ಅರ್ಜಿ ಸಲ್ಲಿಸಿರುವವರಿಗೆ ನಿವೇಶನ ಹಂಚಿಕೆ ಮಾಡಿ

ನಿವೇಶನ ಹಂಚಿಕೆ ಮಾಡಬೇಕು ಎಂದು ಎಐಟಿಯುಸಿ ಜಿಲ್ಲಾ ಶಾಖೆ ಆಗ್ರಹಿಸಿದೆ
ನಿವೇಶನ ಹಂಚಿಕೆ ಮಾಡಬೇಕು ಎಂದು ಎಐಟಿಯುಸಿ ಜಿಲ್ಲಾ ಶಾಖೆ ಆಗ್ರಹಿಸಿದೆ
Published on

ಪ್ರಮುಖ ಮುಖ್ಯಾಂಶಗಳು

  • ನಿವೇಶನಕ್ಕಾಗಿ ಗ್ರಾಮ ಪಂಚಾಯಿತಿಗಳಿಗೆ ಅರ್ಜಿ
  • ನಿವೇಶನ ರಹಿತರಿಗೆ ಮೊದಲ ಆದ್ಯತೆ ನೀಡಿ ನಿವೇಶನ ಹಂಚಿಕೆ ಮಾಡಬೇಕು
ಸೋಮವಾರಪೇಟೆ: ಕೊಡಗು ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ನಿವೇಶನಕ್ಕಾಗಿ ಗ್ರಾಮ ಪಂಚಾಯಿತಿಗಳಿಗೆ ಅರ್ಜಿ ಸಲ್ಲಿಸಿರುವ ನಿವೇಶನ ರಹಿತರಿಗೆ ಮೊದಲ ಆದ್ಯತೆ ನೀಡಿ ನಿವೇಶನ ಹಂಚಿಕೆ ಮಾಡಬೇಕು ಎಂದು ನಿವೇಶನ ರಹಿತ ಹೋರಾಟ ಸಮಿತಿ ಹಾಗು ಎಐಟಿಯುಸಿ ಜಿಲ್ಲಾ ಶಾಖೆ ಆಗ್ರಹಿಸಿದೆ.
ಸೂರಿಗಾಗಿ ಸಮರ ಹೆಸರಿನಲ್ಲಿ ಸಮಿತಿಯು 2005ರಿಂದ ಜಿಲ್ಲೆಯ ವಿರಾಜಪೇಟೆ, ಸೋಮವಾರಪೇಟೆ ಹಾಗೂ ಮಡಿಕೇರಿ ತಾಲೂಕುಗಳಲ್ಲಿ ನಿವೇಶನ ರಹಿತ ಆದಿವಾಸಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರು, ಅರಣ್ಯ ಪ್ರದೇಶದ ಹೊಳೆಪೈಸಾರಿ ನಿವಾಸಿಗಳು, ತೋಟದ ಲೈನ್ ಮನೆಗಳಲ್ಲಿ ಹಾಗೂ ಬಾಡಿಗೆ ಮನೆಗಳಲ್ಲಿ ವಾಸಿಸುವ ಕುಟುಂಬಗಳಿಗೆ ನಿವೇಶನ ಮತ್ತು ಮನೆಗಳನ್ನು ಒದಗಿಸಬೇಕೆಂದು ವಿವಿಧ ಹೋರಾಟಗಳನ್ನು ನಡೆಸಿದೆ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸೋಮವಾರಪೇಟೆ ಹೋಬಳಿಯಲ್ಲಿ ಪೈಸಾರಿ ಜಾಗವೇ ಇಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಂದ ತಿಳಿದು ಬಂದಿದೆ. ಸರ್ಕಾರದ ಪೈಸಾರಿ ಜಾಗವನ್ನೆಲ್ಲ ಭೂ ಮಾಲಿಕರು ಒತ್ತುವರಿ ಮಾಡಿಕೊಂಡಿದ್ದಾರೆ. ಕೂಡಲೇ ಸರ್ಕಾರ ಶ್ರೀಮಂತ ಭೂಮಾಲಿಕರು ಒತ್ತುವರಿ ಮಾಡಿಕೊಂಡ ಜಾಗವನ್ನು ತೆರವುಗೊಳಿಸಿ, ನಿವೇಶನ ರಹಿತರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ರೈತರು ಮತ್ತು ಶ್ರಮಜೀವಿಗಳಾದ ಕಾರ್ಮಿಕರು ಭಾರತದ ಬೆನ್ನೆಲಬು. ಆದರೆ ಶ್ರಮಜೀವಿಗಳಿಗೆ ಮೂರು ಮುಕ್ಕಾಲು ಸೆಂಟ್ ನಿವೇಶನ ಪಡೆಯಲು ಈವರೆಗೆ ಸಾಧ್ಯವಾಗಿಲ್ಲ. ಕೂಲಿ ಕಾರ್ಮಿಕರಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ಲೈನ್‌ಮನೆ, ಮುರುಕಲು ಗುಡಿಸಲಿನಲ್ಲೇ ವಾಸ ಮಾಡಬೇಕಿದೆ. ಶಾಸಕರು ಕಾರ್ಮಿಕರ ರಕ್ಷಣೆಗೆ ಬರಬೇಕು. ಪೈಸಾರಿ ಜಾಗದಲ್ಲಿ ಕಾರ್ಮಿಕರಿಗೆ ನಿವೇಶನ ನೀಡಬೇಕು ಎಂದು ಸೋಮಪ್ಪ ಹೇಳಿದರು.
ಕುಂಬೂರಿನಲ್ಲಿ ಕಾರ್ಮಿಕರಿಂದ ನಿವೇಶನಕ್ಕಾಗಿ ಧರಣಿ ನಡೆಯುತ್ತಿದೆ. ಅಲ್ಲಿನ ಕಾರ್ಮಿಕರಿಗೆ ನಿಜವಾದ ಸತ್ಯವನ್ನು ಅಲ್ಲಿನ ಕೆಲ ನಾಯಕರು ಮುಚ್ಚಿಟ್ಟಿದ್ದಾರೆ. ಕಾರ್ಮಿಕರನ್ನು ದಿಕ್ಕುತಪ್ಪಿಸುವ ಕೆಲಸ ಮಾಡಬಾರದು. ಅಯಾಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಮಿಕರಿಗೆ ನಿವೇಶನ ಸಿಗಬೇಕು ಎಂಬುದು ಹಿಂದಿನಿಂದಲೂ ಹೋರಾಟ ನಡೆಯುತ್ತಿದೆ ಎಂದು ಹೇಳಿದರು.
ಎಐಟಿಯುಸಿ ತಾಲೂಕು ಕಾರ್ಯದರ್ಶಿ ಪಿ.ಟಿ.ಸುಂದರ, ನಿರ್ದೇಶಕ ತನಿಯಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net