_1786555006105.webp?w=480&auto=format%2Ccompress&fit=max)
_1786555006105.webp?w=480&auto=format%2Ccompress&fit=max)
ಹುಣಸೂರು:
ಕೌಶಲವಿದ್ದಲ್ಲಿ ಮಾತ್ರ ವೃತ್ತಿಯಲ್ಲಿ ಬೆಳವಣಿಗೆ ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಾಳನಾಯಕ ಅಭಿಪ್ರಾಯಪಟ್ಟರು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಅಂಗಸಂಸ್ಥೆ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ವತಿಯಿಂದ ಮಂಗಳವಾರ ನಗರದ ಗುರುಭವನದಲ್ಲಿ ಆಯೋಜಿಸಿದ್ದ ಕೌಶಲ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೃತ್ತಿಪರತೆ ಎಲ್ಲರಿಗೂ ಅಗತ್ಯ. ಅದರಲ್ಲಿ ವೃತ್ತಿ ಕೌಶಲವನ್ನು ಗಳಿಸುವುದು ಇನ್ನಷ್ಟು ಮುಖ್ಯ. ಪ್ರತಿಯೊಂದು ವೃತ್ತಿಯಲ್ಲೂ ಅದರದ್ದೇ ಆದ ಕೌಶಲ ಇರುತ್ತದೆ. ಆಧುನಿಕ ಜಗತ್ತು ನಿಮ್ಮ ಜ್ಞಾನವನ್ನಷ್ಟೇ ಕೋರುವುದಿಲ್ಲ, ಬದಲಾಗಿ ಜ್ಞಾನದೊಂದಿಗೆ ವೃತ್ತಿಪರ ಕೌಶಲಗಳಿಗೆ ಬೇಡಿಕೆ ಇಡುತ್ತದೆ. ಬ್ಯೂಟಿಷಿಯನ್ ವೃತ್ತಿ ಅತ್ಯಂತ ಸೂಕ್ಷ್ಮ ಸಂವೇದನೆ ಹೊಂದಿರುವ ಕ್ಷೇತ್ರ. ಸೌಂದರ್ಯ ನಿರ್ವಹಣೆ ಮಹಿಳೆಯರ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಸುಸ್ಥಿತಿಯಲ್ಲಿಡುವ ಸಾಧನವಾಗಿರುತ್ತದೆ. ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು ಗ್ರಾಹಕರ ಬೇಡಿಕೆಯನ್ನು ಈಡೇರಿಸುವ ಕೌಶಲ ಹೊಂದಿರಬೇಕಾಗುತ್ತದೆ ಎಂದರು.
ಅಂತೆಯೇ ಫ್ಯಾಶನ್ ಡಿಸೈನಿಂಗ್ ಕೂಡ ಬಹಳ ಬೇಡಿಕೆಯ ಮತ್ತು ವಿಸ್ತಾರ ಉದ್ಯೋಗಾವಕಾಶ ಹೊಂದಿರುವ ಕ್ಷೇತ್ರವಾಗಿದ್ದು, ನಿಮ್ಮ ಶ್ರಮ ಮತ್ತು ಕೌಶಲ ಒಂದುಗೂಡಿ ಕಾರ್ಯ ನಿರ್ವಹಿಸಬೇಕಿರುತ್ತದೆ. ವಿವೇಕ ಗ್ರಾಮೀಣ ಜೀವನಾಧಾರ ಸಂಸ್ಥೆ ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ವೃತ್ತಿಪರತೆಯನ್ನು ಹೆಚ್ಚಿಸಲು ಇಂತಹ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ಹಿರಿಯ ವ್ಯವಸ್ಥಾಪಕ ಪಿ.ಡಿ.ನಾಯಕ್ ಮಾತನಾಡಿ, ಕೇಂದ್ರದ ವತಿಯಿಂದ 2021ರಿಂದ ಮಹಿಳೆಯರಿಗೆ ಉಚಿತವಾಗಿ ಬ್ಯೂಟಿಷಿಯನ್ ಮತ್ತು ಫ್ಯಾಷನ್ ಡಿಸೈನಿಂಗ್ ಕೋರ್ಸ್‌ಗಳ ತರಬೇತಿ ನೀಡಲಾಗುತ್ತಿದೆ. ಈವರೆಗೆ ಫ್ಯಾಷನ್ ಡಿಸೈನಿಂಗ್‌ನಲ್ಲಿ 18 ತಂಡಗಳು ಹಾಗೂ ಬ್ಯೂಟಿಷಿಯನ್ ವಿಭಾಗದಲ್ಲಿ 15 ತಂಡಗಳಿಗೆ ತರಬೇತಿ ನೀಡಿ ಅವರ ಸ್ವಾವಲಂಬಿ ಬದುಕಿಗೆ ನೆರವಾಗಿದ್ದೇವೆ. ಪ್ರಸ್ತುತ ತಂಡದಲ್ಲಿ ಫ್ಯಾಷನ್ ಡಿಸೈನಿಂಗ್ ವಿಭಾಗದಲ್ಲಿ 14 ಮಂದಿ ತರಬೇತಿ ಪಡೆದಿದ್ದರೆ, ಬ್ಯೂಟಿಷಿಯನ್ ವಿಭಾಗದಲ್ಲಿ 10 ಮಹಿಳೆಯರು ತರಬೇತಿ ಪಡದಿದ್ದಾರೆ ಎಂದು ಮಾಹಿತಿ ನೀಡಿದರು.
ತರಬೇತಿ ಹೊಂದಿದ ಮಹಿಳೆಯರಿಗೆ ಗಣ್ಯರು ಪ್ರಮಾಣಪತ್ರ ವಿತರಿಸಿದರು. ಕಾರ್ಯಕ್ರಮದಲ್ಲಿ ಮೈಮುಲ್‌ನ ಪ್ರಭಾರ ಸಹಾಯಕ ವ್ಯವಸ್ಥಾಪಕ ಗೌತಮ್, ಪತ್ರಕರ್ತಎಚ್. ಆರ್.ಕೃಷ್ಣಕುಮಾರ್ ಮಾತನಾಡಿದರು. ಕೇಂದ್ರದ ಸಹಾಯಕ ವ್ಯವಸ್ಥಾಪಕ ಕೆ.ರಾಜ, ಸಂಯೋಜಕ ಚಂದ್ರೇಶ್, ಸಿಬ್ಬಂದಿ ಶಿವಕುಮಾರ್, ಮಾದನಾಯಕ, ಪ್ರದೀಪ್, ಉಮಾಶಂಕರ್, ಪಲ್ಲವಿ, ಗೀತಾ ಮತ್ತು ತರಬೇತಿ ಪಡೆದ ಮಹಿಳೆಯರು ಇದ್ದರು.