ಜಿಲ್ಲೆಯ ಸಾಹಿತಿಗಳ ಕೃತಿಗಳ ಮೇಲೆ ಬೆಳಕು ಚೆಲ್ಲುವ ‘ಒಳಗಣ್ಣು’
ನಗರದ ರಿಂಗ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಯೋಗ ಶಿಕ್ಷಕಿ ಗಿರಿಜಾ ನಿರ್ವಾಣಿ ಅವರ ಪ್ರಾಯೋಜಕತ್ವದಲ್ಲಿ ಸಮುದ್ರವಳ್ಳಿ ವಾಸು ಅವರ ಒಳಗಣ್ಣು ಕೃತಿ ವಿಶ್ಲೇಷಣೆ ಮತ್ತು ಜಿಲ್ಲಾಮಟ್ಟದ ಕವಿಗೋಷ್ಠಿ ನಡೆಯಿತು. ಕೊಟ್ರೇಶ್ ಎಸ್.ಉಪ್ಪಾರ್, ಎನ್. ಶೈಲಜಾ ಹಾಸನ, ರವಿ ನಾಕಲಗೂಡು ಇತರರಿದ್ದರು.
Published on:
Copied
Follow Us
ಹಾಸನ: ಸಮುದ್ರವಳ್ಳಿ ವಾಸು ಅವರ ಒಳಗಣ್ಣು ಕೃತಿ ಹಾಸನ ಜಿಲ್ಲೆಯ ಹಲವು ಸಾಹಿತಿಗಳ ಕೃತಿಗಳ ಮೇಲೆ ಬೆಳಕು ಚೆಲ್ಲುವುದರ ಜತೆಗೆ ಅಧ್ಯಯನ ಮಾಡಲು ಪ್ರೇರಣೆ ನೀಡುತ್ತದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್ ಹೇಳಿದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಘಟಕ ಹಾಸನ ವತಿಯಿಂದ ನಗರದ ರಿಂಗ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಇತ್ತೀಚೆಗೆ ಕವಯಿತ್ರಿ ಹಾಗೂ ಯೋಗ ಶಿಕ್ಷಕಿ ಗಿರಿಜಾ ನಿರ್ವಾಣಿ ಅವರ ಪ್ರಾಯೋಜಕತ್ವದಲ್ಲಿ ಸಮುದ್ರವಳ್ಳಿ ವಾಸು ಅವರ ಒಳಗಣ್ಣು ಕೃತಿ ವಿಶ್ಲೇಷಣೆ ಮತ್ತು ಜಿಲ್ಲಾಮಟ್ಟದ ಕವಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯನ್ನು ರಾಜ್ಯಮಟ್ಟದಲ್ಲಿ ವಿಸ್ತರಿಸುವ ಹಿನ್ನೆಲೆಯಲ್ಲಿ ವಾಸು ಅವರ ಕೊಡುಗೆ ಅಪಾರವಾಗಿದೆ. ನಾವು ಸಹಜವಾಗಿ ನೂರಾರು ಕೃತಿಗಳನ್ನು ಕಣ್ಣಾಡಿಸುತ್ತೇವೆ, ಓದುತ್ತೇವೆ, ಆದರೆ ದಾಖಲೀಕರಣ ಮಾಡುವುದಿಲ್ಲ. ವಿಮರ್ಶಾತ್ಮಕವಾಗಿ ಅಲ್ಲದಿದ್ದರೂ ಅಭಿಪ್ರಾಯವನ್ನಾದರೂ ದಾಖಲಿಸಿದರೆ ಒಂದೆಡೆ ಆ ಕೃತಿಗಳನ್ನು ಹಿಡಿದಿಡುವಲ್ಲಿ ಸಹಾಯವಾಗುತ್ತದೆ. ಇಂತಹ ಕೆಲಸವನ್ನು ಹತ್ತಾರು ವರ್ಷಗಳಿಂದಲೂ ವಾಸು ಅವರು ತಾವು ಓದಿದಂತಹ ಕೃತಿಗಳ ಕುರಿತು ಚಿಕ್ಕಪುಟ್ಟದಾಗಿ ದಾಖಲೀಕರಣ ಮಾಡಿದ ಸತ್ಫಲವೇ ನಮ್ಮೆಲ್ಲರ ಮುಂದಿರುವ ಒಳಗಣ್ಣು ಕೃತಿ ಎಂದರು.
ಕವಯಿತ್ರಿ ರೇಖಾ ಪ್ರಕಾಶ್ ಒಳಗಣ್ಣು ಕೃತಿ ವಿಶ್ಲೇಷಣೆ ಮಾಡಿ, ಒಳಗಣ್ಣು ಒಟ್ಟು 14 ಅಧ್ಯಾಯಗಳನ್ನು ಗರ್ಭಿಕರಿಸಿಕೊಂಡಿದ್ದು, ಕೃತಿ 48 ಪುಟಗಳ ಪುಟ್ಟ ಕೃತಿಯಾದರೂ ಆಳವಾದ ಜ್ಞಾನಾಭ್ಯಾಸಕ್ಕೆ ಆಹ್ವಾನ ನೀಡುತ್ತದೆ. ಸಮುದ್ರವಳ್ಳಿ ವಾಸು ಅವರ ಹದವಾದ ಭಾಷೆ ಓದುಗನನ್ನು ಆಕರ್ಷಿಸುತ್ತದೆ ಎಂದರು. ಹಿರಿಯ ಸಾಹಿತಿ ಎನ್. ಶೈಲಜಾ ಹಾಸನ, ರವಿ ನಾಕಲಗೂಡು ಮಾತನಾಡಿದರು.