ಆನೇಕಲ್​ ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೇರಿಸಿ / ANEKAL

ಪ್ರತಿಭಟನೆಯಲ್ಲಿ ತಾಲೂಕು ಸಮಿತಿ ಸದಸ್ಯರಾದ ಜಿ.ಪಿ.ಸುನೀಲ್​, ಹನುಮಯ್ಯ, ಅರ್ಚನಾ, ಪಕ್ಷದ ಸದಸ್ಯರು, ಸಾಮೂಹಿಕ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ತಾಲೂಕು ಸಮಿತಿ ಸದಸ್ಯರಾದ ಜಿ.ಪಿ.ಸುನೀಲ್​, ಹನುಮಯ್ಯ, ಅರ್ಚನಾ, ಪಕ್ಷದ ಸದಸ್ಯರು, ಸಾಮೂಹಿಕ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಭಾಗವಹಿಸಿದ್ದರು.
Published on

ಆನೇಕಲ್​ :

ತಾಲೂಕಿನ ಸುಮಾರು 10 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಸೌಕರ್ಯ ಕಲ್ಪಿಸಬೇಕು. ಆನೇಕಲ್​ನ 100 ಹಾಸಿಗೆಗಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯನ್ನು ತಕ್ಷಣ ಮೇಲ್ದರ್ಜೆಗೇರಿಸಿ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್​ ಪಕ್ಷ (ಮಾರ್ಕ್ಸ್​ವಾದಿ) ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಟಕದ ಮುಖಂಡ ಬಿ.ಎನ್​.ಮಂಜುನಾಥ್​ ಮಾತನಾಡಿ, ತಾಲೂಕು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಜನಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಸರ್ಕಾರಿ ಆರೋಗ್ಯ ಸೇವೆ ವಿಸ್ತರಣೆಯಾಗಿಲ್ಲ. ಸಣ್ಣಪುಟ್ಟ ಚಿಕಿತ್ಸೆಗೂ ಬೆಂಗಳೂರಿಗೆ ತೆರಳಬೇಕಾದ ಪರಿಸ್ಥಿತಿ ಇದೆ. ಇದರಿಂದ ಬಡ, ಮಧ್ಯಮ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆನೇಕಲ್​ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ವೈದ್ಯರು, ನರ್ಸ್​ಗಳು ಹಾಗೂ ತಾಂತ್ರಿಕ ಸಿಬ್ಬಂದಿ ಕೊರತೆಯಿದ್ದು, ರಾತ್ರಿ ವೇಳೆ ಚಿಕಿತ್ಸೆಗಾಗಿ ಬರುವ ಹೊರರೋಗಿಗಳಿಗೆ ಸಮರ್ಪಕ ಸೇವೆ ದೊರೆಯುತ್ತಿಲ್ಲ. ನಿಲ್ಲಿಸಲಾಗಿರುವ ಶಸ್ತ್ರಚಿಕಿತ್ಸೆ ಕೂಡಲೇ ಪುನರಾರಂಭಿಸಬೇಕು. ಇದಕ್ಕಾಗಿ ಅಗತ್ಯ ವೈದ್ಯಕಿಯ ಸಲಕರಣೆ ಹಾಗೂ ಸಿಬ್ಬಂದಿ ಒದಗಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ, ರಕ್ತ ಪರೀಕ್ಷೆ, ವೈದ್ಯಕಿಯ ಪ್ರಮಾಣಪತ್ರ ಸೇರಿ ವಿವಿಧ ಸೇವೆಗಳಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿವೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯಬೇಕಾದ ಔಷಧಗಳನ್ನು ಹೊರಗಡೆ ಬರೆಯುವುದನ್ನು ನಿಲ್ಲಿಸಿ, ಆಸ್ಪತ್ರೆಯಲ್ಲೇ ಲಭ್ಯವಾಗುವಂತೆ ಮಾಡಬೇಕು ಎಂದರು.

ಟೋಕನ್​ ಪಡೆಯಲು ರೋಗಿಗಳು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾಗಿದೆ. ಇದನ್ನು ತಪ್ಪಿಸಲು ಹೆಚ್ಚುವರಿ ಕೌಂಟರ್​ ತೆರೆಯಬೇಕು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಕೌಂಟರ್​ ವ್ಯವಸ್ಥೆ ಕಲ್ಪಿಸಬೇಕು. ಆಸ್ಪತ್ರೆಯಲ್ಲಿ ಡಯಾಲಿಸಿಸ್​ ಸೌಲಭ್ಯ ಆರಂಭಿಸಬೇಕು. ಶೌಚಗೃಹ, ಕುಡಿಯುವ ನೀರು ಹಾಗೂ ಸುರಕ್ಷತಾ ವ್ಯವಸ್ಥೆ ಸುಧಾರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇತ್ತೀಚೆಗೆ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅವಘಡದ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮ ಮತ್ತಷ್ಟು ಬಲಪಡಿಸಬೇಕು. ಸಾರ್ವಜನಿಕರ ಜೀವಕ್ಕೆ ಅಪಾಯವಾಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದರು. ತಾಲೂಕು ಕಾರ್ಯದರ್ಶಿ ಪಿ.ಸುರೇಶ್​, ಡಿ.ಮಹದೇಶ, ಕೆ.ಬಾಲರಾಜ್​ ಸೇರಿ ಹಲವರು ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net