂದರ ಪರಿಸರ ಹೊಂದಿದೆ. ಗ್ರಾಮಸ್ಥರು ದ್ವೇಷ, ಅಸೂಯೆ ಇಲ್ಲದೆ ಸಹಬಾಳ್ವೆ ನಡೆಸುತ್ತಿದ್ದಾರೆ. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲೂ ಗ್ರಾಮ ಮುಂದಿದ್ದು, ಇಲ್ಲಿನ ಜನಿಸಿರುವ ನಾವೇ ಪುಣ್ಯವಂತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net